ನೀಟ್-ಪಿಜಿ ಸೀಟ್ ಬ್ಲಾಕಿಂಗ್ ತಡೆಯಲು ಸುಪ್ರೀಂ ನಿರ್ದೇಶನ

Photo credit: PTI
ಹೊಸದಿಲ್ಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗೆ ಕೌನ್ಸೆಲಿಂಗ್ ಸಮಯದಲ್ಲಿ ಸೀಟ್ ಗಳನ್ನು ನಿರ್ಬಂಧಿಸುವುದರಿಂದ ಉನ್ನತ ಶ್ರೇಯಾಂಕಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಅನಾನುಕೂಲವಾಗುತ್ತದೆ ಮತ್ತು ಅರ್ಹತೆ ಆಧಾರಿತ ಆಯ್ಕೆಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿದೆ. ನೀಟ್-ಪಿಜಿ ಪರೀಕ್ಷೆಯ ಬಳಿಕ ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶಗಳ ಸಂದರ್ಭದಲ್ಲಿ ಸೀಟ್ ಬ್ಲಾಕಿಂಗ್ನ ಈ ಅನಿಷ್ಟ ಪರಿಪಾಠವನ್ನು ತಡೆಯಲು ಹಲವಾರು ನಿರ್ದೇಶನಗಳನ್ನು ಅದು ಹೊರಡಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸೀಟ್ ಬ್ಲಾಕಿಂಗ್ ಸಾಮಾನ್ಯ ಪರಿಪಾಠವಾಗಿದೆ. ಪರ್ಯಾಯ ಆಯ್ಕೆಗಾಗಿ ಅಭ್ಯರ್ಥಿಗಳು ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್ಗಳಿಗೆ ಪ್ರವೇಶವನ್ನು ಪಡೆದುಕೊಳ್ಳುತ್ತಾರೆ ಮತ್ತು ಬಳಿಕ ತಮ್ಮ ಅತ್ಯಂತ ಆದ್ಯತೆಯ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಇತರ ಸಂಸ್ಥೆಗಳಲ್ಲಿಯ ಸೀಟ್ ಗಳನ್ನು ತೆರವುಗೊಳಿಸುತ್ತಾರೆ. ಸೀಟ್ ಗಳನ್ನು ಪಡೆದವರು ಈ ಸೀಟ್ ಗಳನ್ನು ಆಯ್ದುಕೊಳ್ಳಬಹುದು,ಆದರೆ ಆ ವೇಳೆಗಾಗಲೇ ಹೆಚ್ಚಿನ ಅಭ್ಯರ್ಥಿಗಳು ಎಲ್ಲಿಯೋ ಪ್ರವೇಶವನ್ನು ಪಡೆದುಕೊಂಡಿರುತ್ತಾರೆ. ಹೀಗಾಗಿ ಅರ್ಹತಾ ಪಟ್ಟಿಯಲ್ಲಿ ತೀರ ಕೆಳಗಿರುವ ಅಭ್ಯರ್ಥಿಗಳಿಗೆ ಸುಲಭದಲ್ಲಿ ಈ ಸೀಟ್ ಗಳು ಲಭ್ಯವಾಗುತ್ತವೆ.
ಸೀಟ್ ಬ್ಲಾಕಿಂಗ್ ಕೇವಲ ಒಂದು ಪ್ರತ್ಯೇಕ ತಪ್ಪಲ್ಲ. ಬದಲಾಗಿ ಅದು ವ್ಯವಸ್ಥೆಯಲ್ಲಿನ ಆಳವಾದ ದೋಷಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು, ಈ ಅವ್ಯವಹಾರವು ಸೀಟ್ ಗಳ ನಿಜವಾದ ಲಭ್ಯತೆಯನ್ನು ಹದಗಡಿಸುತ್ತದೆ. ಆಕಾಂಕ್ಷಿಗಳ ನಡುವೆ ಅಸಮಾನತೆಯನ್ನು ಬೆಳೆಸುತ್ತದೆ. ಇಡೀ ಪ್ರಕ್ರಿಯೆಯನ್ನು ಅರ್ಹತೆಗಿಂತ ಆಕಸ್ಮಿಕವಾಗಿ ಸೀಟ್ ಗಳನ್ನು ಪಡೆದುಕೊಳ್ಳುವ ಮಟ್ಟಕ್ಕೆ ಇಳಿಸುತ್ತದೆ. ವಿಭಜಿತ ಆಡಳಿತ, ಪಾರದರ್ಶಕತೆಯ ಕೊರತೆ ಮತ್ತು ದುರ್ಬಲ ನೀತಿ ಅನುಷ್ಠಾನದಲ್ಲಿ ಬೇರೂರಿರುವ ನ್ಯೂನತೆಗಳು ಇದಕ್ಕೆ ಕಾರಣವಾಗಿವೆ ಎಂದು ತನ್ನ ಆದೇಶದಲ್ಲಿ ಹೇಳಿದೆ.
ರಾಜ್ಯ ಕೌನ್ಸೆಲಿಂಗ್ ನಲ್ಲಿ ವಿಳಂಬ,ಕೊನೆಯ ಕ್ಷಣದಲ್ಲಿ ಸೀಟುಗಳ ಸೇರ್ಪಡೆ ಅಥವಾ ರದ್ದುಗೊಳಿಸುವುದು ಮತ್ತು ಕೋಟಾಗಳ ನಡುವೆ ಸಮನ್ವಯದ ಕೊರತೆ ಇವು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತವೆ. ಇದರ ಪರಿಣಾಮವಾಗಿ ಕಡಿಮೆ ಶ್ರೇಯಾಂಕದ ಅಭ್ಯರ್ಥಿಗಳು ಉತ್ತಮ ಸೀಟ್ ಗಳನ್ನು ಪಡೆಯುತ್ತಾರೆ ಮತ್ತು ಅರ್ಹತೆ ಆಧಾರದ ಆಯ್ಕೆಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ಪೀಠವು ಹೇಳಿತು.
ಅಖಿಲ ಭಾರತ ಕೋಟಾ ಮತ್ತು ರಾಜ್ಯ ಕೌನ್ಸೆಲಿಂಗ್ ಸುತ್ತುಗಳ ನಡುವೆ ಹೊಂದಾಣಿಕೆ ಮಾಡಲು ಮತ್ತು ವ್ಯವಸ್ಥೆಗಳಾದ್ಯಂತ ಸೀಟ್ ಬ್ಲಾಕಿಂಗ್ನ್ನು ತಡೆಯಲು ರಾಷ್ಟ್ರೀಯವಾಗಿ ಸಮನ್ವಯಗೊಳಿಸಲಾದ ಕೌನ್ಸೆಲಿಂಗ್ ವೇಳಾಪಟ್ಟಿಯ ಜಾರಿ,ಎಲ್ಲ ಖಾಸಗಿ/ಡೀಮ್ಡ್ ವಿವಿಗಳು ಬೋಧನೆ, ಹಾಸ್ಟೆಲ್, ಕಾಷನ್ ಮನಿ ಡಿಪೋಸಿಟ್ ಮತ್ತು ಇತರ ಶುಲ್ಕಗಳ ವಿವರಗಳೊಂದಿಗೆ ಕೌನ್ಸೆಲಿಂಗ್ ಪೂರ್ವ ಶುಲ್ಕ ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸುವುದು, ರಾಷ್ಟ್ರೀಯ ವೈದ್ಯಕೀಯ ಆಯೋಗದಡಿ ಕೇಂದ್ರೀಕೃತ ಶುಲ್ಕ ನಿಯಂತ್ರಣ ವ್ಯವಸ್ಥೆಯ ಸ್ಥಾಪನೆ ಸೇರಿದಂತೆ ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ಪೀಠವು ಹೊರಡಿಸಿತು.
ಈ ಹಿಂದೆ 2027-28ರ ಶೈಕ್ಷಣಿಕ ಅವಧಿಯಲ್ಲಿ ಸೀಟ್ ಬ್ಲಾಕಿಂಗ್ನಿಂದ ನೊಂದಿದ್ದ ನೀಟ್-ಪಿಜಿ ಆಕಾಂಕ್ಷಿಗಳು ಅಲಹಾಬಾದ್ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ವಾದದಲ್ಲಿ ಹುರುಳಿದೆ ಎನ್ನುವುದನ್ನು ಕಂಡುಕೊಂಡಿದ್ದ ಉಚ್ಛ ನ್ಯಾಯಾಲಯವು ಅರ್ಜಿದಾರರಿಗೆ ತಲಾ 10 ಲ.ರೂ ಪರಿಹಾರವನ್ನು ಮಂಜೂರು ಮಾಡಿತ್ತು ಮತ್ತು ಸುಧಾರಣೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಉತ್ತರ ಪ್ರದೇಶ ಸರಕಾರ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಮಹಾ ನಿರ್ದೇಶಕರು ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು,2018ರಲ್ಲಿ ಅದು ತಡೆಯಾಜ್ಞೆಯನ್ನು ನೀಡಿತ್ತು.
ಗುರುವಾರದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಪರಿಹಾರದ ಮೊತ್ತವನ್ನು ತಲಾ ಒಂದು ಲ.ರೂ.ಗೆ ಪರಿಷ್ಕರಿಸಿದೆ.







