ನ್ಯಾಯಾಧೀಶರ ಆಸ್ತಿಗಳ ಕುರಿತ ಮಾಹಿತಿಯನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕಗೊಳಿಸಿದ ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ : ನ್ಯಾಯಾಂಗದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಎಪ್ರಿಲ್ 1ರಂದು ಅಂಗೀಕರಿಸಿದ ನಿರ್ಣಯದ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಸ್ತಿಗಳ ಕುರಿತ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಸಾರ್ವಜನಿಕಗೊಳಿಸಿದೆ.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಅಧಿಕಾರ ಸ್ವೀಕರಿಸಿದ ಕೂಡಲೇ ಸಾರ್ವಜನಿಕವಾಗಿ ತಮ್ಮ ಆಸ್ತಿ ಘೋಷಣೆ ಮಾಡುವುದಾಗಿ ಸುಪ್ರೀಂ ಕೋರ್ಟ್ನ ಎಲ್ಲಾ ನ್ಯಾಯಾಧೀಶರು ಫುಲ್ ಕೋರ್ಟ್ ಸಭೆ (ಎಲ್ಲ ನ್ಯಾಯಾಧೀಶರು ಹಾಜರಿರುವ ಸಭೆ) ಯಲ್ಲಿ ನಿರ್ಧರಿಸಿದ್ದರು. ಅದರಂತೆ ಮಾಹಿತಿಯನ್ನು ಸುಪ್ರೀಂ ಕೋರ್ಟಿನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಸುಪ್ರೀಂ ಕೋರ್ಟ್ನ 33 ನ್ಯಾಯಾಧೀಶರಲ್ಲಿ 21 ಮಂದಿ ನ್ಯಾಯಾಧೀಶರು ಈಗಾಗಲೇ ತಮ್ಮ ಬಳಿಯಿರುವ ಆಸ್ತಿಗಳು, ಹೂಡಿಕೆಗಳು, ಹೊಣೆಗಾರಿಕೆಗಳ ಬಗ್ಗೆ ಘೋಷಿಸಿಕೊಂಡಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕೂಡ ಸುಪ್ರೀಂ ಕೋರ್ಟ್ನ ಅಧಿಕೃತ ವೆಬ್ಸೈಟ್ನಲ್ಲಿ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.





