ಮುಂಬೈ-ಬೆಂಗಳೂರು ಪ್ರಯಾಣದುದ್ದಕ್ಕೂ ಶೌಚಾಲಯದಲ್ಲಿ ಸಿಕ್ಕಿಹಾಕಿಕೊಂಡ ಸ್ಪೈಸ್ ಜೆಟ್ ಪ್ರಯಾಣಿಕ
Photo: PTI
ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್ಜೆಟ್ ವಿಮಾನದ ಶೌಚಾಲಯದ ಡೋರ್ ಲಾಕ್ ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಪ್ರಯಾಣಿಕರೊಬ್ಬರು ಪ್ರಯಾಣದುದ್ದಕ್ಕೂ ಸುಮಾರು 100 ನಿಮಿಷಗಳ ಕಾಲ ಶೌಚಾಲಯದಲ್ಲೇ ಸಿಕ್ಕಿಹಾಕಿಕೊಂಡ ಘಟನೆ ವರದಿಯಾಗಿದೆ. ಕೊನೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂಜಿನಿಯರ್ ಗಳು ಬಾಗಿಲು ಒಡೆದು ಪ್ರಯಾಣಿಕನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಕೆಐಎ ಮೂಲಗಳ ಪ್ರಕಾರ, ಮಂಗಳವಾರ ನಸುಕಿನ 2 ಗಂಟೆಯ ಸುಮಾರಿಗೆ ಮುಂಬೈನಿಂದ ಟೇಕಾಫ್ ಆದ ಎಸ್ಜಿ-268 ವಿಮಾನದಲ್ಲಿ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ 10.55ಕ್ಕೆ ಈ ವಿಮಾನ ಹೊರಡಬೇಕಾಗಿತ್ತು. ವಿಮಾನದ ಪ್ರಯಾಣಿಕನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ ಹಾಗೂ ಸ್ಪೈಸ್ ಜೆಟ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಮಾನ ಟೇಕಾಫ್ ಆಗಿ ಸೀಟ್ ಬೆಲ್ಟ್ ಸಂಕೇತಗಳು ಆಫ್ ಆದ ಬಳಿಕ ಪ್ರಯಾಣಿಕ ಶೌಚಾಲಯಕ್ಕೆ ತೆರಳಿದ್ದರು. ಶೌಚಾಲಯದ ಬಾಗಿಲ ಬೀಗ ನಿಷ್ಕ್ರಿಯವಾದ್ದರಿಂದ ಅವರು ಶೌಚಾಲಯದ ಒಳಗೆ ಸಿಕ್ಕಿಹಾಕಿಕೊಂಡರು ಎಂದು ಕೆಐಎ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಸಿಲುಕಿಕೊಂಡ ಪ್ರಯಾಣಿಕ ಸಿಬ್ಬಂದಿಗೆ ಅಪಾಯದ ಕರೆ ಮಾಡಿದರು. ಆಗ ಸಿಬ್ಬಂದಿ ಹೊರಗಿನಿಂದ ಬಾಗಿಲು ತೆರೆಯುವ ಪ್ರಯತ್ನ ಮಾಡಿದರು. "ಈ ವ್ಯಕ್ತಿ ಮುಂಬೈನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು ಹಾಗೂ ಶೌಚಾಲಯದ ಒಳಗೆ ಸಿಲುಕಿಹಾಕಿಕೊಂಡರು" ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ವಿವರಿಸಿದ್ದಾರೆ.