ಪರಿಸರ-ಆರ್ಥಿಕತೆ ನಡುವೆ ಕಟ್ಟುನಿಟ್ಟಿನ ಸಮತೋಲನ ಕಾಪಾಡಿಕೊಳ್ಳಬೇಕಿದೆ: ಸಿಎಂ ಧಾಮಿ
ಸಿಲ್ಕ್ಯಾರ ದುರ್ಘಟನೆ ಕಲಿಸಿದ ಪಾಠ
![ಪರಿಸರ-ಆರ್ಥಿಕತೆ ನಡುವೆ ಕಟ್ಟುನಿಟ್ಟಿನ ಸಮತೋಲನ ಕಾಪಾಡಿಕೊಳ್ಳಬೇಕಿದೆ: ಸಿಎಂ ಧಾಮಿ ಪರಿಸರ-ಆರ್ಥಿಕತೆ ನಡುವೆ ಕಟ್ಟುನಿಟ್ಟಿನ ಸಮತೋಲನ ಕಾಪಾಡಿಕೊಳ್ಳಬೇಕಿದೆ: ಸಿಎಂ ಧಾಮಿ](https://www.varthabharati.in/h-upload/2023/11/29/1218206-whatsapp-image-2023-11-29-at-91513-pm.webp)
ಪುಷ್ಕರ್ ಸಿಂಗ್ ಧಾಮಿ | Photo: NDTV
ಉತ್ತರಕಾಶಿ: ಸಿಲ್ಕ್ಯಾರಾ ಸುರಂಗಮಾರ್ಗ ಕುಸಿತದ ಘಟನೆಯ ಬಳಿಕ, ಅಂತಹ ಎಲ್ಲಾ ಯೋಜನೆಗಳ ಮರುಪರಿಶೀಲನೆ ನಡೆಸಲು ತನ್ನ ಸರಕಾರ ನಿರ್ಧರಿಸಿದೆಯೆಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ತಿಳಿಸಿದ್ದಾರೆ. ಪರಿಸರ ಹಾಗೂ ಆರ್ಥಿಕತೆಯ ನಡುವೆ ಕಟ್ಟುನಿಟ್ಟಾದ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘‘ಸುಮಾರು 17 ದಿನಗಳ ಕಾಲ ಸುರಂಗಮಾರ್ಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ತೆರವುಗೊಳಿಸುವುದರೊಂದಿಗೆ ನನಗೆ ನಿಜವಾದ ದೀಪಾವಳಿ ಹಬ್ಬ ಬಂದಂತಾಗಿದೆ ’’ ಎಂದವರು ಹೇಳಿದರು.
ಈ ಕಾರ್ಮಿಕರೆಲ್ಲರೂ ನಮಗೆ, ನಮ್ಮ ದೇಶಕ್ಕಾಗಿ ದುಡಿದವರಾಗಿದ್ದಾರೆ. ಮುಖ್ಯಮಂತ್ರಿಯಾಗಿ ನನ್ನ ಅಧಿಕಾರಾವಧಿಯಲ್ಲಿ ನಾನು ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ಆದರೆ ಇದು ಮಾತ್ರ ಅತ್ಯಂತ ಕಠಿಣವಾದ ಸನ್ನಿವೇಶವಾಗಿತ್ತು ಎಂದು ಧಾಮಿ ಸುರಂಗಮಾರ್ಗದಲ್ಲಿಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಉಲ್ಲೇಖಿಸುತ್ತಾ ಹೇಳಿದರು.
ಪ್ರಧಾನಿಯವರು ಸುರಂಗಮಾರ್ಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲು ನಡೆಯುತ್ತಿದ್ದ ಕಾರ್ಯಾಚರಣೆಯ ಮೇಲೆ ನಿರಂತರವಾದ ನಿಗಾವಿರಿಸಿದ್ದುದು ಹಾಗೂ ರಕ್ಷಣಾ ಕಾರ್ಯಾಚರಣೆಗೆ ಬೃಹತ್ ಗಾತ್ರದ ಯಂತ್ರವನ್ನು ಒದಗಿಸುವ ಮೂಲಕ ಬೆಂಬಲ ನೀಡಿದ್ದುದು ತನಗೆ ಅಗಾಧವಾದ ಶಕ್ತಿಯನ್ನು ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸುರಂಗಮಾರ್ಗದಲ್ಲಿ ಸಿಲುಕಿದ ಕಾರ್ಮಿರ ಅಪಾರ ತಾಳ್ಮೆ, ಸಂಯಮವನ್ನು ಕೂಡಾ ಧಾಮಿ ಕೊಂಡಾಡಿದರು.
ಸಿಲ್ಕ್ಯಾರಾ ಸುರಂಗ ಮಾರ್ಗದಂತಹ ಹಲವಾರು ಯೋಜನೆಗಳು ರಾಜ್ಯದಲ್ಲಿವೆ. ಈಗ ಅವೆಲ್ಲವನ್ನೂ ಮರುಪರಿಶೀಲಿಸಲು ರಾಜ್ಯ ಸರಕಾರ ನಿರ್ಧರಿಸಿದೆಯೆಂದು ಅವರು ಹೇಳಿದರು. ಪರಿಸರ ಹಾಗೂ ಆರ್ಥಿಕತೆಯ ನಡುವೆ ದೃಢವಾದಗ ಸಮತೋಲನವನ್ನು ಕಾಪಾಡುವ ಅಗತವಿದೆಯೆಂದು ಅವರು ಹೇಳಿದರು.