ತಮಿಳುನಾಡು: ಕರ್ತವ್ಯದಲ್ಲಿದ್ದ ವೇಳೆ ಬಿಜೆಪಿ ಸದಸ್ಯರಾಗಿ ನೋಂದಣಿ ಮಾಡಿಕೊಂಡ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು
ಸಾಂದರ್ಭಿಕ ಚಿತ್ರ (PTI)
ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ಎನ್ ಮನ್ನ್ ಎನ್ನ ಮಕ್ಕಳ್ ರ್ಯಾಲಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ವೇಳೆ ಬಿಜೆಪಿ ಸದಸ್ಯರಾಗಿ ನೋಂದಣಿ ಮಾಡಿಕೊಂಡ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ತಮಿಳುನಾಡು ಪೊಲೀಸ್ ಇಲಾಖೆ ಅಮಾನತುಗೊಳಿಸಿದೆ.
ಡಿಸೆಂಬರ್ 27ರಂದು ನಾಗಪಟ್ಟಿಣಂ ಜಿಲ್ಲೆಯಲ್ಲಿ ಅಣ್ಣಾಮಲೈ ಅವರ ಯಾತ್ರೆ ನಡೆಯುತ್ತಿರುವ ವೇಳೆ ಇದ್ದ ಸ್ಟಾಲ್ಗಳಲ್ಲೊಂದರಲ್ಲಿ ಸಬ್-ಇನ್ಸ್ಪೆಕ್ಟರ್ ಕೆ ರಾಜೇಂದ್ರನ್ ಮತ್ತು ಸ್ಪೆಷಲ್ ಸಬ್-ಇನ್ಸ್ಪೆಕ್ಟರ್ ಎ ಕಾರ್ತಿಕೇಯನ್ ಅವರು ವರ್ಚುವಲ್ ಆಗಿ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆನ್ನಲಾಗಿದೆ.
ವೇಲಿಪಾಳಯಂ ಠಾಣೆಯ ಈ ಇಬ್ಬರು ಅಧಿಕಾರಿಗಳು ಫೋನ್ ಸಂಖ್ಯೆಯೊಂದಕ್ಕೆ ಮಿಸ್ಡ್ ಕಾಲ್ ನೀಡುವ ಮೂಲಕ ಬಿಜೆಪಿ ಸೇರ್ಪಡೆಗೊಂಡಿದ್ದರೆಂದು ತಿಳಿದು ಬಂದಿದೆ.
ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂದಿತ್ತು.
ಕರ್ತವ್ಯದಲ್ಲಿದ್ದ ವೇಳೆ ಇಂತಹ ಕೆಲಸ ಮಾಡಿದ ಅಧಿಕಾರಿಗಳು ತಮಿಳುನಾಡು ಪೊಲೀಸ್ ಅಧಿಕಾರಿಗಳ ನಿಯಮಗಳನ್ನು ಮುರಿದಿರುವುದು ದೃಢಪಟ್ಟ 36 ಗಂಟೆಗಳೊಳಗೆ ಅವರನ್ನು ಮೀಸಲು ಪಡೆಗೆ ವರ್ಗಾಯಿಸಲಾಯಿತು ಎಂದು ನಾಗಪಟ್ಟಿಣಂ ಎಸ್ಪಿ ಹರ್ಷ ಸಿಂಗ್ ಹೇಳಿದ್ದಾರೆ.
ನಂತರ ಇಲಾಖಾ ತನಿಖೆ ನಡೆಸಲಾಗಿತ್ತು. ಈ ತನಿಖೆಯ ವರದಿಯ ಬೆನ್ನಲ್ಲೇ ತಂಜಾವೂರು ವಲಯ ಡಿಐಜಿ ಟಿ ಜಯಚಂದ್ರನ್ ಅವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಅಧಿಕಾರಿಗಳು ಬಿಜೆಪಿಯ ಸದಸ್ಯತ್ವ ಪಡೆದಿಲ್ಲ ಬದಲು ಸ್ಟಾಲ್ನಲ್ಲೇನು ನಡೆಯುತ್ತಿದೆ ಎಂದು ಪರಿಶೀಲಿಸಿದ್ದರು ಎಂದು ಹೇಳಿದ್ದಾರೆ.