4 ದಿನದ ಹಸುಳೆಯಿಂದ ಅಂಗಾಂಗ ದಾನ; 8 ಮತ್ತು 10 ತಿಂಗಳ ಮಕ್ಕಳಿಗೆ ಕಸಿ

ಸಾಂದರ್ಭಿಕ ಚಿತ್ರ
ಸೂರತ್: ನಾಲ್ಕು ದಿನಗಳ ಹಸುಳೆಯಿಂದ ಅಂಗಾಂಗಗಳನ್ನು ಬೇರ್ಪಡಿಸಿದ ಸೂರತ್ ವೈದ್ಯರು ಅಂಗಾಂಗ ಕಸಿ ಅಗತ್ಯವಿದ್ದ ಇಬ್ಬರು ಪುಟ್ಟ ಮಕ್ಕಳಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ.
ಪುಟ್ಟ ರೂಪದಲ್ಲಿದ್ದ ಎರಡು ಕಿಡ್ನಿಗಳು, ಎರಡು ಕಣ್ಣುಗಳು, ಲಿವರ್ ಮತ್ತು ಗುಲ್ಮವನ್ನು ಈ ಮಗುವಿನಿಂದ ಬೇರ್ಪಡಿಸಲಾಗಿದೆ. ಕಿಡ್ನಿಗಳನ್ನು ಎಂಟು ತಿಂಗಳ ಒಂದು ಮಗುವಿಗೆ ಅಹ್ಮದಾಬಾದ್ ನ ಇನ್ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸಸ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಕಸಿ ಮಾಡಲಾಗಿದೆ. ಅಂತೆಯೇ ಲಿವರ್ 10 ತಿಂಗಳ ಮಗುವಿಗೆ ಜೀವದಾನವಾಗಿ ಕಸಿ ಮಾಡಲು ಲಭ್ಯವಾಗಿದ್ದು, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲೈರಿ ಸೈನ್ಸಸ್ ಗೆ ಇದನ್ನು ರವಾನಿಸಲಾಗಿದೆ.
ಈ ಹಸುಳೆ ಸೂರತ್ ನ ವಾಲಕ್ ಪಟಿಯಾ ಪ್ರದೇಶದಲ್ಲಿ ಅಕ್ಟೋಬರ್ 13ರಂದು ಜನಿಸಿತ್ತು. ಆದರೆ ಹುಟ್ಟಿದಾಗ ಯಾವುದೇ ಚಲನೆ ಇರಲಿಲ್ಲ ಅಥವಾ ಮಗು ಅಳದಿರುವುದು ಕಳವಳಕ್ಕೆ ಕಾರಣವಾಗಿತ್ತು. ನವಜಾತ ಶಿಶುವನ್ನು ತಕ್ಷಣ ಮಕ್ಕಳ ಆಸ್ಪತ್ರೆಗೆ ಸಾಗಿಸಿ, ವೆಂಟಿಲೇಟರ್ ನಲ್ಲಿ ಇಡಲಾಗಿತ್ತು.
ಆ ಬಳಿಕ ಹೃದಯ ವಿದ್ರಾವಕ ಸುದ್ದಿ ಬಂತು. "ಮಗುವಿನ ಜೀವ ಉಳಿಸುವ ಹಲವು ಪ್ರಯತ್ನಗಳ ಬಳಿಕವೂ ಮಗುವಿನ ಮೆದುಳು ನಿಷ್ಕ್ರಿಯವಾಗಿರುವುದನ್ನು ವೈದ್ಯರು ಘೋಷಿಸಿದರು. ನನಗೆ ಹಾಗೂ ಪತ್ನಿಗೆ ಅಂಗಾಂಗದಾನದ ಬಗ್ಗೆ ಮಾಹಿತಿ ನೀಡಲಾಯಿತು. ದೀಪಾವಳಿಯ ಸಂದರ್ಭದಲ್ಲಿ ಇದು ಹಲವು ಮಕ್ಕಳ ಬಾಳು ಬೆಳಗಲಿ ಎಂಬ ಕಾರಣಕ್ಕೆ ನಾವು ಒಪ್ಪಿದೆವು" ಎಂದು ಶಿಶುವಿನ ತಂದೆ ವಿವರಿಸಿದರು. ಇವರು ವಜ್ರದ ಕುಶಲಕರ್ಮಿಯಾಗಿ ಕೆಲಸ ಮಾಡುತ್ತಿದ್ದಾರೆ.
ಜೀವನದೀಪ ಅಂಗಾಂಗ ಕಸಿ ಪ್ರತಿಷ್ಠಾನದ ವೈದ್ಯರ ಮನವಿಗೆ ದಂಪತಿ ತಲೆದೂಗಿದರು. ಅದರಲ್ಲೂ ಪ್ರಮುಖವಾಗಿ ಶಿಶುವಿನ ಅಜ್ಜಿ ಮೊದಲ ಬಾರಿಗೆ ಅಂಗಾಂಗ ದಾನದ ಅನಿವಾರ್ಯತೆಯನ್ನು ಮನಗಂಡು ಕುಟುಂಬಕ್ಕೆ ಸಲಹೆ ನೀಡಿದ್ದು ವಿಶೇಷ.







