ಪತ್ರಕರ್ತರ ಸಲಕರಣೆಗಳ ವಶಕ್ಕೆ ನಿಯಮ ರೂಪಿಸಲು ವಿಳಂಬಿಸಿದ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
“ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದೊಡ್ಡ ಆಕ್ರಮಣ”
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಪತ್ರಕರ್ತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳುವಾಗ ತನಿಖಾ ಸಂಸ್ಥೆಗಳು ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಕೇಂದ್ರ ಸರಕಾರವು ಸಮಯ ಮಿತಿಯನ್ನು ಹಾಕಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಈ ವಿಷಯದಲ್ಲಿ ತನಿಖಾ ಸಂಸ್ಥೆಗಳು ಅನುಸರಿಸಬೇಕಾದ ನಿಯಮಾವಳಿಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನಗಳನ್ನು ಕೊಡಬೇಕೆಂದು ಕೋರಿ ಸಲ್ಲಿಸಲಾಗಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಒಂದು ಅರ್ಜಿಯನ್ನು ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಶನಲ್ಸ್ ಸಲ್ಲಿಸಿದರೆ, ಇನ್ನೊಂದನ್ನು ವಿಷಯ ಪರಿಣತರು ಮತ್ತು ಸಂಶೋಧಕರ ಗುಂಪೊಂದು ಸಲ್ಲಿಸಿದೆ.
ಸಮಿತಿಯೊಂದನ್ನು ರಚಿಸಲಾಗಿದೆ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ಇನ್ನೂ ಹೆಚ್ಚಿನ ಸಮಯಾವಕಾಶ ಬೇಕು ಎಂದು ನ್ಯಾಯಾಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಕೌಲ್, ‘‘ಈವರೆಗೆ ನೀವು (ಕೇಂದ್ರ ಸರಕಾರ) ಏನು ಮಾಡುತ್ತಿದ್ದಿರಿ? ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ದಾಖಲಾಗಿ ಎರಡು ವರ್ಷ ಕಳೆದಿದೆ’’ ಎಂದು ಹೇಳಿದರು. ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಲ್ಲಿ ಸರಕಾರ ಮಾಡುತ್ತಿರುವ ವಿಳಂಬವನ್ನು ಅವರು ಪ್ರಶ್ನಿಸಿದರು.
‘‘ನಾವು ನೋಟಿಸ್ ನೀಡಿದ್ದು ಯಾವಾಗ? ಸ್ವಲ್ಪ ಸಮಯ ಮಿತಿ ಹಾಕಿಕೊಂಡು ಕೆಲಸ ಮಾಡಬೇಕು. ಎರಡು ವರ್ಷಗಳು ಕಳೆದಿವೆ” ಎಂದು ನ್ಯಾ. ಕೌಲ್ ಹೇಳಿದರು.
ತನಿಖಾ ಸಂಸ್ಥೆಗಳು ಪತ್ರಕರ್ತರ ಡಿಜಿಟಲ್ ಸಲಕರಣೆಗಳನ್ನು ವಶಪಡಿಸಿಕೊಂಡು ಅನಿರ್ದಿಷ್ಟಾವಧಿವರೆಗೆ ತಮ್ಮಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂದು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ವಾದಿಸಿದರು.
‘‘ಇದು ತುರ್ತು ವಿಷಯ. ಸುಮಾರು 90 ಪತ್ರಕರ್ತರಿಂದ ಸುಮಾರು 300 ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾರೋ ಒಬ್ಬರು ನಿಮ್ಮ ಮನೆಗೆ ಬಂದು ನಿಮ್ಮ ಫೋನ್ ಕಸಿದುಕೊಂಡು ಅದರಲ್ಲಿರುವ ಪತ್ರಗಳನ್ನು ಓದಿದರೆ ನಿಮಗೆ ಹೇಗನಿಸುತ್ತದೆ? ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದೊಡ್ಡ ಆಕ್ರಮಣವಾಗಿದೆ’’ ಎಂದು ಅವರು ಹೇಳಿದರು.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಡಿಸೆಂಬರ್ 14ಕ್ಕೆ ಮುಂದೂಡಿದೆ.
‘ನ್ಯೂಸ್ ಕ್ಲಿಕ್’ ವೆಬ್ ಸೈಟ್ನ ಪತ್ರಕರ್ತರ ಮೇಲೆ ದಿಲ್ಲಿ ಪೊಲೀಸರು ಅಕ್ಟೋಬರ್ 3ರಂದು ದಾಳಿ ನಡೆಸಿದ ಬಳಿಕ, 18 ಪತ್ರಿಕಾ ಸಂಘಟನೆಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರವೊಂದನ್ನು ಬರೆದು ಪತ್ರಕರ್ತರ ಮೊಬೈಲ್ ಫೋನ್ ಗಳು ಮತ್ತು ಕಂಪ್ಯೂಟರ್ ಗಳಳನ್ನು ವಶಪಡಿಸಿಕೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಆ ಸಲಕರಣೆಗಳಲ್ಲಿರುವ ದತ್ತಾಂಶಗಳ ದುರ್ಬಳಕೆಯಾಗಬಹುದೆಂಬ ಆತಂಕವನ್ನೂ ಅವುಗಳು ವ್ಯಕ್ತಪಡಿಸಿದ್ದವು.