‘‘ಸಹಜೀವನ’’ ಅಪಾಯಕಾರಿ ಕಾಯಿಲೆ: ಬಿಜೆಪಿ ಸಂಸದ ಧರಂಬೀರ್ ಸಿಂಗ್
![‘‘ಸಹಜೀವನ’’ ಅಪಾಯಕಾರಿ ಕಾಯಿಲೆ: ಬಿಜೆಪಿ ಸಂಸದ ಧರಂಬೀರ್ ಸಿಂಗ್ ‘‘ಸಹಜೀವನ’’ ಅಪಾಯಕಾರಿ ಕಾಯಿಲೆ: ಬಿಜೆಪಿ ಸಂಸದ ಧರಂಬೀರ್ ಸಿಂಗ್](https://www.varthabharati.in/h-upload/2023/12/07/1220444-whatsapp-image-2023-12-07-at-92237-pm-2.webp)
ಧರಂಬೀರ್ ಸಿಂಗ್ | Photo: PTI
ಹೊಸದಿಲ್ಲಿ: ಸಹ ಜೀವನ ‘‘ಅಪಾಯಕಾರಿ ಖಾಯಿಲೆ’. ಅದನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕು. ಅದರ ವಿರುದ್ಧ ಸರಕಾರ ಕಾನೂನು ರೂಪಿಸಬೇಕು ಎಂದು ಹರಿಯಾಣದ ಬಿಜೆಪಿ ಸಂಸದ ಧರಂಬೀರ್ ಸಿಂಗ್ ಗುರುವಾರ ಹೇಳಿದ್ದಾರೆ.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಧರಂಭೀರ್ ಸಿಂಗ್, ಪ್ರೇಮ ವಿವಾಹಗಳಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚಾಗಿರುತ್ತದೆ. ಆದುದರಿಂದ ಇಂತಹ ವಿವಾಹಗಳಿಗೆ ವಧು-ವರರ ಹೆತ್ತವರ ಒಪ್ಪಿಗೆಯನ್ನು ಕಡ್ಡಾಯಗೊಳಿಸಬೇಕು ಎಂದರು.
‘‘ನಾನು ತುಂಬಾ ಗಂಭೀರ ವಿಚಾರವನ್ನು ಸರಕಾರ ಹಾಗೂ ಸಂಸತ್ತಿನ ಗಮನಕ್ಕೆ ತರಲು ಬಯಸುತ್ತೇನೆ. ಭಾರತೀಯ ಸಂಸ್ಕೃತಿಯು ವಸುಧೈವಕುಟುಂಬಕಂ ಹಾಗೂ ಭಾತೃತ್ವದ ತತ್ವಕ್ಕೆ ಜನಪ್ರಿಯವಾಗಿದೆ. ನಮ್ಮ ಸಾಮಾಜಿಕ ವಿನ್ಯಾಸ ಜಗತ್ತಿನ ಇತರರಿಗಿಂತ ಭಿನ್ನವಾಗಿದೆ. ನಮ್ಮ ವೈವಿಧ್ಯತೆಯಲ್ಲಿ ಏಕತೆಯಿಂದ ಇಡೀ ಜಗತ್ತು ಪ್ರಭಾವಿತವಾಗಿದೆ’’ ಎಂದು ಭಿವಾನಿ-ಮಹೇಂದ್ರಗಢದ ಸಂಸದರಾಗಿರುವ ಧರಂಬೀರ್ ಸಿಂಗ್ ಹೇಳಿದರು.
ಭಾರತವು ಹೆತ್ತವರ ಸಮ್ಮತಿಯ ವಿವಾಹದ ಸುದೀರ್ಘ ಸಂಪ್ರದಾಯವನ್ನು ಹೊಂದಿದೆ ಎಂದು ಉಲ್ಲೇಖಿಸಿದ ಅವರು, ಇಂದು ಕೂಡ ಸಮಾಜದ ದೊಡ್ಡ ವರ್ಗ ಹೆತ್ತವರು ಅಥವಾ ಸಂಬಂಧಿಕರ ಸಮ್ಮತಿಯಿಂದ ನಡೆಯುವ ವಿವಾಹಗಳಿಗೆ ಆದ್ಯತೆ ನೀಡುತ್ತದೆ ಎಂದರು.
ಈಗ ನೂತನ ಖಾಯಿಲೆಯೊಂದು ಕಂಡು ಬಂದಿದೆ ಹಾಗೂ ಈ ಸಾಮಾಜಿಕ ಅನಿಷ್ಟವನ್ನು ಸಹಜೀವನ ಎಂದು ಕರೆಯಲಾಗುತ್ತಿದೆ. ಇದರಂತೆ ಇಬ್ಬರು ವ್ಯಕ್ತಿಗಳು (ಪುರುಷ ಅಥವಾ ಮಹಿಳೆ) ವಿವಾಹವಾಗದೆ ಒಟ್ಟಿಗೆ ಜೀವಿಸುತ್ತಾರೆ ಎಂದು ಅವರು ಹೇಳಿದರು.
ಇಂತಹ ಸಂಬಂಧಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಆದರೆ, ಈಗ ಈ ಅನಿಷ್ಟ ನಮ್ಮ ಸಮಾಜದಲ್ಲಿ ಕೂಡ ತೀವ್ರವಾಗಿ ಹರಡುತ್ತಿದೆ. ಇದರ ಪರಿಣಾಮಗಳು ಭಯಾನಕವಾಗಿವೆ. ಇತ್ತೀಚೆಗೆ ಶ್ರದ್ಧಾ ವಾಲ್ಕರ್ ಹಾಗೂ ಅಫ್ತಾಬ್ ಪೂನಾವಾಲಾ ಪ್ರಕರಣ ಬೆಳಕಿಗೆ ಬಂದಿತ್ತು. ಇಬ್ಬರು ಸಹಜೀವನ ನಡೆಸುತಿದ್ದರು ಎಂದು ಸಿಂಗ್ ಹೇಳಿದರು.