17 ರ ಹರೆಯದ ಬಾಲಕನನ್ನು 60 ಕ್ಕೂ ಅಧಿಕ ಬಾರಿ ಇರಿದು ಕೊಂದು ಮೃತದೇಹದ ಎದುರು ಕುಣಿದ ಆರೋಪಿ
Screengrab:X/@WaqarHasan1231
ಹೊಸದಿಲ್ಲಿ: ಮಂಗಳವಾರ ರಾತ್ರಿ ದೆಹಲಿಯ ರಸ್ತೆಯೊಂದರಲ್ಲಿ 17 ವರ್ಷದ ಬಾಲಕನೊಬ್ಬನನ್ನು 16 ರ ಹರೆಯದ ಬಾಲಕನೋರ್ವ 60ಕ್ಕೂ ಅಧಿಕ ಬಾರಿ ಇರಿದು ಹತ್ಯೆಗೈದಿದ್ದಾನೆ. ಹತ್ಯೆ ಬಳಿಕ ಮೃತದೇಹದ ಬಳಿ ಆರೋಪಿ ಬಾಲಕ ಕುಣಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂತ್ರಸ್ತ ಬಾಲಕನನ್ನು ಯೂಸುಫ್ ಎಂದು ಗುರುತಿಸಲಾಗಿದೆ. ಆತನ ಬಳಿ ಸಾಕಷ್ಟು ಹಣವಿದೆ ಎಂದು ಭಾವಿಸಿದ್ದ ಆರೋಪಿ, ಬಿರಿಯಾಣಿ ತಿನ್ನಲು ಆತನ ಬಳಿ ಹಣ ಕೇಳಿದ್ದಾನೆ, ಕೊಡದಿದ್ದಕ್ಕೆ ಕೊಂದು ಆತನ ಕಿಸೆಯಿಂದ 350 ರೂ.ಗಳನ್ನು ದೋಚಿದ್ದಾನೆ.
ಕೊಲೆಯ ಹಿಂದಿನ ಉದ್ದೇಶ ದರೋಡೆ ಎಂದು ಪೊಲೀಸರ ತಿಳಿಸಿದ್ದು, ಆರೋಪಿಯು ಮೊದಲು ಸಂತ್ರಸ್ತನ ಕತ್ತು ಹಿಸುಕಿ, ಪ್ರಜ್ಞೆ ತಪ್ಪಿಸಿ, ಬಳಿಕ ಅನೇಕ ಬಾರಿ ಇರಿದಿದ್ದಾನೆ ಎಂದು ಅವರು ಹೇಳಿದ್ದಾರೆ.
ಇಬ್ಬರಿಗೂ ಪರಸ್ಪರ ಪರಿಚಯವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಆರೋಪಿ ಇಕ್ಕಟ್ಟಾದ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವನು ಸತ್ತಿದ್ದಾನೆ ಎಂದು ಖಚಿತಪಡಿಸಿಕೊಳ್ಳಲು ಯೂಸುಫ್ ನ ಕುತ್ತಿಗೆಗೆ ಪದೇ ಪದೇ ಇರಿದಿದ್ದಾನೆ. ಅವನು ಕೆಲವು ಬಾರಿ ತಲೆಯ ಭಾಗಕ್ಕೆ ಕಾಲಿನಿಂದ ಒದ್ದ ಆರೋಪಿ.ಮೃತದೇಹದ ಎದುರು ಕುಣಿಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ, ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಪ್ರಸ್ತುತ ಕೊಲೆ ಆರೋಪ ಎದುರಿಸುತ್ತಿರುವ ಅಪ್ರಾಪ್ತ ಬಾಲಕ ಈ ಹಿಂದೆ 2022ರಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಿಂದಿನ ಕೊಲೆಯೂ ದರೋಡೆ ಉದ್ದೇಶ ಹೊಂದಿತ್ತು ಎಂದು ಅವರು ಹೇಳಿದ್ದಾರೆ.