ಪಶ್ಚಿಮ ಬಂಗಾಳ: ನ್ಯಾಯಾಲಯದ ಆವರಣದಲ್ಲಿ ಗುಂಡಿನಿಂದ ಗಾಯಗೊಂಡ ಪೊಲೀಸ್ ಗಾರ್ಡ್ ನ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ | PC : PTI
ಕೋಲ್ಕತಾ: ಗುಂಡಿನಿಂದ ಗಾಯಗೊಂಡ ಪೊಲೀಸ್ ಗಾರ್ಡ್ ಓರ್ವರ ಮೃತದೇಹ ಕೋಲ್ಕತ್ತಾದ ಡಾಲ್ಹೌಸಿ ಪ್ರದೇಶದಲ್ಲಿರುವ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರನ್ನು ಗೋಪಾಲನಾಥ್ (30) ಎಂದು ಗುರುತಿಸಲಾಗಿದೆ. ಈ ಪ್ರಕರಣವನ್ನು ಆತ್ಮಹತ್ಯೆ, ಕೊಲೆ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
‘‘ಗೋಪಾಲನಾಥ್ ಅವರ ಮೃತದೇಹ ನಗರ ಸಿವಿಲ್ ನ್ಯಾಯಾಲಯದ ಕಟ್ಟಡದ ನೆಲ ಮಹಡಿಯ ಮೆಟ್ಟಿಲು ಬಳಿ ಖುರ್ಚಿಯಲ್ಲಿ ಬೆಳಗ್ಗೆ ಸುಮಾರು 7 ಗಂಟೆಗೆ ಪತ್ತೆಯಾಗಿದೆ. ಅವರ ಹಣೆಗೆ ಗುಂಡಿನ ಗಾಯಗಳಾಗಿವೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘‘ಅವರು ತನ್ನ 9ಎಂಎಂ ಸೇವಾ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡಿರುವ ಸಾಧ್ಯತೆ ಇದೆ. ಪಿಸ್ತೂಲ್ ಅವರ ಮೃತದೇಹದ ಬಳಿ ಪತ್ತೆಯಾಗಿದೆ. ನಾವು ತನಿಖೆ ಆರಂಭಿಸಿದ್ದೇವೆ. ಈ ಪ್ರಕರಣವನ್ನು ಸಾಧ್ಯವಿರುವ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.
ಈ ಪೊಲೀಸ್ ಅಧಿಕಾರಿ ಕಳೆದ ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಎಂದು ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.