ಆಕ್ರಮ ಬೆಟ್ಟಿಂಗ್ ಆ್ಯಪ್ಗಳ ಹಾವಳಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ: ಅಕ್ರಮ ಬೆಟ್ಟಿಂಗ್ ಆ್ಯಪ್ಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ. ಆನ್ಲೈನ್ ಗೇಮಿಂಗ್ ಹಾಗೂ ಫ್ಯಾಂಟಸಿ ಸ್ಫೋರ್ಟ್ಸ್ಗಳ ಮೇಲೆ ಕಠಿಣ ನಿಯಂತ್ರಣವನ್ನು ವಿಧಿಸುವಂತೆ ಹಾಗೂ ಈ ಬಗ್ಗೆ ಸಮಗ್ರ ಕಾನೂನೊಂದನ್ನು ಜಾರಿಗೆ ತರುವಂತೆಯೂ ಅದು ಆಗ್ರಹಿಸಿದೆ.
ಅನ್ಲೈನ್ ಬೆಟ್ಟಿಂಗ್ ಹಾಗೂ ಜೂಜಾಟದ ಆ್ಯಪ್ಗಳ ವ್ಯಸನದಿಂದ ಹಲವು ಮಂದಿ ಸಾವನ್ನಪ್ಪಿದ್ದು, ಇವುಗಳ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆಯೂ ಕೇಂದ್ರ ಸರಕಾರಕ್ಕೆ ನ್ಯಾಯಪೀಠವು ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಎನ್.ಕೆ.ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ಈ ಬಗ್ಗೆ ನೋಟಿಸ್ ಜಾರಿಗೊಳಿಸಿದೆ. ಆದರೆ ಪ್ರಸಕ್ತ ಹಂತದಲ್ಲಿ ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸದಿರಲು ನಿರ್ಧರಿಸಿದೆ.
ಕೋಟ್ಯಂತರ ಜನರ ಹಿತದೃಷ್ಟಿಯಿಂದ ಅಕ್ರಮ ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇಧಿಸುವ ಮೂಲಕ ಭಾರತದ ಘನತೆ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸುತ್ತಿರುವುದಾಗಿ ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥೆಯ ಅಧ್ಯಕ್ಷರಾದ ಕೆ.ಎ.ಪೌಲ್ ತಿಳಿಸಿದ್ದಾರೆ.
ಬೆಟ್ಟಿಂಗ್ ಆ್ಯಪ್ಗಳ ಪರ ಪ್ರಚಾರ ಮಾಡಿದ್ದಕ್ಕಾಗಿ 25 ಬಾಲಿವುಡ್ ತಾರೆಯರು, ಕ್ರಿಕೆಟ್ ಆಟಗಾರರು ಹಾಗೂ ಸಾಮಾಜಿಕ ಜಾಲತಾಣಗಳ ಇನ್ಫ್ಲುಯ್ಸೆರ್ಗಳ ವಿರುದ್ಧ ತೆಲಂಗಾಣದಲ್ಲಿ ಎಫ್ಐಆರ್ ದಾಖಲಾಗಿರುವುದನ್ನು ಕೂಡ ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಆನ್ಲೈನ್ ಬೆಟ್ಟಿಂಗ್ಗಾಗಿ ಮಾಡಿದ್ದ ಸಾಲವನ್ನು ಪಾವತಿಸಲು ಸಾಧ್ಯವಾಗದೆ ಇದ್ದುದಕ್ಕಾಗಿ ತೆಲಂಗಾಣದ 24 ಮಂದಿ ಆತ್ಮಹತ್ಯೆಗೆ ಶರಣಾಗಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
► ಯುವಜನತೆಗೆ ಐಪಿಎಲ್ ಬೆಟ್ಟಿಂಗ್ ವ್ಯಸನ: ಸುಪ್ರೀಂಕೋರ್ಟ್ ಕಳವಳ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಹೆಸರಿನಲ್ಲಿ ಭಾರೀ ಸಂಖ್ಯೆಯ ಯುವಜನರು ಬೆಟ್ಟಿಂಗ್ ಹಾಗೂ ಜೂಜಾಟದಲ್ಲಿ ನಿರತರಾಗಿರುವ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.
ಅಕ್ರಮ ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇಧಿಸಬೇಕೆಂದು ಕೋರಿ ಕೆ.ಎ.ಪೌಲ್ ಅವರು ಸಲ್ಲಿಸಿದ ಅರ್ಜಿಯ ಆಲಿಕೆ ನಡೆಸಿದ ಸಂದರ್ಭ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ.ಎನ್. ಕೋಟಿಶ್ವರ್ ಸಿಂಗ್ ಪೀಠವು ಐಪಿಎಲ್ ಕುರಿತು ಮಾತನಾಡಿದೆ.







