ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿರುವ ಪಿಎಚ್ ಡಿ ಪದವೀಧರ!
Photo: twitter.com/sambad_odisha
ಅಮೃತಸರ: ಪಾಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಸಂದೀಪ್ ಸಿಂಗ್ (39), ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಹಾಗೂ ಪಿಎಚ್ಡಿ ಪದವೀಧರ ಕೂಡಾ. ಆದರೆ ದುರದೃಷ್ಟಕರ ಘಟನೆಯಿಂದ ಅವರು ಉದ್ಯೋಗ ತೊರೆಯಬೇಕಾಯಿತು. ಇದೀಗ ಜೀವನ ನಿರ್ವಹಣೆಗಾಗಿ ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ!
ಹನ್ನೊಂದು ವರ್ಷಗಳಿಂದ ಪಂಜಾಬಿ ವಿವಿಯ ಕಾನೂನು ವಿಭಾಗದಲ್ಲಿ ಗುತ್ತಿಗೆ ಆಧಾರದ ಪ್ರೊಫೆಸರ್ ಆಗಿ ಡಾ.ಸಂದೀಪ್ ಸಿಂಗ್ ಕಾರ್ಯ ನಿರ್ವಹಿಸುತ್ತಿದ್ದರು. ಕಾನೂನು ವಿಷಯದಲ್ಲಿ ಪಿಎಚ್ ಡಿ ಪದವಿ ಹೊಂದಿರುವ ಇವರು ಪಂಜಾಬಿ, ಪತ್ರಿಕೋದ್ಯಮ ಮತ್ತು ರಾಜಕೀಯ ವಿಜ್ಞಾನ ಸೇರಿ ನಾಲ್ಕು ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ ಹಾಗೂ ಕಲಿಕೆ ಮುಂದುವರಿಸಿದ್ದಾರೆ. ವೇತನ ಕಡಿತ ಹಾಗೂ ಅನಿಯತ ವೇತನ ಕಾರಣದಿಂದ ಅವರು ಉದ್ಯೋಗ ತೊರೆದಿದ್ದರು. "ಪದೇ ಪದೇ ವೇತನ ಕಡಿತ ಮತ್ತು ಸಕಾಲಕ್ಕೆ ವೇತನ ನೀಡದ ಕಾರಣದಿಂದ ಜೀವನ ನಿರ್ವಹಣೆ ಕಷ್ಟವಾಗಿ ಉದ್ಯೋಗ ತೊರೆದೆ. ಇದೀಗ ಜೀವನ ಸಾಗಿಸಲು ಹಾಗೂ ಕುಟುಂಬವನ್ನು ಪೋಷಿಸಲು ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ.
ಇವರ ತರಕಾರಿ ಮಾರುವ ತಳ್ಳುಗಾಡಿಯಲ್ಲಿ "ಪಿಎಚ್ ಡಿ ಸಬ್ಜಿವಾಲಾ" ಎಂಬ ಫಲಕವಿದ್ದು, ಪ್ರತಿದಿನ ಮನೆಮನೆಗೆ ತರಕಾರಿ ಮಾರಾಟಕ್ಕಾಗಿ ತೆರಳುತ್ತಾರೆ. ಪ್ರೊಫೆಸರ್ ಆಗಿ ಇದ್ದಾಗ ಸಿಕ್ಕುವ ವೇತನಕ್ಕಿಂತ ಹೆಚ್ಚಿನ ಹಣವನ್ನು ತರಕಾರಿ ಮಾರಾಟ ಮಾಡಿ ಪಡೆಯುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ಇಡೀ ದಿನ ಕೆಲಸ ಮಾಡಿ, ಮನೆಗೆ ಬಂದು ಪರೀಕ್ಷೆಗೆ ತಯಾರಿ ನಡೆಸುತ್ತಾರೆ.
ಅಧ್ಯಾಪನದಿಂದ ದೂರ ಇದ್ದರೂ, ಓದಿನ ಬಗೆಗಿನ ಅವರ ಆಸಕ್ತಿ ಕಡಿಮೆಯಾಗಿಲ್ಲ. ಹಣವನ್ನು ಉಳಿಸಿ, ಮುಂದೊಂದು ದಿನ ಸ್ವಂತ ಟ್ಯೂಷನ್ ಸೆಂಟರ್ ಆರಂಭಿಸುವ ಇರಾದೆ ಅವರದ್ದು.