ಕೇರಳ | ವಿವಾಹದ ಮುನ್ನಾ ದಿನ ವಧು ಆತ್ಮಹತ್ಯೆ
ವಿಷಯ ತಿಳಿದು ಪ್ರಿಯಕರನಿಂದಲೂ ಆತ್ಮಹತ್ಯೆಗೆ ಯತ್ನ

Photo | NDTV
ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ತನ್ನ ಇಚ್ಛೆಗೆ ವಿರುದ್ಧವಾಗಿ ಬೇರೆ ಯುವಕನ ಜೊತೆ ವಿವಾಹ ನಿಶ್ಚಯಿಸಿದ್ದಕ್ಕೆ ವಿವಾಹದ ಮುನ್ನಾದಿನ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರ ತಿಳಿದು ಆಕೆಯ ಪ್ರಿಯಕರ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಶೈಮಾ ಸಿನಿವರ್(18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೂಲಗಳ ಪ್ರಕಾರ, ಶೈಮಾ ಸಿನಿವರ್ ಸ್ಥಳೀಯ ಯುವಕ ಸಜೀರ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಕುಟುಂಬಸ್ಥರು ಬೇರೆ ಯುವಕನ ಜೊತೆ ಆಕೆಗೆ ವಿವಾಹವನ್ನು ನಿಗದಿಪಡಿಸಿದ್ದು, ನಿಶ್ಚಿತಾರ್ಥವೂ ನಡೆದಿತ್ತು. ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ ಶೈಮಾ ತಾನು ಸಜೀರ್ ಎಂಬಾತನನ್ನು ಪ್ರೀತಿಸುತ್ತಿದ್ದ ಬಗ್ಗೆ ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದಳು. ಆದರೆ ಕುಟುಂಬವು ಇದಕ್ಕೆ ನಿರಾಕರಿಸಿತ್ತು.
ಇದರಿಂದ ಮನನೊಂದುಕೊಂಡಿದ್ದ ಶೈಮಾ ವಿವಾಹದ ಮುನ್ನಾ ದಿನ ತನ್ನ ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೈಮಾ ಆತ್ಮಹತ್ಯೆಯ ಸುದ್ದಿ ತಿಳಿದ ಆಕೆಯ ಪ್ರಿಯಕರ ಸಜೀರ್ ಕೂಡ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಮಂಜೇರಿಯ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಪೊಲೀಸರು ಅಸ್ವಾಭಾವಿಕ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಸಹಾಯವಾಣಿ
ವಂದ್ರೇವಾಲಾ ಪ್ರತಿಷ್ಠಾನ: 9999666555
help@vandrevalafoundation.com
TISS iCall 022-25521111