ಸುರಂಗ ರಕ್ಷಣಾ ಕಾರ್ಯಾಚರಣೆ ಮುಕ್ತಾಯಕ್ಕೂ ಮುನ್ನ ಕಾರ್ಮಿಕರೊಬ್ಬರ ತಂದೆ ಮೃತ್ಯು
Photo: PTI
ರಾಂಚಿ: ಉತ್ತರಾಖಂಡದಲ್ಲಿನ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗ ಮಾರ್ಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಪೈಕಿ, ಓರ್ವ ಕಾರ್ಮಿಕನ 70 ವರ್ಷದ ತಂದೆಯು ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗುವುದಕ್ಕೂ ಕೆಲವೇ ಗಂಟೆಗಳ ಮುನ್ನ ಮೃತಪಟ್ಟಿದ್ದಾರೆ ಎಂದು ಮಂಗಳವಾರ ರಾತ್ರಿ ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ನವೆಂಬರ್ 12ರಂದು ಸುರಂಗ ಕುಸಿದ ಸುದ್ದಿ ಕೇಳಿದಾಗಿನಿಂದ, 28 ವರ್ಷದ ಕಾರ್ಮಿಕನಾದ ಭಕ್ತು ಅವರ ತಂದೆ ಬಾಸೆತ್ ಅಲಿಯಾಸ್ ಬರ್ಸಾ ಮುರ್ಮು ತಮ್ಮ ಪುತ್ರನ ಬಗ್ಗೆ ತೀವ್ರ ಆತಂಕಗೊಂಡಿದ್ದರು ಎಂದು ಕುಟುಂಬದ ಸದಸ್ಯರು ಬುಧವಾರ ತಿಳಿಸಿದ್ದಾರೆ.
ಝಾರ್ಖಂಡ್ ರಾಜ್ಯದ ಸಿಂಘ್ ಭುಮ್ ಜಿಲ್ಲೆಯ ಬಹ್ಡಾ ಗ್ರಾಮದ ನಿವಾಸಿಯಾದ ಮುರ್ಮು ಮಂಗಳವಾರ ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ತಮ್ಮ ಪುತ್ರ ಭಕ್ತು ಸುರಂಗದ ಕೊನೆಯಲ್ಲಿ ಬೆಳಕನ್ನು ನೋಡುವುದಕ್ಕೆ ಇನ್ನೂ ಹನ್ನೆರಡು ಗಂಟೆ ಬಾಕಿ ಇರುವಾಗ ನೀದನರಾಗಿದ್ದಾರೆ.
ಈ ಕುರಿತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಮುರ್ಮು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದರೂ, ಅವರ ಸಾವಿನ ಹಿಂದಿನ ಕಾರಣವೇನು ಎಂಬುದು ಇದುವರೆಗೂ ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ.