ಶ್ರೀರಾಮ ಭೂಮಿಗೆ ಇಳಿದು ಬಂದರೆ ನಿರುದ್ಯೋಗ ಮತ್ತು ಹಣದುಬ್ಬರ ಕುರಿತು ಪ್ರಧಾನಿ ಮೋದಿಯನ್ನು ಪ್ರಶ್ನಿಸುತ್ತಾರೆ : ಆರ್ ಜೆ ಡಿ ಸಂಸದ ಮನೋಜ ಝಾ
ಮನೋಜ ಝಾ | Photo: PTI
ಹೊಸದಿಲ್ಲಿ : ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಕುರಿತಂತೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಕಟುವಾಗಿ ಟೀಕಿಸಿದ ಆರ್ ಜೆ ಡಿ ಸಂಸದ ಮನೋಜ ಝಾ ಅವರು, ಕಾರ್ಯಕ್ರಮದ ಬಳಿಕ ಶ್ರೀರಾಮ ಏನಾದರೂ ಭೂಮಿಗೆ ಇಳಿದು ಬಂದರೆ ನಿರುದ್ಯೋಗ ಮತ್ತು ಹಣದುಬ್ಬರದ ಕುರಿತು ಮೋದಿಯವರನ್ನು ಪ್ರಶ್ನಿಸುತ್ತಾರೆ ಎಂದು ಹೇಳಿದರು.
‘‘ನನ್ನ ಧರ್ಮವು ನನ್ನ ವೈಯಕ್ತಿಕ ವಿಷಯವಾಗಿದೆ. ಅದರ ಅನುಚಿತ ಸಾರ್ವಜನಿಕ ಪ್ರದರ್ಶನದಿಂದ ದೇವರು ಕೂಡ ಸಂಕಟ ಪಟ್ಟುಕೊಳ್ಳುತ್ತಾರೆ. ಜ.22ರ ಪ್ರಾಣಪ್ರತಿಷ್ಠೆಯ ಬಳಿಕ ಮರ್ಯಾದಾ ಪುರುಷೋತ್ತಮ ಶ್ರೀರಾಮ ಏನಾದರೂ ಸ್ವಯಂ ಭೂಮಿಗೆ ಇಳಿದು ಬಂದರೆ ಅವರು ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ‘ನನ್ನ ಯುವಜನರಿಗೆ ಉದ್ಯೋಗವೆಲ್ಲಿದೆ ಮತ್ತು ದೇಶದಲ್ಲೇಕೆ ಇಷ್ಟೊಂದು ಹಣದುಬ್ಬರವಿದೆ ’ ಎಂದು ಅವರು ಪ್ರಶ್ನಿಸುತ್ತಾರೆ ಎಂದು ಝಾರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಸೋಮವಾರ ಲಾಲುಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಆರ್ ಜೆ ಡಿ ನಾಯಕ ತೇಜಸ್ವಿ ಪ್ರತಾಪ್ ಯಾದವ್ಅವರು, ಲೋಕಸಭಾ ಚುನಾವಣೆಗಳಲ್ಲಿ ಇಂಡಿಯಾ ಮೈತ್ರಿಕೂಟವು ಗೆದ್ದರೆ ಮಾತ್ರ ಶ್ರೀರಾಮ ತನ್ನ ಮನೆಗೆ ಆಗಮಿಸುತ್ತಾರೆ ಎಂದು ಹೇಳಿದರು.
ಯಾದವ ಹೇಳಿಕೆಗಾಗಿ ಬಿಜೆಪಿ ಅವರನ್ನು ತರಾಟೆಗೆತ್ತಿಕೊಂಡಿದೆ. ಇಂಡಿಯಾ ಮೈತ್ರಿಕೂಟದ ಈ ಜನರು ನಿರಂತರವಾಗಿ ಸನಾತನದ ಮೇಲೆ ದಾಳಿ ನಡೆಸುತ್ತಿದ್ದಾರೆ ಮತ್ತು ಹಿಂದು ಧರ್ಮವನ್ನು ಅವಮಾನಿಸುತ್ತಿದ್ದಾರೆ. ಕ್ರಿಶ್ಚಿಯನ್ ಅಥವಾ ಇಸ್ಲಾಮ್ ಧರ್ಮದ ಬಗ್ಗೆ ಏನನ್ನೂ ಹೇಳಲು ಅವರು ಧೈರ್ಯ ಮಾಡುತ್ತಿಲ್ಲ. ತಮಗೆ ತೋಚಿದ್ದನ್ನು ಅವರು ಹೇಳುತ್ತಾರೆ. ಇಂದು ದೇಶದ ಕೋಟ್ಯಂತರ ಜನರು ರಾಮಮಂದಿರಕ್ಕೆ ತೆರಳಲು ಸಜ್ಜಾಗುತ್ತಿರುವಾಗ ದೇವಸ್ಥಾನವನ್ನು ಗುಲಾಮಗಿರಿಯ ಸಂಕೇತ ಎಂದು ಕರೆಯುವುದು ತಪ್ಪು. ದೇವಸ್ಥಾನವು ಈ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಸಾಂಸ್ಕೃತಿಕ ಗುಲಾಮಗಿರಿಯಿಂದ ಸ್ವಾತಂತ್ರ್ಯದ ಸಂಕೇತವಾಗಿದೆ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದರು.