ವಂಚನೆ ಆರೋಪ: ಪೆರಿಯಾರ್ ವಿಶ್ವವಿದ್ಯಾಲಯದ ಉಪ ಕುಲಪತಿಯ ಬಂಧನ
ಆರ್.ಜಗನ್ನಾಥನ್ (Photo: www.periyaruniversity.ac.in)
ಸೇಲಂ: ವಂಚನೆ ಆರೋಪದಡಿಯಲ್ಲಿ ಸೇಲಂನ ಪೆರಿಯಾರ್ ವಿಶ್ವವಿದ್ಯಾಲಯದ ಉಪ ಕುಲಪತಿ ಆರ್.ಜಗನ್ನಾಥನ್ ಅವರನ್ನು ಮಂಗಳವಾರ ಕರುಪ್ಪೂರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜಗನ್ನಾಥನ್ ಹಲವಾರು ದಾಖಲೆಗಳನ್ನು ಫೋರ್ಜರಿ ಮಾಡಿದ್ದಾರೆ ಹಾಗೂ ವಿಶ್ವವಿದ್ಯಾಲಯದ ನಿರ್ಮಾಣ ಕಾಮಗಾರಿ ಚಟುವಟಿಕೆಯಲ್ಲಿ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಉಪ ಕುಲಪತಿಯಾಗಿರುವಾಗಲೇ ತಮ್ಮ ಸಹಚರರೊಂದಿಗೆ ಖಾಸಗಿ ಕಂಪನಿಯೊಂದನ್ನು ನಡೆಸುತ್ತಿರುವ ಅವರು, ಹೂಡಿಕೆದಾರರಿಗೆ ಅದರ ಬಾಗಿಲು ತೆರೆದಿದ್ದಾರೆ ಎಂದೂ ಆರೋಪಿಸಲಾಗಿದೆ. ವರದಿಗಳ ಪ್ರಕಾರ, ತಮ್ಮ ಉಪ ಕುಲಪತಿ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವ ಅವರು, ಖಾಸಗಿ ಕಂಪನಿಯೊಂದನ್ನು ತೆರೆಯಲು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪೆರಿಯಾರ್ ವಿಶ್ವವಿದ್ಯಾಲಯದ ಕಾರ್ಮಿಕರ ಸಂಘಟನೆಯ ಕಾನೂನು ಸಲಹೆಗಾರರಾದ ಎಳಂಗೋವನ್ ಎಂಬುವವರು ಸಲ್ಲಿಸಿರುವ ದೂರನ್ನು ಆಧರಿಸಿ, ಕರುಪ್ಪೂರ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆಯೂ ಪ್ರಗತಿಯಲ್ಲಿದೆ.
ಜಗನ್ನಾಥನ್ ಕೃಷಿ ವಿದ್ಯಾರ್ಥಿಯಾಗಿದ್ದು, ಒಂದು ಕೃತಿಯನ್ನು ರಚಿಸಿದ್ದಾರೆ ಹಾಗೂ 55 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅವರು ಕೃಷಿ ವಿಜ್ಞಾನದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿಯನ್ನು ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಅವರು ಈ ಮುನ್ನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಹಾಗೂ ಅಧ್ಯಯನ ಮಂಡಳಿಯ ಸದಸ್ಯರಾಗಿದ್ದರು ಹಾಗೂ ನಮಕ್ಕಲ್ನ ಪಾವೈ ಎಂಜಿನಿಯರಿಂಗ್ ಕಾಲೇಜಿನ ಅಧ್ಯಯನ ಮಂಡಳಿಯ ಸದಸ್ಯ ಹಾಗೂ ಅಧ್ಯಕ್ಷರೂ ಆಗಿದ್ದರು.