ಉತ್ತರಪ್ರದೇಶದಲ್ಲಿ ಮನುಷ್ಯನ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ತೋಳಗಳು!; ತಜ್ಞರು ಹೇಳುವುದೇನು?
Photo: ANI
ಬಹ್ರೈಚ್: ಉತ್ತರಪ್ರದೇಶದ ಬಹ್ರೈಚ್ನಲ್ಲಿ ತೋಳಗಳು ಮನುಷ್ಯರ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಿದ್ದು, ತೋಳಗಳು ಮನುಷ್ಯನ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಮಾರ್ಚ್ನಿಂದ ಬಹ್ರೈಚ್ನಲ್ಲಿ ಮಕ್ಕಳು ಸೇರಿದಂತೆ ಮನುಷ್ಯರ ಮೇಲೆ ತೋಳಗಳ ದಾಳಿಗಳು ನಡೆಸುತ್ತಿವೆ. ಆದರೆ ಮಳೆಗಾಲದಲ್ಲಿ ಅವುಗಳ ಸಂಖ್ಯೆಯಲ್ಲಿ ಹೆಚ್ಚಾಗಿವೆ. ಸೆ.2ರವರೆಗೆ, ತೋಳಗಳ ದಾಳಿಯಲ್ಲಿ 7 ಮಕ್ಕಳು ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ ಮತ್ತು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಸುಮಾರು 36 ಜನರು ಗಾಯಗೊಂಡಿದ್ದಾರೆ.
ಭಾರತೀಯ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಮತ್ತು ಬಹ್ರೈಚ್ ಜಿಲ್ಲೆಯ ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ ಮಾಜಿ ಅರಣ್ಯ ಅಧಿಕಾರಿ ಜ್ಞಾನ್ ಪ್ರಕಾಶ್ ಸಿಂಗ್ ಈ ಕುರಿತು ಮಾತನಾಡಿದ್ದು, ತೋಳಗಳು ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ ಎಂದು ಹೇಳಿದ್ದಾರೆ.
ನನ್ನ ಅನುಭವದ ಆಧಾರದ ಮೇಲೆ, ತೋಳಗಳು ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ ಎಂದು ಹೇಳಬಲ್ಲೆ. ಹಿಂದೆ ಮಾನವರು ತೋಳಗಳ ಮರಿಗಳಿಗೆ ಕೆಲವು ರೀತಿಯ ಹಾನಿಯನ್ನುಂಟುಮಾಡಿರಬೇಕು, ಇದರಿಂದಾಗಿ ಈ ದಾಳಿಗಳು ಪ್ರತೀಕಾರವಾಗಿ ನಡೆಯುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.
ಸುಮಾರು 25 ವರ್ಷಗಳ ಹಿಂದೆ, ಉತ್ತರ ಪ್ರದೇಶದ ಜೌನ್ಪುರ ಮತ್ತು ಪ್ರತಾಪ್ಗಢ ಜಿಲ್ಲೆಗಳ ಸಾಯಿ ನದಿಯ ಜಲಾನಯನ ಪ್ರದೇಶದಲ್ಲಿ ತೋಳಗಳು 50ಕ್ಕೂ ಹೆಚ್ಚು ಮಕ್ಕಳನ್ನು ಕೊಂದಿದ್ದವು . ಈ ಕುರಿತು ತನಿಖೆ ನಡೆಸಿದಾಗ ಕೆಲವು ಮಕ್ಕಳು ಎರಡು ತೋಳ ಮರಿಗಳನ್ನು ಗುಹೆಯಲ್ಲಿ ಕೊಂದಿದ್ದಾರೆ. ಇದರಿಂದ ತೋಳಗಳು ಆಕ್ರೋಶಗೊಂಡು ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಾನವನ ಮೇಲೆ ಆಕ್ರಮಣವನ್ನು ಮಾಡಲು ಪ್ರಾರಂಭಿಸಿದೆ. ಇದಾದ ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕೆಲವು ತೋಳಗಳನ್ನು ಸೆರೆಹಿಡಿದಿದ್ದು, ಕೆಲವು ತೋಳಗಳು ತಪ್ಪಿಸುವಲ್ಲಿ ಯಶಸ್ವಿಯಾಗಿದೆ. ಅಂತಿಮವಾಗಿ ತಪ್ಪಿಸಿಕೊಂಡ ತೋಳಗಳನ್ನು ಗುರುತಿಸಿ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.
ಇಂತದ್ದೇ ಘಟನೆಯೊಂದು ಬಹ್ರೈಚ್ನಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದಿದೆ. ಎರಡು ತೋಳದ ಮರಿಗಳು ಟ್ರ್ಯಾಕ್ಟರ್ನ ಚಕ್ರದಡಿಯಲ್ಲಿ ಸಿಲುಕಿ ಮೃತಪಟ್ಟಿದ್ದವು. ಇದರಿಂದ ಕೋಪಗೊಂಡ ತೋಳಗಳು ಸ್ಥಳೀಯ ನಿವಾಸಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿತ್ತು. ಆಗ ತೋಗಳನ್ನು ಹಿಡಿದು 40 ಕಿಮೀ ದೂರದಲ್ಲಿರುವ ಚಾಕಿಯಾ ಅರಣ್ಯದಲ್ಲಿ ಬಿಡಲಾಯಿತು. ಚಾಕಿಯಾ ಅರಣ್ಯವು ತೋಳಗಳ ನೈಸರ್ಗಿಕ ವಾಸಯೋಗ್ಯ ಸ್ಥಾನವಲ್ಲ. ಆದ್ದರಿಂದ ತೋಳಗಳು ಮತ್ತೆ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬಹ್ರೈಚ್ನ ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಸಿಂಹಗಳು ಮತ್ತು ಚಿರತೆಗಳು ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ, ಆದರೆ ತೋಳಗಳು ಇಂತಹ ಸೇಡು ತೀರಿಸಿಕೊಳ್ಳುವ ಗುಣವನ್ನು ಹೊಂದಿದೆ ಎಂದು ಹೇಳಿದ್ದಾರೆ.