ಜಿಮ್ ಪೂರಕ ಔಷಧಿ ಸೇವಿಸುತ್ತೀರಾ? ಈ ಐದು ರಕ್ತ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಬೇಕು!

Image Source : FReepik
ಜಿಮ್ ಪೂರಕ ಔಷಧಿಗಳು ನಿಮ್ಮ ದಿನನಿತ್ಯದ ಜೀವನದ ಭಾಗವಾಗಿದ್ದರೆ ಮಾಡಿಸಿಕೊಳ್ಳಬೇಕಾದ ಕೆಲವು ರಕ್ತ ಪರೀಕ್ಷೆಗಳ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.
ಜಿಮ್ಗೆ ಹೋಗುವವರು ಸಾಮಾನ್ಯವಾಗಿ ಪೂರಕ ಆಹಾರ, ಪ್ರೊಟೀನ್ ಶೇಕ್ಗಳು, ಕ್ರಿಯೇಟಿನ್, ವ್ಯಾಯಾಮ ಪೂರ್ವ ಫಾರ್ಮುಲಾಗಳು ಅಥವಾ ಕೊಬ್ಬು ಕರಗಿಸುವ ಪೂರಕಗಳನ್ನು ಸೇವಿಸುತ್ತಾರೆ. ಆದರೆ ಇಂತಹವರು ಪ್ರತಿ ಆರು ತಿಂಗಳಿಗೊಮ್ಮೆ ಮೂತ್ರಪಿಂಡಗಳ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ತಜ್ಞರು ಹೇಳುತ್ತಾರೆ. ಇಂತಹ ಜಿಮ್ ಪೂರಕಗಳು ನಿಮ್ಮ ದಿನನಿತ್ಯದ ಜೀವನದ ಭಾಗವಾಗಿದ್ದರೆ ಮಾಡಿಸಿಕೊಳ್ಳಬೇಕಾದ ಕೆಲವು ರಕ್ತ ಪರೀಕ್ಷೆಗಳ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ. ಹೊಸದಿಲ್ಲಿಯ ಶಾಲಿಮಾರ್ ಬಾಗ್ನಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ನೆಫ್ರಾಲಜಿ ತಜ್ಞ ಡಾ. ಯೋಗೇಶ್ ಕುಮಾರ್ ಛಾಬ್ರಾ ಅವರ ಪ್ರಕಾರ, ಕೆಳಗಿನ ಐದು ರಕ್ತ ಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
ಸೀರಂ ಕ್ರಿಯೇಟಿನೈನ್
ವೈದ್ಯರ ಪ್ರಕಾರ, ಸೀರಂ ಕ್ರಿಯೇಟಿನೈನ್ ಮೂತ್ರಪಿಂಡಗಳ ಕಾರ್ಯಕ್ಷಮತೆಯ ನಿರ್ಣಾಯಕ ಸೂಚಕಗಳಲ್ಲಿ ಒಂದಾಗಿದೆ. ಸೀರಂ ಕ್ರಿಯೇಟಿನೈನ್ ಪ್ರಮಾಣ ಹೆಚ್ಚಿದ್ದರೆ ಮೂತ್ರಪಿಂಡಗಳು ಸರಿಯಾಗಿ ಫಿಲ್ಟರ್ ಮಾಡುತ್ತಿಲ್ಲ ಎಂದು ಅರ್ಥೈಸಬಹುದು. ಆದರೆ ಕೆಲವೊಮ್ಮೆ ಕಟ್ಟುಮಸ್ತಾದ ಸ್ನಾಯು ರಚನೆ ಹೊಂದಿರುವವರಲ್ಲಿ ಹೆಚ್ಚಿನ ತೀವ್ರತೆಯ ದೈಹಿಕ ವ್ಯಾಯಾಮದ ಸಮಯದಲ್ಲಿ ಕ್ರಿಯೇಟಿನೈನ್ ಮಟ್ಟ ಹೆಚ್ಚಾಗಬಹುದು.
ಬ್ಲಡ್ ಯೂರಿಯಾ ನೈಟ್ರೋಜನ್ (BUN)
ವೈದ್ಯರ ಪ್ರಕಾರ, ದೇಹದಲ್ಲಿನ ಪ್ರೊಟೀನ್ ವಿಭಜನೆಯಿಂದ ಉತ್ಪತ್ತಿಯಾಗುವ ರಕ್ತದಲ್ಲಿನ ನೈಟ್ರೋಜನ್ ಸಾಂದ್ರತೆಯ ಮಟ್ಟವನ್ನು ಪರೀಕ್ಷಿಸಲು ಇದನ್ನು ಬಳಸಲಾಗುತ್ತದೆ. BUN ಪ್ರಮಾಣ ಹೆಚ್ಚಿದ್ದರೆ ಮೂತ್ರಪಿಂಡದ ಮೇಲಿನ ಒತ್ತಡ, ದೇಹದ ನೀರಿನ ಕೊರತೆ (ಡಿಹೈಡ್ರೇಶನ್) ಅಥವಾ ಅತಿಯಾದ ಪ್ರೊಟೀನ್ ಮತ್ತು ಪೂರಕ ಔಷಧಿ ಸೇವನೆಯನ್ನು ಸೂಚಿಸಬಹುದು.
ಅಂದಾಜು ಗ್ಲೊಮೆರುಲರ್ ಫಿಲ್ಟರೇಶನ್ ರೇಟ್ (eGFR)
ಸೀರಂ ಕ್ರಿಯೇಟಿನೈನ್ ಮಟ್ಟ, ವಯಸ್ಸು ಮತ್ತು ಲಿಂಗವನ್ನು ಆಧರಿಸಿದ ಅಂದಾಜು ಇದಾಗಿದ್ದು, ಮೂತ್ರಪಿಂಡದ ಕಾರ್ಯನಿರ್ವಹಣೆಯ ಅವಲೋಕನ ನೀಡುತ್ತದೆ. eGFR ಕಡಿಮೆಯಾಗುವುದು ಮೂತ್ರಪಿಂಡದ ಸಮಸ್ಯೆಗಳ ಪ್ರಾಥಮಿಕ ಸೂಚಕವಾಗಿದೆ.
ರಕ್ತದ ಸೀರಂನಲ್ಲಿರುವ ಎಲೆಕ್ಟ್ರೋಲೈಟ್ಸ್
ಮೂತ್ರಪಿಂಡಗಳು ಎಲೆಕ್ಟ್ರೋಲೈಟ್ ಸಮತೋಲನವನ್ನು ನಿಯಂತ್ರಿಸುತ್ತವೆ. ಎಲೆಕ್ಟ್ರೋಲೈಟ್ ಅಸಮತೋಲನವು ಮೂತ್ರಪಿಂಡದ ಕಾರ್ಯ ಅಸಮರ್ಪಕವಾಗಿರುವುದು ಅಥವಾ ದೇಹದ ನೀರಿನ ಕೊರತೆಯನ್ನು ಸೂಚಿಸುತ್ತದೆ. ತೀವ್ರ ದೈಹಿಕ ಚಟುವಟಿಕೆ ಮತ್ತು ಪೂರಕ ಔಷಧಿ ಸೇವನೆ ಸಂದರ್ಭಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.
ಸೀರಂ ಯೂರಿಕ್ ಆ್ಯಸಿಡ್
ಯೂರಿಕ್ ಆಮ್ಲದ ಮಟ್ಟ ಹೆಚ್ಚಿರುವುದು ಮೂತ್ರಪಿಂಡದ ಮೇಲಿನ ಒತ್ತಡ, ದೇಹದ ನೀರಿನ ಕೊರತೆ ಅಥವಾ ಅತಿಯಾದ ಪ್ರೊಟೀನ್ ಸೇವನೆಯನ್ನು ಸೂಚಿಸುತ್ತದೆ. ಕೆಲವೊಮ್ಮೆ ಅಧಿಕ ಯೂರಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.
ಯೂರಿನ್ ಪ್ರೊಟೀನ್-ಕ್ರಿಯೇಟಿನೈನ್ ರೇಷಿಯೊ (UPCR)
UPCR ಪರೀಕ್ಷೆಯು ಮೂತ್ರದಲ್ಲಿ ಪ್ರೊಟೀನ್ ಇರುವುದನ್ನು ಪತ್ತೆಹಚ್ಚುವ ಮಹತ್ವದ ಪರೀಕ್ಷೆಯಾಗಿದ್ದು, ಇದು ಮೂತ್ರಪಿಂಡದ ಹಾನಿಯನ್ನು ಸೂಚಿಸಬಹುದು. ಆರೋಗ್ಯಕರ ಮೂತ್ರಪಿಂಡಗಳು ರಕ್ತದಲ್ಲಿನ ಹೆಚ್ಚುವರಿ ಪ್ರೊಟೀನ್ ಅನ್ನು ಫಿಲ್ಟರ್ ಮಾಡಿ ದೇಹದಲ್ಲಿ ಉಳಿಸಿಕೊಳ್ಳುತ್ತವೆ. ಪ್ರೊಟೀನ್-ಕ್ರಿಯೇಟಿನೈನ್ ಅನುಪಾತ ಹೆಚ್ಚಾದರೆ ಮೂತ್ರಪಿಂಡದ ಹಾನಿಯ ಸೂಚಕವಾಗಿರಬಹುದು.
ಪ್ರೊಟೀನ್ ಸೇವನೆ ಕುರಿತ ವೈದ್ಯರ ಸಲಹೆಗಳು
ವೈದ್ಯರ ಪ್ರಕಾರ, ಸದಾ ದೇಹದಲ್ಲಿ ನೀರಿನ ಸಮತೋಲನ ಕಾಪಾಡಿಕೊಂಡು ಮೂತ್ರಪಿಂಡಗಳನ್ನು ರಕ್ಷಿಸಿಕೊಳ್ಳಬೇಕು. ಹೆಚ್ಚಿನ ಪ್ರೊಟೀನ್ ಸೇವನೆಯು ಮೂತ್ರಪಿಂಡಗಳ ಮೇಲೆ ಒತ್ತಡ ಹೇರುತ್ತದೆ. ವಿಶೇಷವಾಗಿ ವ್ಯಾಯಾಮ ಮಾಡುವವರಲ್ಲಿ ಈ ಒತ್ತಡ ಇನ್ನಷ್ಟು ಹೆಚ್ಚಿರಬಹುದು. ಪ್ರೊಟೀನ್ ಅನ್ನು ಫೈಬರ್, ಹಣ್ಣು ಮತ್ತು ತರಕಾರಿಗಳಿಂದ ಪಡೆಯುವುದು ಉತ್ತಮ. ಪೂರಕ ಔಷಧಿಗಳಿಂದ ಅತಿಯಾಗಿ ಪ್ರೊಟೀನ್ ಪಡೆಯುವುದನ್ನು ತಪ್ಪಿಸಬೇಕು. ಇಲ್ಲವಾದರೆ ಇತರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಇಡೀ ಧಾನ್ಯಗಳಿಂದ ದೊರೆಯುವ ಪ್ರೊಟೀನ್ ಕೂಡ ಪೂರಕ ಆಹಾರದಷ್ಟೇ ಪರಿಣಾಮಕಾರಿ.
ಆದರೆ ಹೆಚ್ಚು ಪ್ರೊಟೀನ್ ಸೇವನೆಯಿಂದಲೇ ಮೂತ್ರಪಿಂಡ ವೈಫಲ್ಯ ಉಂಟಾಗುತ್ತದೆ ಎಂಬುದು ಸರಿಯಲ್ಲ. ಈಗಾಗಲೇ ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇದ್ದಲ್ಲಿ ಮಾತ್ರ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹಾಗೆಯೇ ಹೆಚ್ಚು ಪ್ರೊಟೀನ್ ಸೇವಿಸಿದರೆ ಹೆಚ್ಚು ಕಟ್ಟುಮಸ್ತಾದ ಸ್ನಾಯುಗಳು ಬರುತ್ತವೆ ಎನ್ನುವ ನಂಬಿಕೆಯೂ ತಪ್ಪಾಗಿದೆ.
ಸೂಚನೆ: ಈ ಲೇಖನವನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಇದು ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಆರೋಗ್ಯ ಸಂಬಂಧಿತ ಯಾವುದೇ ಪ್ರಶ್ನೆಗಳಿದ್ದರೆ ವೈದ್ಯರ ಸಲಹೆ ಪಡೆಯಿರಿ.






