ದಿಲ್ಲಿ ಹಿಂಸಾಚಾರ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ರಾಜೀನಾಮೆ
ಅಮಿತ್ ಪ್ರಸಾದ್ (Photo:Linkedin)
ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ 2020ರಲ್ಲಿ ನಡೆದ ಕೋಮು ಗಲಭೆ ಪ್ರಕರಣಗಳಲ್ಲಿ ದಿಲ್ಲಿ ಪೊಲೀಸರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸೆಕ್ಸೇನಾ ಅವರಿಗೆ ಡಿಸೆಂಬರ್ 15ರಂದು ಪತ್ರ ಬರೆದಿರುವ ಪ್ರಸಾದ್, ತಾವು ಕಳೆದ 3 ವರ್ಷ 5 ತಿಂಗಳು ಅವಧಿಯಲ್ಲಿ ಈ ಹಿಂಸಾಚಾರ ಕುರಿತ ಪ್ರಕರಣಗಳನ್ನು ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ನಿಭಾಯಿಸಿರುವುದಾಗಿ ಹೇಳಿದ್ದಾರಲ್ಲದೆ ಇನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮುಂದುವರಿಯಲು ತಮಗೆ ಸಾಧ್ಯವಾಗದು ಎಂದಿದ್ದಾರೆ.
ತಾನು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ. ಇದನ್ನು ಅಂಗೀಕರಿಸಬೇಕೆಂದೂ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಅವರ ಪತ್ರದ ಪ್ರತಿಯನ್ನು ದಿಲ್ಲಿ ಹಿಂಸಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರುಗಳಾದ ಸಮೀರ್ ಬಾಜಪೇಯಿ ಹಾಗೂ ಪುಲಸ್ತ್ಯ ಪ್ರಮಚಲ ಅವರಿಗೆ ಸಲ್ಲಿಸಲಾಗಿದೆ.
ಪ್ರಸಾದ್ ಅವರನ್ನು ಶ್ರಧ್ಧಾ ವಾಕರ್ ಪ್ರಕರಣದ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿಯೂ ನೇಮಿಸಲಾಗಿದ್ದು ಆ ಹುದ್ದೆಯಲ್ಲಿ ಅವರು ಮುಂದುವರಿಯಲಿದ್ದಾರೆ.