ವನ್ಯಜೀವಿ ಪ್ರದೇಶಗಳಲ್ಲಿನ ಬೀದಿ ನಾಯಿಗಳ ಜನನ ನಿಯಂತ್ರಣಕ್ಕೆ ಶೀಘ್ರ ಅನುಮೋದನೆ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಸಂರಕ್ಷಿತ ಪ್ರದೇಶಗಳು ಹಾಗೂ ಅರಣ್ಯಗಳಲ್ಲಿನ ವನ್ಯಜೀವಿಗಳಿಗೆ ಕಾಡು ನಾಯಿಗಳು, ಬೀದಿ ನಾಯಿಗಳು ಹಾಗೂ ದೇಶೀ ನಾಯಿಗಳಿಂದ ಎದುರಾಗುತ್ತಿರುವ ಅಪಾಯವನ್ನು ತಪ್ಪಿಸಲು ಶೀಘ್ರವೇ ಅವುಗಳ ಜನನ ನಿಯಂತ್ರಣ ನಿಯಮಗಳಿಗೆ ಅನುಮೋದನೆ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಈ ವಿಷಯವನ್ನು ಇನ್ನು ನಾಲ್ಕು ವಾರಗಳೊಳಗೆ ಬಗೆಹರಿಸಬೇಕು ಎಂದೂ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಈ ಕುರಿತು ತುರ್ತಾಗಿ ತೀರ್ಮಾನ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ನ್ಯಾ. ಸುಧಾಂಶು ಧುಲಿಯ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾರನ್ನು ಒಳಗೊಂಡಿದ್ದ ನ್ಯಾಯಪೀಠ ಅಭಿಪ್ರಾಯ ಪಟ್ಟಿತು. ಬೀದಿ ನಾಯಿಗಳು ಹಾಗೂ ಕಾಡು ನಾಯಿಗಳಿಂದ ದಾಳಿಗೊಳಗಾಗುತ್ತಿರುವ ಅಥವಾ ಬೇಟೆಗೀಡಾಗುತ್ತಿರುವ ಸಂರಕ್ಷಿತ ಪ್ರದೇಶಗಳು ಹಾಗೂ ಅರಣ್ಯಗಳಲ್ಲಿನ ವನ್ಯಜೀವಿಗಳು, ನಿರ್ದಿಷ್ಟವಾಗಿ ಕಾಡು ಕೋಳಿಗಳಂಥ ಪ್ರಭೇದಗಳ ಸಂರಕ್ಷಣೆಯತ್ತ ಗಮನ ಹರಿಸಲು ನ್ಯಾಯಾಲಯ ಆದೇಶ ಹೊರಡಿಸಬೇಕು ಅಥವಾ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಪರಿಸರವಾದಿ ಗುಂಪೊಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಬೀದಿ ನಾಯಿಗಳ ಕುರಿತು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿಯು ಮಾರ್ಗಸೂಚಿಗಳನ್ನು ಅಭಿವೃದ್ಧಿ ಪಡಿಸಿದ್ದರೂ, ಏರಿಕೆಯಾಗುತ್ತಿರುವ ಬೀದಿ ನಾಯಿಗಳ ಉಪಟಳವನ್ನು ತಡೆಯಲು ಈ ಮಾರ್ಗಸೂಚಿಗಳಲ್ಲಿ ಯಾವುದೇ ಅವಕಾಶಗಳಿಲ್ಲ ಎಂದು ಅರ್ಜಿದಾರರು ವಾದಿಸಿದರು. ಇದಕ್ಕೂ ಮುನ್ನ, ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿಗೆ ಈ ಸಂಬಂಧ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿತ್ತು. ಆ ಮನವಿ ಕುರಿತು ಪರಾಮರ್ಶೆ ಇನ್ನೂ ಬಾಕಿ ಇದೆ.
ವಿಚಾರಣೆಯ ಸಂದರ್ಭದಲ್ಲಿ ಮಂಡಳಿ, ಅರ್ಜಿದಾರರು ಹಾಗೂ ಕೇಂದ್ರ ಸರಕಾರದ ನಡುವಿನ ಜಂಟಿ ಪ್ರಸ್ತಾವನೆಗೆ ಸಹಮತ ಮೂಡಿದೆ. ಈ ಪ್ರಸ್ತಾವನೆಯು ಈಗಾಗಲೇ ಅಸ್ತಿತ್ವದಲ್ಲಿರುವ ನಿಯಮಗಳಿಗೆ ಒಳಪಟ್ಟಿರುವ ನಾಯಿಗಳ ಜನನ ನಿಯಂತ್ರಣದ ಸುತ್ತ ಕೇಂದ್ರೀಕೃತಗೊಂಡಿದೆ. ಆದರೆ, ಈ ನಿಯಮಗಳಿಗೆ ಭಾರತ ಸರಕಾರದ ಸಂಬಂಧಿತ ಸಚಿವಾಲಯದ ಅನುಮೋದನೆ ಇನ್ನೂ ಬಾಕಿಯಿದೆ ಎಂದು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿಯ ಪರ ಹಾಜರಿದ್ದ ಹಿರಿಯ ವಕೀಲ ಮನೀಶಾ ಕಾರಿಯ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಆದರೆ, ಈ ನಾಯಿಗಳು ವಿವಿಧ ಪ್ರದೇಶಗಳು ಕಂಡು ಬರುತ್ತಿವೆ ಎಂದು ನ್ಯಾ. ಸುಧಾಂಶು ಧುಲಿಯ ಹಾಗೂ ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಅಭಿಪ್ರಾಯ ಪಟ್ಟರು. “ಅವು ಎಲ್ಲ ಕಡೆಯೂ ಕಂಡು ಬರುತ್ತಿವೆ” ಎಂದು ನ್ಯಾ. ಧುಲಿಯ ಹೇಳಿದರೆ, “ಅವು ವ್ಯಗ್ರ ನಾಯಿಗಳ ಗುಂಪಿನಂತೆ ಕಂಡು ಬರುತ್ತವೆ” ಎಂದು ನ್ಯಾ. ಅಮಾನುಲ್ಲಾ ಅಭಿಪ್ರಾಯಪಟ್ಟರು.