×
Ad

ತುಳುನಾಡಿನ ಭೂತಾರಾಧನೆ ನೆಲೆ - ಹಿನ್ನೆಲೆ

Update: 2024-12-27 09:16 IST

ಸಮಾಜಮುಖಿ ಚಿಂತಕಿ ಡಾ. ಇಂದಿರಾ ಹೆಗ್ಗಡೆ ಸಾಹಿತಿ-ಸಂಶೋಧಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಸಣ್ಣ ಕಥೆಗಳನ್ನು ಬರೆಯುವ ಮೂಲಕ ತಮ್ಮ 33ನೆಯ ವಯಸಿನಲ್ಲಿ ಸಾಹಿತ್ಯಲೋಕಕ್ಕೆ ಪಾದಾರ್ಪಣೆ ಮಾಡಿದರು. ಮೂರು ಕಥಾ ಸಂಕಲನಗಳನ್ನು, ನಾಲ್ಕು ಕಾದಂಬರಿಗಳನ್ನು, ಒಂದು ಕವನ ಸಂಕಲನವನ್ನು ಹೊರತಂದಿದ್ದಾರೆ. ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಎಂಬ ಅನುಭವ ಕಥನವನ್ನು ತಮ್ಮ ಪತಿ ಎಸ್. ಆರ್.ಹೆಗ್ಡೆಯವರೊಂದಿಗೆ ಸೇರಿ ರಚಿಸಿದ್ದಾರೆ. ಎಸ್.ಆರ್. ಹೆಗ್ಡೆಯವರ ಕುರಿತಾಗಿ ‘ನಾಡಿಗೆ ನಮಸ್ಕಾರ ಮಾಲೆ’ ಕೃತಿ ರಚಿಸಿಕೊಟ್ಟಿದ್ದಾರೆ. ‘ಬಂಟರು: ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’ ಇವರಿಗೆ ಬಹಳ ಹೆಸರು ತಂದ ಕೃತಿ. ಅವರ ಡಿ.ಲಿಟ್. ಸಂಪ್ರಬಂಧ ‘ತುಳುವರ ಮೂಲತಾನ ಆದಿ ಆಲಡೆ : ಪರಂಪರೆ ಮತ್ತು ಪರಿವರ್ತನೆ’. ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಇವರು ಹಲವು ಪ್ರಶಸ್ತಿ, ಸನ್ಮಾನ, ಗೌರವಗಳಿಂದ ಅಲಂಕೃತರು.

ಆದಿಯಲ್ಲಿ ಮಾನವನಿಗೆ ಅತೀತ ಶಕ್ತಿಯ ಭಯ ಕಾಡಿದಾಗ ಅವನಿಗೆ ರಕ್ಷಣೆಮಾಡುವವರ ಅಗತ್ಯ ಬಿತ್ತು. ಅಂತಹ ಅತೀತ ಶಕ್ತಿಯನ್ನು ತಾನೇ ಸೃಷ್ಟಿ ಮಾಡಿ ಭಯಗೊಂಡ ಮಾನವ ಮೊದಲಿಗೆ ಕಾಡಿನ ಕಲ್ಲಿನಲ್ಲಿ ಆ ಶಕ್ತಿಯನ್ನು ಆವಾಹಿಸಿದ. ಮನತುಂಬಿ ಭಾವ ಭಕ್ತಿಯಿಂದ ಆ ಶಕ್ತಿಗೆ ಶರಣಾದ. ಆ ಶಕ್ತಿಯೇ ಮುಂದೆ ಭೂತವಾಯಿತು, ದೈವವಾಯಿತು, ದೇವರಾಯಿತು.

ಕಾಡಿನಜೀವನದಲ್ಲಿ ಇದ್ದ ಮಾನವನಿಗೆ ಕಾಡಿನ ಕಲ್ಲುಗಳೇ ದೈವತ್ವದ ಸಂಕೇತವಾಯಿತು. ಹರಿವ ನೀರಿಗೂ ಆತ ಕೈ ಮುಗಿದ. ಆದರೆ ನೀರನ್ನು ಒಂದೆಡೆ ಹಿಡಿದಿಡಲಾಗಲಿಲ್ಲ. ಕಲ್ಲನ್ನು ಒಂದು ಮರದಡಿ ಅಥವಾ ಹೊಳೆ ದಂಡೆಯಲ್ಲಿ ಇಟ್ಟು ಆ ಕಲ್ಲಿಗೆ ಅತೀತ ಶಕ್ತಿಯನ್ನು ಆವಾಹಿಸಿದ. ತನ್ನವರನ್ನು ಸೇರಿಸಿ ಸಮೂಹವಾಗಿ ಪೂಜಿಸಿದ. ಆ ಕಲ್ಲನ್ನೇ ಬೂತವಾಗಿಸಿ, ದೇವರಾಗಿಸಿ ಬೇಡಿದ, ಕಾಡಿದ. ಇಂತಹ ಕಲ್ಲುಗಳು ಮುಂದೆ ತುಳುನಾಡಿನಲ್ಲಿ ಬೂತ ಎಂದು ಜನಮನ್ನಣೆ ಪಡೆಯಿತು.

ತುಳುನಾಡಿನ ಬೂತಗಳು ಕಾಡಿನ ಕಲ್ಲಿನಲ್ಲಿ ಪೂಜೆಗೊಂಡವುಗಳು. ಇಂದಿಗೂ ಅನೇಕ ಕಡೆ ಕಾಡಿನಲ್ಲಿಯೇ ಕಲ್ಲುಗಳಲ್ಲಿ ಬೂತಗಳು ಇವೆ. ಅದು ಅರಸು ದೈವ ಉಲ್ಲಾಯ ಇರಬಹುದು, ರಾಜನ್ ದೈವ ಆಗಿರಬಹುದು, ಪರಿವಾರ ಬೂತ /ದೈವಗಳಿರಬಹುದು. ಅಥವಾ ಚಾಕರಿಯ ಬೂತ/ ದೈವಗಳಾಗಿರಬಹುದು. ಎಲ್ಲಾ ಬೂತಗಳು ಕಾಡಿನ ಮಧ್ಯದಲ್ಲಿಯೇ ಕಲ್ಲಿನ ರೂಪದಲ್ಲಿ ಇವೆ, ಇತ್ತು. ಅದೂ ಬೂಡುಗಳ ಆಡಳಿತ ವ್ಯಾಪ್ತಿಯಲ್ಲಿಯ ಗುಡ್ಡದಲ್ಲಿ ಹೆಚ್ಚಿನ ಬೂತಗಳನ್ನು ಕಾಣಬಹುದಿತ್ತು. ಅಲ್ಲಿ ಓಡಾಡುವವರಿಗೆ ಕಣ್ಣಿಗೆ ಕಾಣಲು ಅದು ಬರೇ ಕಲ್ಲು. ಆದರೆ ಅದನ್ನು ಸ್ಥಾಪಿಸಿದ ರೀತಿಯಲ್ಲಿ ಅಥವಾ ನಟ್ಟ ರೀತಿಯಲ್ಲಿ ಅದು ನಮ್ಮಲ್ಲಿ ಸಂಭಾಷಣೆ ನಡೆಸುವಂತಿರುತ್ತದೆ. ಬೂತಗಳ ಬಗ್ಗೆ ಅರಿವು ಇರುವ ನಮಗೆ ಬೂತದ ಕಲ್ಲುಗಳು ಎದ್ದು ಬಂದು ನಮ್ಮಲ್ಲಿ ಸಂಭಾಷಿಸುತ್ತವೆ.

ನಾನು ಮೊದಲ ಬಾರಿಗೆ ಬಂಟರ ಅಧ್ಯಯನಕ್ಕೆ 1995ರ ಸುಮಾರಿಗೆ ಕ್ಷೇತ್ರಕಾರ್ಯಕ್ಕೆ ಹೋದಾಗ, ಮತ್ತೆ ತುಳುವರ ಮೂಲತಾನ ಅಧ್ಯಯನದ ಕ್ಷೇತ್ರಕಾರ್ಯಕ್ಕೆ ಹೋದಾಗ ಅನೇಕ ಬೀಡು ಅಥವಾ ಬೀಡು ಮನೆಗಳ ಸಮಾನ ಅಧಿಕಾರ ಇರುವ ಮನೆಗಳ ಕಾಡಿನಲ್ಲಿ ಇಂತಹ ಅನೇಕ ಬೂತದ ಕಲ್ಲುಗಳನ್ನು ನೋಡಿದ್ದೆ. ಅವು ಯಾವ ಬೂತಗಳು ಎಂದು ಮನೆಯವರೇ ನನಗೆ ಹೇಳಬೇಕಾಯಿತು. ಜಾಲ ಕೊರತಿ ಕೂಡಾ ಈ ಗುಂಪಿನಲ್ಲಿ ಇದ್ದರೂ ಸ್ವಲ್ಪ ಬೇರೆಯಾಗಿ ಇತ್ತು. ಕೊರಗ ತನಿಯ ಮಾತ್ರ ಬೇರೆಯೇ ಕಾಡಿನಲ್ಲಿ ಇದ್ದ. ಆತನೊಂದಿಗೆ ಬೇರೆ ಬೂತಗಳೂ ಇದ್ದುವು. ಈಗಲೂ ಇವೆ. ಪಂಜುರ್ಲಿ ಕಲ್ಲು, ಸಿರಿಗಳ ಕಲ್ಲು, ಚವುಂಡಿ ಕಲ್ಲು, ತನಿಯನ ಕಲ್ಲು-ಹೀಗೆ ಅನೇಕ ಬೂತಗಳು ಕೊರಗ ತನಿಯನ ಕ್ಷೇತ್ರದಲ್ಲೂ ಇವೆ. ಈಗಲೂ ತಾವು ಪೂಜೆ ಮಾಡುವ ಕಲದಲ್ಲಿ ಇರುವ ಕಲ್ಲುಗಳು ಯಾವ ಬೂತ ಎಂದು ಕೇಳಿದರೆ ‘ಗೊತ್ತಿಲ್ಲ’ ಎಂದು ಉತ್ತರ ಬರುತ್ತದೆ. ‘ನಮ್ಮ ಹಿರಿಯರು ಪೂಜಿಸುತ್ತಿದ್ದರು ನಾವು ಆ ಪೂಜೆಯನ್ನು ಮುಂದುವರಿಸುತ್ತಿದ್ದೇವೆ.’ ಎಂಬ ಉತ್ತರ ದೊರಕುತ್ತದೆ.


 



‘‘ಕಾಡ ಕಲ್ಲ್‌ಗ್ ಗುಡ್ಡೆದ ಪೂ, ತೋಡುದ ನೀರ್’ ಹೌದು ‘ಕಾಡಿನ ಕಲ್ಲಿನಲ್ಲಿ ನಂಬಿದ ಬೂತಕ್ಕೆ ಗುಡ್ಡೆಯ ಕೇಪುಲ ಹೂ, ತೋಡಿನಲ್ಲಿ ಹರಿವ ನೀರು’ ಇಷ್ಟೇ ಸಾಕು. ಅಷ್ಟಕ್ಕೇ ಒಲಿದು ಬರುವ ಬೂತಗಳು! ಯಾವ ಆಡಂಬರವನ್ನೂ ಅವು ಬಯಸುವುದಿಲ್ಲ. ಮನತುಂಬಿ ಪ್ರಾರ್ಥಿಸಿದರೆ ಸಾಕು. ಜನಸಾಮಾನ್ಯರಿಗೆ ಅಭಯನೀಡಿ ಮಾನಸಿಕ ನೆಮ್ಮದಿಯನ್ನು ಕಾಪಾಡುವ ಶಕ್ತಿಗಳು ಅವು. ‘ಸೋದರಮಾವನಾಗಿ ಬೆನ್ನಲ್ಲಿ ನಿಂತು ರಕ್ಷಿಸುವೆ. ತಾಯಿಯಾಗಿ ಮೊಲೆಹಾಲು ಉಣಿಸಿ ಪೊರೆವೆ’ ಎಂಬ ಅಭಯ ನೀಡುತ್ತದೆ. ತನ್ನ ವ್ಯಾಪ್ತಿಯಲ್ಲಿ ಇರುವ ಹತ್ತು ತಾಯಿಯ ಮಕ್ಕಳನ್ನು (ಜಾತಿ ಧರ್ಮ ನೋಡದೆ) ಒಂದೇ ಮಡಿಲಲ್ಲಿ ಇರಿಸಿ ರಮಿಸಿ ಕಾಯುವೆ’ ಎಂದು ಸಾಂತ್ವನ ನೀಡುತ್ತದೆ.

ಮೂಲತಃ ಕಾಡಿನಲ್ಲಿ ಮುರಕಲ್ಲಿನಲ್ಲಿ ಈ ಶಕ್ತಿಗಳನ್ನು ಸಂಕೇತಿಸಲಾಗಿತ್ತು. ಈಗಲೂ ಅನೇಕ ಕಡೆ ಮುರಕಲ್ಲಿನಲ್ಲಿ ತುಳುವರ ಬೆರ್ಮೆರ್ ದೈವ ಕೂಡಾ ಇವೆ. ಈ ಬೆರ್ಮೆರ್ ಪ್ರಕೃತಿ/ಭೂಮಿಯ ಗರ್ಭದಿಂದ ಒಡಮೂಡಿರುವ ಶಕ್ತಿ. ತಾಯಿ ಗರ್ಭದಿಂದ ಮೂಡಿ ಬಂದ ಮಗುವಿನಂತೆ. ಬೆರ್ಮೆರ್ ಉಭಯಲಿಂಗಿ ದೈವ. ತುಳುನಾಡಿನ ಎಲ್ಲಾ ಇತರ ಬೂತಗಳು ಬೆರ್ಮೆರೆ ಪರಿವಾರ ದೈವಗಳು ಎಂದು ಹೇಳುತ್ತವೆ ಬೆರ್ಮೆರೆ ಪಾಡ್ದನ. ಬೆರ್ಮೆರ್ ದೈವದ ಎಡದಲ್ಲಿ......ಬಲದಲ್ಲಿ...ಸಾವಿರಾರು ಬೂತಗಳು ನೂರೊಂದು ಗಂಡಗಣಗಳು ಮೂಡಿ ಬರುತ್ತವೆ ಎನ್ನುತ್ತದೆ ಪಾಡ್ದನ.

ಹೀಗೆ ಸಾವಿರಾರು ಬೂತಗಳ ಪರಿವಾರದೊಂದಿಗೆ ಬೆರ್ಮೆರೆ ಉದಿಪನೆ ಆಗುತ್ತದೆ. ಗಮನಿಸಿದರೆ ಅವು ಎಲ್ಲವೂ ಹಾವುಗಳು. ರೈತಸ್ನೇಹಿಗಳು. ಬೂತಗಳನ್ನು ಶಿವನ ಗಣಗಳು ಎನ್ನುವ ನಂಬಿಕೆ, ತುಳು ಭೂತಾರಾಧನೆಯಲ್ಲಿ ಇಲ್ಲ. ಅಥವಾ ವೈದಿಕ ಸಾಹಿತ್ಯದಲ್ಲೂ ನಮ್ಮ ಗಮನಕ್ಕೆ ಬಂದಿಲ್ಲ. ದೆಯ್ಯೊಲೆ ನಲಿಕೆಯ ಸಿರಿ ಪಾಡ್ದನದಲ್ಲಿ ಸಿರಿಗಳು (ಅತಿಕಾರೆ ಭತ್ತದ ತಳಿ) ತುಳುನಾಡಿಗೆ ಬಂದಾಗ ಅದರ ಪರಿವಾರಶಕ್ತಿಗಳಾಗಿ ಕಾಡಿನ ಕೋಣ (ಮುಂದೆ ಮಯಿಸಂದಾಯ ಎಂದು ಕರೆಸಿಕೊಳ್ಳುತ್ತದೆ) ಮತ್ತು ಸಾವಿರಾರು ಬೂತಗಳು ಮತ್ತು ನೂರಾರು ಗಂಡಗಣಗಳು ಬರುತ್ತವೆ. ಈ ದೆಯ್ಯೊಲೆ ನಲಿಕೆ ಆಚರಣೆಯ ಸಂದರ್ಭದಲ್ಲಿ ಈ ಭೂಮಿಯ ಎಲ್ಲಾ ಶಕ್ತಿಗಳು ಸಿರಿ ಶಕ್ತಿಗಳ ಅಧೀನ ಶಕ್ತಿಗಳಾಗಿ ಇವೆ. ಸಾರ್ವಭೌಮತೆ ಅವಳಿ ಸಿರಿಗಳಿಗೆ ಇವೆ. ಹೀಗಾಗಿ ತಾಯಿ ಶಕ್ತಿಗಳ ಈ ನಾಡು ‘ಸಿರಿಬಾರಿ ಲೋಕ’ ಎಂದು ಕರೆಸಿಕೊಂಡಿದೆ.

ವಿವರಗಳಿಗೆ ನೋಡಿ (ಇಂದಿರಾ ಹೆಗ್ಗಡೆ ‘ಸಿರಿಬಾರಿ ಲೋಕ ತುಳುನಾಡು’) ಪುರಾಣ ಕಟ್ಟಿದ ಜನರು ಬೂತಗಳನ್ನು ಶಿವನ ಗಣಗಳನ್ನಾಗಿಸಿದರು, ಸಿರಿಗಳ /ತಾಯಿ ಶಕ್ತಿಗಳ ತುಳು ನಾಡಿಗೆ ಪರಶುರಾಮನ ಹೆಸರು ಕೆತ್ತಿಸಿದರು. ಆದರೆ ತುಳುನಾಡಿನ ಬೂತಗಳು ಆಕಾಶದಿಂದ ಬಂದವುಗಳಲ್ಲ. ಇವು ಸಿಂಧೂ ನಾಗರಿಕತೆಯಲ್ಲಿಯೇ ಇದ್ದ ಶಕ್ತಿಗಳು.

ಬೂತಗಳು ಇದ್ದಲ್ಲಿ ಇಲ್ಲಿ ಸ್ವರ್ಗ ನರಕದ ಕಲ್ಪನೆಯೂ ಇಲ್ಲ. ಬದುಕಿದಷ್ಟು ಕಾಲ ತಾನು ನಂಬಿರುವ ಬೂತದ ಜೊತೆ ಸುಖ ದುಃಖವನ್ನು ಹಂಚಿ ತಿನ್ನುವ ಕುಟುಂಬ ಸದಸ್ಯರು ಸತ್ತ ಮೇಲೂ ತಮ್ಮ ಕುಲದೈವ ಬೆರ್ಮರ್ ಬಳಿಗೆ ಸೇರ ಬಯಸುತ್ತಾರೆ. ‘ಇದ್ದರೆ ಇಲ್ಲಿ ಸತ್ತರೆ ಅಲ್ಲಿ ಬೆರ್ಮೆರ ಬಳಿ’ ಎಂಬ ನುಡಿ ಇದೆ.

ಬೂತಗಳ ಕೊಡುವ ನುಡಿಯಲ್ಲಿಯೇ ಇವೆ. ‘‘ಕುಟುಂಬ ಸಂಸಾರದ ನಡುಟು ಉಪ್ಪು ಬೂತ/ದೈವ ಯಾನ್’’ ಎಂದು.

ಕಾಡಿನ ಬೂತ/ದೈವಗಳನ್ನು ನಾಡಿಗೆ ತಂದರು: ಮಾನವ ಕಾಡನ್ನು ನಾಡನ್ನಾಗಿಸಿದ. ನಾಗರಿಕತೆ ಬೆಳೆಯಿತು. ಆದರೂ ದೇವರ ಭಯ ಉಳಿಯಿತು.

ಬುಡಕಟ್ಟು ಮೂಲದ ಪಾಳೆಯಗಾರನಿಗೂ ಊರಾಳಲು ಬೂತದ ಆಸರೆ ಬೇಕಾಯಿತು. ಆ ಸಂದರ್ಭದಲ್ಲಿ ಕಾಡಿನ ಕಲ್ಲಿನಲ್ಲಿ ಇದ್ದ ಬೂತಗಳನ್ನು ನಾಡಿಗೆ, ಬೀಡಿಗೆ ತರುವ ಕೆಲಸ ಆರಂಭವಾಯಿತು. ಬೂತಗಳನ್ನು ಹೆಚ್ಚಾಗಿ ಪಿಂಗಾರದ ಪಾಲೆಯಲ್ಲಿ ಆವಾಹಿಸಿ ಚಾವಡಿಗೆ ತಂದ ಬಗ್ಗೆ ಪಾಡ್ದನಗಳು ಹೇಳುತ್ತವೆ.

ಅನೇಕ ಕಡೆ ನೆಲೆನಿಂತ ಪಾಳೆಯಗಾರರು ತಾವು ನಿಂತ ಜಾಗದಲ್ಲಿ ಬೀಡನ್ನು ಕಟ್ಟಿದರು. ಆ ಬೀಡಿನ ಚಾವಡಿಯಲ್ಲಿ ಉಲ್ಲಾಯನಾಗಿ ಬೆರ್ಮೆರ್ ನೆಲೆಯಾಗುತ್ತಾನೆ ಉಯ್ಯಾಲೆಯಲ್ಲಿ! ಅವನ ಪರಿವಾರ ದೈವಗಳೆಲ್ಲ ಆ ಬೀಡಿನ ಪರಿಸರದಲ್ಲಿ ಕಲ್ಲಿನಲ್ಲಿ ನೆಲೆಯಾಗುತ್ತಾರೆ. ಇಲ್ಲಿ ಅವುಗಳಿಗೆ ಹೆಸರು ನೀಡಲಾಗುತ್ತದೆ. ನಾಗರಿಕತೆ ತಂದ ಬದಲಾವಣೆ ಇದು.

ಸೀಮೆ (ರಾಜ್ಯ) ಕಾಯುವ ಬೂತಗಳು ಸೀಮೆ ದೈವಗಳು. ಉಲ್ಲಾಯ ಅರಸು ದೈವ -ಇವೆಲ್ಲ ಸೀಮೆ ದೈವಗಳು. ಅದರ ಕೊಡೆಯಡಿಯಲ್ಲಿ ರಾಜನ್ ದೈವಗಳು ಹಾಗೂ ಇತರ ಪರಿವಾರ ದೈವಗಳು ಇರುತ್ತವೆ,

ಭೂಮಿ ಉಳ್ಳವರಲ್ಲಿ ಮಾತ್ರ ಬೂತ ಇರುವುದು ಎಲ್ಲರಿಗೂ ತಿಳಿದ ವಿಚಾರ. ಭೂಮಸೂದೆ ಜಾರಿಗೆ ಬರುವ ವರೆಗೂ ಬೂತಗಳು ಭೂಮಿ ಉಳ್ಳವರ ಶಕ್ತಿಗಳಾಗಿದ್ದುವು. ಬೂತದ ಚಾವಡಿಗಳಿಗೆ ಊರ ಜನರೆಲ್ಲ ಭಕ್ತಿಯಿಂದ ನಡೆಯುತ್ತಿದ್ದರು, ಗೌರವಿಸುತ್ತಿದ್ದರು. ಊರಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿದ್ದರೂ ಚಾವಡಿಗೆ ಹೂಕಾಯಿ ತಂದು ಅರ್ಪಿಸಿ ತಮ್ಮ ಕಾರ್ಯ ಸಾಂಗವಾಗಿ ನೆರವೇರಿಸಲು ಬೇಡುತ್ತಿದ್ದರು. ಬ್ರಾಹ್ಮಣರೂ ಚಾವಡಿಗೆ ಬರುವ ಸಂಪ್ರದಾಯ ಈಗಲೂ ಕೆಲವೆಡೆ ಇದೆ.

ಈ ಅರ್ಥದಲ್ಲಿ ಬೂತಗಳು ಸಂಪೂರ್ಣ ಭೂಮಾಲಕರ ಅಂಕೆಯಲ್ಲಿ ಇರಬೇಕಾಗಿತ್ತು. ಆದರೆ ಬೂತಗಳ ಆಡಳಿತ ಭೂಮಾಲಕರಲ್ಲಿ ಇದ್ದರೂ ಬೂತಗಳ ನೇಮ ನೆರಿಯಲ್ಲಿ ಭಾಗವಹಿಸುವ ಕಲಾವಿದರು ಸ್ಥಳೀಯರಲ್ಲ ವಲಸೆ ಸಮುದಾಯ ಎನ್ನುತ್ತಾರೆ ಪೂರ್ವ ಸೂರಿಗಳು.

‘‘ತುಳುನಾಡಿನ ಭೂತಾರಾಧನೆ ನಾಗಾರಾಧನೆಯ ಮುಖ್ಯ ವೈಶಿಷ್ಟ್ಯವೆಂದರೆ ನರ್ತಕನ ಮೇಲೆ ದೈವ /ಬೂತ ಆವೇಶವಾಗಿ ಆತ ಭಕ್ತರೊಂದಿಗೆ ನಡೆಸುವ ಸಂಭಾಷಣೆ.’’ ಎನ್ನುತ್ತಾರೆ ಸುಶೀಲಾ ಉಪಾಧ್ಯಾಯ ಅವರು.

ಹಾಗಾದರೆ ಈ ನರ್ತಕರು ಯಾರು? ‘‘ದಕ್ಷಿಣ ಕನ್ನಡದ ಬೂತ ಕಟ್ಟುವವರಾದ ಈ ನಲಿಕೆ ಜನಾಂಗ ಮಂಗಳೂರಿನಿಂದ ಉಡುಪಿಯವರೆಗಿನ ಪ್ರದೇಶದಲ್ಲಿ ತಮ್ಮನ್ನು ನಲಿಕೆ ಪಾಣಾರ ಎನ್ನುತ್ತಾರೆ. ಕನ್ನಡ ಮಾತನಾಡುವ ಪ್ರದೇಶವಾದ ಕುಂದಾಪುರ ತಾಲೂಕಿನಲ್ಲಿ ಪಾಣಾರರೆಂದೂ ಮಂಗಳೂರಿನಿಂದಾಚೆ ತೆಂಕುಭಾಗದಲ್ಲಿ ಅಜಲಾಯರೆಂದೂ ಕಾಸರಗೋಡಿನಲ್ಲಿ ಕೋಪಾಲರೆಂದೂ ವಿಟ್ಲ ಸೀಮೆಯಿಂದಾಚೆ ‘ನಲ್ಕೆದಿಕ್ಕ’ ಎಂಬುದಾಗಿಯೂ ಹೇಳಿ ಕೊಳ್ಳುತ್ತಾರೆ. ಆದರೆ ನಲ್ಕೆ ದಿಕ್ಕರಲ್ಲಿ ಮಾತ್ರ ಇವರಿಗೆ ಸಂಪರ್ಕ ಇಲ್ಲ. 1891ರ ಜನಗಣತಿಯ ದಾಖಲೆಯಲ್ಲಿ ಪಾಣಾರರನ್ನು ‘ಪರಯ’ ವರ್ಗದ ಉಪವಿಭಾಗ ಎನ್ನಲಾಗಿದೆ.’’ (ಸುಶೀಲಾ ಉಪಾಧ್ಯಾಯ ಪು. 88)

ನೇಮ ನೆರಿ ಸಂದರ್ಭದಲ್ಲಿ ಬೂತಗಳನ್ನು ಮೈಮೇಲೆ ಆವಾಹಿಸುವ ನಲ್ಕೆ ಪಂಬದ/ಪರವ ವರ್ಗದವರು ನರ್ತನ ಸೇವೆಯ ಮೂಲಕ ಪ್ರದರ್ಶನ ಕಲೆಯನ್ನಾಗಿಸುತ್ತಾರೆ. ಪಂಬದ/ಪರವ/ನಲ್ಕೆ ವರ್ಗದವರು ಕೋಲ/ನೇಮದಲ್ಲಿ ಬಣ್ಣ ಹಚ್ಚುತ್ತಾರೆ. ಬೇರೆ ಬೇರೆ ಬೂತಗಳಿಗೆ ಬೇರೆ ಬೇರೆ ಬಣ್ಣಗಾರಿಕೆ ಮಾಡುತ್ತಾರೆ. ತಲೆಯ ಮೇಲೆ ಅಣಿ(ಪ್ರಭಾವಳಿ) ಇಡುತ್ತಾರೆ. ಪ್ರಭಾವಳಿ ಕೂಡಾ ಅರಸು ದೈವಗಳಿಗೆ, ರಾಜನ್ ದೈವಗಳಿಗೆ ಬೇರೆ ಬೇರೆ ಇವೆ. ಅರಸು ದೈವಗಳಿಗೆ 1001 ಕಂಗಿನ ಹಾಲೆಯಲ್ಲಿ ನಾಗಚಿತ್ರ ಬಿಡಿಸುತ್ತಾರೆ. ಹೆಣ್ಣು ಶಕ್ತಿ ಆದರೆ ಎದೆಯ ಮೇಲೆ ಮೊಲೆ ಕಟ್ಟು ಧರಿಸುತ್ತಾರೆ. ಗಂಡು ಬೂತ ಆದರೆ ಪೊದೆ ಮೀಸೆಯೂ ಇರುತ್ತದೆ. ಈ ಬಣ್ಣಗಾರಿಕೆ ಅಲಂಕಾರ ಎಲ್ಲಾ ನಲ್ಕೆ ಪಂಬದ ವರ್ಗದವರ ಅರಿವಿನಲ್ಲಿ ಇದ್ದವುಗಳು. ಸೊಂಟಕ್ಕೆ ತೆಂಗಿನ ಎಳೆ ಗರಿಯನ್ನು ಸಣ್ಣಗೆ ಸೀಳಿ ಸುತ್ತುತ್ತಾರೆ. ಕಾಳಿಗೆ ಗಗ್ಗರ ಎನ್ನುವ ಗಟ್ಟಿ ಧ್ವನಿಯ ಗೆಜ್ಜೆ ಇರುತ್ತದೆ. ಮಾತ್ರವಲ್ಲ ನೇಮ ಕೋಲ ಸಂದರ್ಭದಲ್ಲಿ ಒಳ್ಳೆಯ ನೃತ್ಯ ಪ್ರದರ್ಶನ ನೀಡುತ್ತಾರೆ ಬೂತಗಳನ್ನು ಪ್ರತಿನಿಧಿಸುವ ನಲ್ಕೆ ಪರವ ಪಂಬದರು. ಹಾಗೂ ಬೀಡಿನ ಗುತ್ತಿನ ಯಜಮಾನನೊಡನೆ ಸಂಭಾಷಣೆ ನಡೆಸುತ್ತಾರೆ. ನ್ಯಾಯ ತೀರ್ಮಾನ ಮಾಡುತ್ತಾರೆ. ಆ ಸಂದರ್ಭದಲ್ಲಿ ಅವರು ಬೂತವೇ(ಶಕ್ತಿಯೇ) ಆಗಿ ಜನರ ಭಾವ ಪ್ರಪಂಚಕ್ಕೆ ಸೇರುತ್ತಾರೆ.

ಕೆಲವು ಪರಿವಾರ ದೈವಗಳಿಗೆ ಈ ಅಲಂಕಾರ ಇರುವುದಿಲ್ಲ. ಬೂತಗಳ ಸ್ಥಾನಮಾನ ಅವುಗಳಲಂಕಾರದಲ್ಲೂ ಪ್ರತಿಫಲಿಸುತ್ತವೆ.

ವಲಸೆ ಬಂದ ಸಮುದಾಯ ಸ್ಥಳೀಯರ ಆರಾಧನೆಯ ಮೇಲೆ ಇಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದು ಹೇಗೆ ಎಂಬ ಚೋದ್ಯ ನನಗೆ ಇರುವುದರಿಂದ ಈ ವಿಷಯ ಎತ್ತಬೇಕಾಯಿತು. ಅದೇ ಸಂದರ್ಭದಲ್ಲಿ ರಾಜನ್ ದೈವ ಅಥವಾ ಅರಸು ದೈವವನ್ನು (ಮಾನೆಚ್ಚಿ)ಮಾನವ ರೂಪದಲ್ಲಿ ಪ್ರತಿನಿಧಿಸುವ ಬಂಟ, ಬಿಲ್ಲವ ಅಥವಾ ಇತರ ಕೆಲವು ಜಾತಿಗಳಿಗೆ ಯಾವ ಅಲಂಕಾರವೂ ಇರಲ್ಲ.

‘‘ತುಳುನಾಡಿನಲ್ಲಿ ಪೂಜೆಗೊಳ್ಳುವ ಈ ಬೂತಗಳು ದೂರದ ಸ್ವರ್ಗದಲ್ಲಿ ಆಸೀನರಾದ ದೇವತೆಗಳಲ್ಲ. ಸದಾ ಭಕ್ತರ ಜೊತೆ ಇದ್ದು ಅವರ ಆಗುಹೋಗುಗಳಲ್ಲಿ ಪಾಲುಗೊಂಡು ಅವರ ರಕ್ಷಕರಾಗಿ ತಾಯಿಯಾಗಿ, ಹಿತಮಿತ್ರರಾಗಿ, ಉಪದೇಶಕರಾಗಿ ಹಾಗೂ ನ್ಯಾಯಮಾರ್ಗದಿಂದ ತಪ್ಪಿನಡೆದರೆ ಶಿಕ್ಷೆ ಕೊಡುವವರಾಗಿ ಕಣ್ಣೆದುರಿಗಿರುವ ಅಲೌಕಿಕ ಶಕ್ತಿಗಳು. ಅವು ಸತ್ಯ ನ್ಯಾಯಗಳಿಗೆ ಜಯತೋರಿಸುವ ಆದರ್ಶ ಶಕ್ತಿಗಳಾಗಿ ಕಾಣಿಸಿಕೊಳ್ಳುತ್ತವೆ.’’ (ಸುಶೀಲಾ ಉಪಾಧ್ಯಾಯ ದಕ್ಷಿಣ ಭಾರತದ ಕೆಲವು ನೋಟಗಳು ಪು. 19)




 


ತುಳುನಾಡಿನ ಭೂತಾರಾಧನೆ ದ್ರಾವಿಡ ಸಂಸ್ಕೃತಿಯ ಆರಾಧನೆ. ದ್ರಾವಿಡ ಪರಂಪರೆ ಅದು. ತಾವು ನಂಬಿದ ಶಕ್ತಿಯನ್ನು ಸಂತೃಪ್ತಿಗೊಳಿಸಿ ಮಾನಸಿಕ ನೆಮ್ಮದಿ ಪಡೆಯುವುದು ಭೂತಾರಾಧನೆಯ ಮೂಲ ಉದ್ದೇಶ. ತಾವು ತಿನ್ನುವ ಆಹಾರವನ್ನು, ಅದು ಮಾಂಸಾಹಾರ ಇರಲಿ, ಸಸ್ಯಾಹಾರ ಇರಲಿ -ಅದನ್ನು ಮೊದಲು ತಾವು ಪೂಜಿಸುವ, ನಂಬಿ ನಡೆಯುವ ಶಕ್ತಿಗಳಿಗೆ ಅರ್ಪಿಸಿ ಮತ್ತೆ ತಿನ್ನುವುದು ಭೂತಾರಾಧನೆಯ ವೈಶಿಷ್ಟ್ಯ. ಜೀವಮಾನ ಪೂರ್ತಿ ತಾವು ಪೂಜಿಸುವ ದೇವರ ಬಳಿ ಸತ್ತ ಮೇಲೆ ಸೇರಿ ಮುಕ್ತಿ ಪಡೆಯುವೆವು ಎಂಬ ಬಲವಾದ ನಂಬಿಕೆ ಈ ಆರಾಧನೆಯಲ್ಲಿದೆ.

ಸಂಗಂ ಕಾಲದ ಪ್ರಸಿದ್ಧ ಕಾವ್ಯ ಶಿಲಪ್ಪದಿಗಾರಂನಲ್ಲಿ ಒಂದು ಪ್ರಸಂಗ ಬರುತ್ತದೆ. ಆ ಪ್ರಕಾರ ಕನ್ನಗಿ ಮತ್ತು ಅವರ ಪತಿ ಕೋವಲಂ ದೇಶಾಂತರ ಹೋಗುವಾಗ ಮಧುರೈ ಕಾಡಿನಲ್ಲಿ ‘ಕೋಲ’ ನೋಡುತ್ತಾರೆ. ಸಂಗಂ ಕಾಲದಲ್ಲಿಯೇ ಕೋಲ ಪದ ಬಳಕೆಯಲ್ಲಿತ್ತು. ಆ ಕೋಲದಲ್ಲಿ ದುರ್ಗಿಯ ಪಾತ್ರಿಯಾಗಿ ಕನ್ನೆ/ಕನ್ನಿಕೆ ಇದ್ದಳು.

ಕುಕ್ಕಿಲ ಕೃಷ್ಣ ಭಟ್ಟರು ಕನ್ನಡಕ್ಕೆ ಅನುವಾದಿಸಿದ ಶಿಲಪ್ಪದಿಗಾರಂ ತಮಿಳು ಮಹಾಕಾವ್ಯದ ಆಯ್ದ ಭಾಗ ಗಮನಿಸಬಹುದು. ಇಲ್ಲಿ ದುರ್ಗೆಯ ಪೂಜಾರಿಣಿ ಮಹಿಳೆ. ಕೋಲದ ಪಾತ್ರಿಯಾಗಿ ಕನ್ನಿಕೆ ಇದ್ದಾಳೆ. ನೂರಾರು ವರುಷಗಳ ಸಾಂಸ್ಕೃತಿಕ ಹರಿವಿನಲ್ಲಿ ಈಗ ಮಹಿಳೆ ಪೂಜಾರಿಣಿಯೂ ಆಗುವಂತಿಲ್ಲ. ದುರ್ಗೆ ಅಥವಾ ಯಾವುದೇ ಶಕ್ತಿಯ ಪಾತ್ರಿಯಾಗುವ ಹಾಗೂ ಇಲ್ಲ.

ಆ ಕೃತಿಯಲ್ಲಿ ಹೀಗೆ ಮುಂದುವರಿಸಲಾಗಿದೆ. ಬೇಡಕುಟುಂಬದವರೆಲ್ಲ ಓಡೋಡಿ ಬಂದು ಮಹಾಗೊರವಮ್ಮ ದೇವಿಗೆ ‘ಕೋಲ’ವನ್ನು ಒಪ್ಪಿಸಲು ಸನ್ನದ್ಧರಾದರು. ತಮ್ಮೊಳಗೆ ಉತ್ತಮಕುಲದಲ್ಲಿ ಜನಿಸಿದ ರೂಪವತಿಯಾದ ಒಬ್ಬ ಬಾಲಿಕಾ ಮಣಿಯನ್ನು ಕರೆತಂದು ನೀಳವಾದ ಅವಳ ಕೇಶ ಪಾಶಗಳನ್ನು ತಿರುವಿ ನೆತ್ತಿಯ ಮೇಲೆಕ್ಕೆತ್ತಿ ಮುಡಿಕಟ್ಟಿದರು. ಆ ಸಿರಿಮುಡಿಗೆ ಮರಿಹಾವನ್ನು ಮೂರುಸುತ್ತಾಗಿ ಸುತ್ತಿ ಸೂಡಿಸಿದರು. ಆಗ ತಾನೇ ಕೊಂದು ತಂದ ಕಾಡ ಹಂದಿಯ ದಾಡೆಯನ್ನು ಕಿತ್ತು ಅವಳ ಜಟಾಜೂಟದಲ್ಲಿ ಬಾಲಚಂದ್ರನನ್ನಾಗಿ ಮುಡಿಸಿದರು. ಹುಲಿಯ ಹಸಿದೊಗಲನ್ನು ಉಡಿಸಿ ಹುಲಿಯ ಹಲ್ಲುಗಳ ಸರಮಾಲೆಯನ್ನು ಅವಳಿಗೆ ಕಂಠಾಭರಣವನ್ನಾಗಿ ತೊಡಿಸಿದರು. ಕಾರ್ಮುಗಿಲಿನಂತೆ ಮೈಬಣ್ಣವುಳ್ಳ ದಷ್ಟಪುಷ್ಟವಾಗಿ ಬೆಳೆದಿರುವ ಅಂಗೋಪಾಂಗವುಳ್ಳ ಆ ಬೇಡರ ಬಾಲಿಕೆಯನ್ನು ಈ ಪ್ರಕಾರ ಗೊರವಮ್ಮನಂತೆ ‘ಅಯಿತ’ (ಇದು ತುಳು ಪದ) ಮಾಡಿ ಕವಲೊಡೆದ ಬಿರಿಕೋಡುಗಳುಲ್ಲ ಆನ್ ಕಡವೆಯ ಮೇಲೇರಿಸಿದರು. ನವವಿಧದ ಕುಂಕುಮಾದಿಗಳನ್ನು ಅಡಿಯಿಂದ ಮುಡಿಯವರೆಗೂ ಲೇಪಿಸಿ ಕೇಕರ (ಕೇಪುಲ?) ಪುಷ್ಪಗಳಿಂದಲಂಕರಿಸಿದರು. ಅವಲಕ್ಕಿ, ಎಳ್ಳುಂಡೆ, ರಕ್ತಾನ್ನ ಚಿತ್ರಾನ್ನ ಮೊದಲಾದ ನೈವೇದ್ಯ ದ್ರವ್ಯಗಳನ್ನು ಬಾರಗಾಗಿ (ತುಳು -ಬಾರ್ನೆಗ್) ಮೊಗಳಲ್ಲಿ ಮರುವ ಸ್ತ್ರೀಯರು ಎತ್ತಿ ಹಿಡಿದರು. ಅವರೊಂದಿಗೆ ಕೊಂಬು, ಕಹಳೆ, ಡೋಲು, ಪರೆ, ದುಡಿ ಮೊದಲಾದ ವಾದ್ಯಗಳನ್ನು ‘ವರಿಕೋಲ’ ಒಪ್ಪಿಸುವುದಕ್ಕೆ ಅಣಿಮಾಡಿದರು. ತದನಂತರ ಮಹಾಬಲಿಯನ್ನು ಸಮರ್ಪಿಸುವುದಕ್ಕಾಗಿ ಸಿದ್ಧಗೊಳಿಸಿರುವ ಬಲಿಪೀಠದ ಬಳಿಗೆ ಬಂದರು. ಅದರ ಮೇಲೂ ಗಂಧಪುಷ್ಪಾದಿಗಳನ್ನಿಟ್ಟು ಸರ್ವರೂ ಹೂಹಾಕಿ ತಲೆಬಾಗಿ ವಂದಿಸಿದರು. ಅಷ್ಟರಲ್ಲಿ ಪೂಜಾರಿಣಿಯಾಗಿರುವ ಶಾಲಿನಿಯು ಆವೇಶಗೊಂಡವಳಾಗಿ ಏಣವಾಹಿನಿಯಾದ ಆ ದುರ್ಗಾದೇವಿಯನ್ನು ಸ್ತುತಿಸಿದಳು. ಒಡನೆಯೇ ಪ್ರತ್ಯಕ್ಷ ದೇವಿಯೇ ತಾನಾಗಿ ಸ್ತುತಿಗೊಂಡು ಕಡವೆಯ ಮೇಲೇರಿದ್ದ ಆ ಶಬರ ಬಾಲಿಕೆಯು, ಈ ಕಟ್ಟಳೆ ಕೋಲವನ್ನು ಭಯಚಕಿತರಾಗಿ ನೋಡುತ್ತಿರುವ ಕೌಂತೀ ಸಮೇತರಾದ ಆ ಮೂವರ ಕಡೆಗೆ ದೃಷ್ಟಿಯನ್ನು ಹಾಯಿಸಿದಳು. ಕನ್ನಗಿಯ ಕಡೆಗೆ ಕೈನೀಡಿ ತೋರ್ಬೆಟ್ಟಿನಿಂದ ತೋರಿಸುತ್ತಾ ‘ಇವಳೇ ನಮ್ಮ ಕೊಂಗುನಾಡಿನ ಕುಡುಮಲೆಗೆ ಅಧಿದೇವತೆಯೂ ನಾಡೊಡೆಯನಾದ ಪಾಂಡ್ಯನ ರಾಜಲಕ್ಷ್ಮಿಯೂ ಎನಿಸಿರುವಳು. ಸಮಗ್ರ ಲೋಕದ ತಪಃಫಲವಾಗಿ ಅವತರಿಸಿದ ತ್ರಿಲೋಕ ಸುಂದರಿಯಾದ ಇವಳು ‘ಕನ್ನಿಕಾ ಮಣಿಯಾಗಿರುವಳು. ಇದನ್ನು ಎಲ್ಲರೂ ತಿಳಿದುಕೊಳ್ಳಿ; ಎಂದು ಉದ್ಗರಿಸಿದಳು.’ (ಶಿಲಪ್ಪದಿಗಾರಂ ಪು. 41, ಕನ್ನಡ ವಿಶ್ವವಿದ್ಯಾಲಯ ಹಂಪಿ.)

ಇಲ್ಲಿ ನಡೆದಿರಬಹುದಾದ ಇಡಿಯ ಪ್ರಕ್ರಿಯೆಯ ಪ್ರಭಾವವು ತುಳುನಾಡಿನಲ್ಲಿ ಈಗಲೂ ನಡೆಯುವ ಕೋಲ/ನೇಮಗಳ ಆಚರಣೆಯಲ್ಲಿ ಇದೆ. ಬೂತ/ದೈವ ನುಡಿಕೊಡುವುದು ಇದೇ ಪ್ರಕ್ರಿಯೆಯಲ್ಲಿ. ಹೀಗೆ ತುಳುನಾಡಿನ ಭೂತಾರಾಧನೆಯ ಮೂಲವನ್ನು 2ನೆಯ ಶತಮಾನದ ಸಂಗಂ ಕಾಲದಲ್ಲಿ ಕಾಣಬಹುದು.

ಸಂಗಂ ಕಾಲದಲ್ಲೇ ಭೂತ ಎನ್ನುವ ದೈವಾರಾಧನೆ ಇದ್ದುದನ್ನು ತಿಳಿಯುತ್ತೇವೆ. ‘ಪದಿಲ್ಪತ್ತು ಶಿಲಪ್ಪಗಾರಂ ಮೊದಲಾದ ಸಂಗ ಸಾಹಿತ್ಯದಲ್ಲಿ ಭೂತಾರಾಧನೆಯ ಕುರಿತು ಹೇಳಲಾಗಿದೆ. ಆ ಬೂತಗಳು ಶ್ರೀ ವಿಷ್ಣು ಶಿವ ಮೊದಲಾದ ಶ್ರೇಷ್ಠದೇವತೆಗಳಂತಹವರ ಸ್ಥಾನದಲ್ಲಿ ಇಲ್ಲದೆ ಹೋದರೂ ಇಂದ್ರ ಮುರುಗ (ಷಣ್ಮುಗ) ಮೊದಲಾದ ಸ್ಥಾನದಲ್ಲಿರಿಸಿ ಆರಾಧಿಸಲ್ಪಟ್ಟಿವೆ. ಆನಂತರದ ಕಾಲದಲ್ಲಿ ಬೂತ ಎನ್ನುವುದಕ್ಕೆ ಕ್ರೂರ ದುರ್ದೇವತೆ ಸಣ್ಣದೇವತೆ ಎನ್ನುವ ಅರ್ಥವನ್ನು ಕಲ್ಪಿಸಿದಂತೆ ಸಂಗಂ ಕಾಲದಲ್ಲಿ ಬೂತ ಎನ್ನುವ ದೈವವನ್ನು ಕೀಳ್ಮಟ್ಟದ ಸ್ಥಾನದಲ್ಲಿಟ್ಟು ಪರಿಗಣಿಸಿರಲಿಲ್ಲ. ಬೂತ ಎನ್ನುವ ದೈವವನ್ನು ಉನ್ನತ ಸ್ಥಾನದಲ್ಲಿರಿಸಿ ಪರಿಗಣಿಸಿದ ಕಾರಣದಿಂದಲೇ ಆ ಕಾಲದಲ್ಲಿ ಜನರೂ ಆ ಹೆಸರನ್ನು ತಮ್ಮ ಹೆಸರಾಗಿ ಇಟ್ಟುಕೊಳ್ಳುತ್ತಿದ್ದರು. ಉದಾ: ಬೂತ ಪಾಂಡಿಯಾನ್ , ಬೂತನಾರ್, ಸೇತ್ತ ಬೂತನಾರ್ ಹೀಗೆ ಅನೇಕ ಹೆಸರುಗಳನ್ನು ಇಲ್ಲಿ ಹೆಸರಿಸಲಾಗಿದೆ. ಆ ಕಾಲದಲ್ಲಿ ಪೊದಲತ್ತಾವರ್ ಎನ್ನುವ ವೈಷ್ಣವ ಆಳ್ವಾರ್ ಇದ್ದುದನ್ನು ತಿಳಿಯುತ್ತೇವೆ.

ಆದರೆ ಆನಂತರದ ದಿನಗಳಲ್ಲಿ ಬೂತ ಎನ್ನುವ ಪದವನ್ನು ಕೀಳಾದ ಅರ್ಥದಲ್ಲಿ ಅರ್ಥೈಸಿ ಕೆಲವು ದೈವಗಳನ್ನು ದುಷ್ಟ ದೈವಗಳೆಂದು ಪರಿಗಣಿಸಲಾಯಿತು. (ತುಳುನಾಡಿನ ಇತಿಹಾಸ, ತಮಿಳು ಮೂಲ ಮಯಿಲೈ ಶೀನಿ ವೆಂಕಟ ಸ್ವಾಮಿ. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ 2015)

ತುಳುನಾಡಿನ ಚೊಕ್ಕಾಡಿ ಕ್ರಿ.ಶಕ 1784ರ ಶಾಸನದಲ್ಲೂ ‘ಬೂತ ಪಾಂಡ್ಯ’ನ ಹೆಸರಿನ ಉಲ್ಲೇಖ ಇದೆ.

ಸಮಾರೋಪ: ತುಳುವರ ಬೆರ್ಮೆರ್ ಉಲ್ಲಾಯನಾಗಿ ಮೀನು ಬೇಟೆಯಾಡುತ್ತಾ ಕಂಡೇವು ನದಿಯ ಮೂಲಕ ಬಂದು ನದಿ ದಡದ ಕಾಡಿನಲ್ಲಿ ತನ್ನ ಪರಿವಾರ ಶಕ್ತಿಗಳೊಂದಿಗೆ ನೆಲೆಯಾಗುತ್ತಾನೆ. ಉಲ್ಲಾಯನ ಮೀನು ಬೇಟೆಯ ಆಚರಣೆ ಇಂದಿಗೂ ಈ ಕ್ಷೇತ್ರದಲ್ಲಿ ನಡೆಯುತ್ತದೆ. ಹೀಗಾಗಿ ಜನರು ಕಾಡಿನವಾಸಿಗಳಾಗಿದ್ದ ಕಾಲದಿಂದಲೇ ಮುಂದುವರಿದು ಬಂದ ಆರಾಧನಾ ಪರಂಪರೆ ಭೂತಾರಾಧನೆ ಎಂದು ಪ್ರತಿಪಾದಿಸಬಹುದು.

ಇತ್ತೀಚಿನ ವರ್ಷಗಳಲ್ಲಿ ತುಳುನಾಡಿನಲ್ಲಿ ಭೂತಾರಾಧನೆ ವೈಭವಯೋಪಿತವಾಗಿ ನಡೆಯುತ್ತಿದೆ. ಬೇಸಾಯ ನಿಂತು ಹೋಗುತ್ತಿರುವ ಕಾಲದಲ್ಲೂ ಬೇಸಾಯ ಮೂಲದ ಭೂತಾರಾಧನೆ ಇನ್ನೂ ವಿಜೃಂಭಣೆಯಿಂದ ನಡೆಯುತ್ತದೆ. ಈ ದಶಕದಲ್ಲಿ

ಸಿನೆಮಾಗಳ ಮೂಲಕವೂ ಭೂತಾರಾಧನೆಗೆ ಪ್ರಚಾರ ಸಿಕ್ಕಿದೆ. ಆದರೆ ಇಂತಹ ಪ್ರಚಾರ ಇಲ್ಲದೆನೇ ಜನಮಾನಸದಲ್ಲಿ ಭೂತಾರಾಧನೆ ಮೂಡಿಸಿದ ಪ್ರಭಾವ ಅಳಿಸಲಾಗದಂತಹುದು. ಜಾತಿ ಧರ್ಮ ಎನ್ನದೆ ಎಲ್ಲರನ್ನು ಒಳಗೊಳ್ಳುವ ಬೂತಗಳನ್ನು ಯಾರೂ ನಿರಾಕರಿಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಇಂದಿರಾ ಹೆಗ್ಗಡೆ, ಮಂಗಳೂರು

contributor

Similar News

ಒಳಗಣ್ಣು

ವೃತ್ತಾಂತ