ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಖಂಡಿಸಿ ಪ್ರತಿಭಟನೆ; ರಾಜಸ್ಥಾನ ಬಂದ್ಗೆ ಕರೆ
Photo credit: ANI
ಜೈಪುರ: ಮಂಗಳವಾರ ನಡೆದಿದ್ದ ಶ್ರೀ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿಯ ಹತ್ಯೆಯನ್ನು ಪ್ರತಿಭಟಿಸಿ, ಶ್ರೀ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಹಾಗೂ ಇನ್ನಿತರ ಸಂಘಟನೆಗಳು ಬುಧವಾರ ರಾಜಸ್ಥಾನ ಬಂದ್ ಗೆ ಕರೆ ನೀಡಿವೆ ಎಂದು indiatoday.in ವರದಿ ಮಾಡಿದೆ.
ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಜಪೂತ ಸಮುದಾಯ ಆಗ್ರಹಿಸಿದೆ.
ರಜಪೂತ ಸಮುದಾಯದ ಸದಸ್ಯರು ಜೈಪುರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕರ್ಣಿ ಸೇನಾದ ಸಂಸ್ಥಾಪಕ ಲೋಕೇಂದ್ರ ಸಿಂಗ್ ಕಲ್ವಿ ಅವರ ಪುತ್ರ ಭವಾನಿ ಸಿಂಗ್ ಕಲ್ವಿ ಈ ಕುರಿತು ಪ್ರತಿಕ್ರಿಯಿಸಿ, “ಸುಖದೇವ್ ಸಿಂಗ್ ಗೊಗಮೇಡಿ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದರು. ಈ ಥರದ್ದೇನಾದರೂ ನಡೆಯಬಹುದು ಎಂಬ ಬಗ್ಗೆ ಜಿಲ್ಲಾಡಳಿತದ ಬಳಿಯೂ ಕೆಲವು ಪತ್ರಗಳು ಹಾಗೂ ಪುರಾವೆಗಳಿದ್ದವು. ಹೀಗಿದ್ದೂ ಅವರಿಗೆ ಯಾಕೆ ಭದ್ರತೆಯನ್ನು ಒದಗಿಸಲಾಗಲಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ” ಎಂದು ಹೇಳಿದ್ದಾರೆ.
ಗೊಗಮೇಡಿ ಹತ್ಯೆಯ ಕುರಿತು ಪ್ರತಿಕ್ರಿಯಿಸಿರುವ ನೂತನವಾಗಿ ಚುನಾಯಿತಗೊಂಡಿರುವ ಬಿಜೆಪಿ ಶಾಸಕಿ ದಿಯಾ ಕುಮಾರಿ, “ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿಯವರ ಹತ್ಯೆಯು ಆಘಾತಕಾರಿಯಾಗಿದೆ. ಅವರು ತಮಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅವರಿಗೆ ಭದ್ರತೆ ಒದಗಿಸಲು ವಿಫಲವಾಗಿತ್ತು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಕಂಬನಿ ಮಿಡಿದಿದ್ದಾರೆ.
ಮಂಗಳವಾರ ಗೊಗಮೇಡಿಯನ್ನು ಅವರ ನಿವಾಸದ ವಾಸಿಸುವ ಕೋಣೆಯಲ್ಲಿ ಮೂವರು ಹಂತಕರು ಗುಂಡಿಟ್ಟು ಹತ್ಯೆಗೈದಿದ್ದರು.
ಗೊಗಮೇಡಿಯನ್ನು ಗುಂಡಿಟ್ಟು ಹತ್ಯೆಗೈದ ಇಬ್ಬರ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು ಬುಧವಾರ ಪೊಲೀಸರು ಹೇಳಿದ್ದಾರೆ. ಆರೋಪಿಗಳನ್ನು ಕ್ರಮವಾಗಿ ಮಕ್ರನ ನಗೌರ್ ನ ನಿವಾಸಿ ರೋಹಿತ್ ರಾಥೋಡ್ ಹಾಗೂ ಹರ್ಯಾಣದ ಮಹೇಂದ್ರಗಾಥ್ ನ ನಿವಾಸಿ ನಿತಿನ್ ಫೌಜಿ ಎಂದು ಗುರುತಿಸಲಾಗಿದೆ.