×
Ad

ಸೌಹಾರ್ದವೆಂಬುದು ‘ಭಾರೀ’ ಪದವಲ್ಲ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಧರಣೀ ದೇವಿ ಮಾಲಗತ್ತಿಯವರು ತಮ್ಮ ವಿಮರ್ಶಾ ಸಾಹಿತ್ಯ, ಲೇಖನಗಳು ಮತ್ತು ಕಾವ್ಯಗಳ ಮೂಲಕ ನಾಡಿಗೆ ಚಿರಪರಿಚಿತರು. ಉಪನ್ಯಾಸಕಿಯಾಗಿ, ಐಪಿಎಸ್ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದವರು. ಬ್ರೆಡ್ ಜಾಮ್, ಈವುರಿವ ದಿನ ಇವರ ಎರಡು ಪ್ರಮುಖ ಕವನ ಸಂಕಲನಗಳು. ಅಂಕಣ ಸಾಹಿತ್ಯಗಳಿಗೆ ಸಂಬಂಧಿಸಿ ನಾಲ್ಕು ಕೃತಿಗಳನ್ನು ಹೊರತಂದಿದ್ದು, ಸ್ತ್ರೀ ವಾದಕ್ಕೆ ಸಂಬಂಧಿಸಿ ಎರಡು ಮಹತ್ವದ ಕೃತಿಗಳನ್ನು ಬರೆದಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ಆನ್ ವುಮೆನ್ ಇಮ್ಯಾಜಿನೇಶನ್ ಅವರ ಸಂಶೋಧನಾತ್ಮಕ ಕೃತಿ. ‘ಇಂಟ್ರಿಕೆಸೀಸ್ ಆಫ್ ಮಾರ್ಕೆಂಟಿಂಗ್ ಆಫ್ ಫುಡ್ ಎಂಡ್ ಬೇವರೇಜಿಸ್’ ಅವರ ಸಂಶೋಧನಾ ಮಹಾ ಪ್ರಬಂಧ. ಇವರ ಸಾಹಿತ್ಯ ಸಾಧನೆಗಳಿಗಾಗಿ ಗೋರೂರು ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಮಾಣಿಕ ಬಾಯಿ ಪಾಟೀಲ ಪ್ರಶಸ್ತಿ, ನೀಲಗಂಗಾ ದತ್ತಿ ಬಹುಮಾನ, ಗೀತಾ ದೇಸಾಯಿ ದತ್ತಿ ಬಹುಮಾನ, ಎಚ್. ನರಸಿಂಹಯ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದೇಜಗೌ ಪ್ರಶಸ್ತಿ, ಹಲಸಂಗಿ ಗೆಳಯರು ಪ್ರತಿಷ್ಠಾನದ ಕಾವ್ಯ ಪ್ರಶಸ್ತಿ, ಕದಳಿಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.

Update: 2025-01-08 12:23 IST

 ಜಾತಿ ಧರ್ಮಗಳ ವರ್ತುಲಗಳು ಮನುಷ್ಯತ್ವವನ್ನು ಮಸುಕಾಗಿಸುವ ಘಟನೆಗಳು ನಮ್ಮ ಸಮಾಜದಲ್ಲಿ ನಡೆದಾಗ ‘ಮನುಜ ಮತ - ವಿಶ್ವ ಪಥ’ ಎಂಬುದು ಬರಿ ಬಾಯಿಮಾತಾಗಿ, ಉದ್ಧತ ವಾಕ್ಯವಾಗಿ ಮಾತ್ರ ಉಳಿಯಿತೆಂಬ ಹಳಹಳಿಕೆ ಕಾಡುವುದು ಸಹಜ. ಹಾಗೆ ನೋಡಿದರೆ ನಮ್ಮ ಇತಿಹಾಸದಲ್ಲಿ ತನ್ನ ನಂಬಿಕೆಯೇ ಶ್ರೇಷ್ಠವೆಂದು ಭಾವಿಸಿದವರ ಸಾಲುಸಾಲೇ ಇದೆ. ಸೌಹಾರ್ದದ ಸಮಾಜಕ್ಕೆ ಹಂಬಲಿಸಿದವರ ಪಟ್ಟಿಯೂ ಸಣ್ಣದೇನಲ್ಲ. ಒಂದು ಕಾಲಕ್ಕೆ ಶೈವ, ವೈಷ್ಣವ, ಶೈವ, ಜೈನ, ವೈದಿಕ, ಬೌದ್ಧ ಇತ್ಯಾದಿ ಮತಗಳ ವೈಷಮ್ಯ ಉತ್ಕ್ರಮಣಗೊಂಡದ್ದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಧರ್ಮ, ಮತ ಇವುಗಳನ್ನು ಯಾವ ರೀತಿಯಲ್ಲಿ ವಿಸ್ತರಿಸಿಕೊಂಡರೂ ಮೂಲಭೂತವಾಗಿ ಒಂದು ಸಮೂಹ ತಾನು ನಂಬಿದ್ದೇ ಶ್ರೇಷ್ಠವೆಂದು ಉಳಿದವರ ನಂಬಿಕೆ ತಪ್ಪೆಂದೂ ಭಾವಿಸುವುದು ಈ ಸಮಸ್ಯೆಯ ಕೇಂದ್ರ ಬಿಂದು.

ಅಭಿಮಾನ, ಅಂಧಾಭಿಮಾನ, ದುರಭಿಮಾನ, ದ್ವೇಷ ಇವೆಲ್ಲಕ್ಕೂ ಒಂದೇ ಭಾವದ ಬೇರಿರುವುದು ಒಂದು ಸೋಜಿಗವೂ ಹೌದು. ತನ್ನನ್ನೂ ಪ್ರೀತಿಸಿ ಇನ್ನೊಬ್ಬರನ್ನೂ ಪ್ರೀತಿಸಲು ಸಾಧ್ಯವಾಗುತ್ತದೆ ಅಭಿಮಾನಿಗೆ. ಅಂಧಾಭಿಮಾನಿಗೆ ತನ್ನ ದೋಷವೆಂದಿಗೂ ಅರಿವಾಗದು. ತಿದ್ದಲು ಪ್ರಯತ್ನಿಸುವವರು ಟೀಕಿಸುವವರಾಗಿ, ವೈರಿಗಳಾಗಿ ಕಾಣಿಸತೊಡಗುತ್ತಾರೆ. ‘ಅಹಂ’ ಎನ್ನುವುದು ಉಳಿದವರೆಲ್ಲರೂ ಕನಿಷ್ಠರು ಎನ್ನುವ ನೆಲೆಯಿಂದಲೇ ಮೂಡುವ ಭಾವ. ಇತರರನ್ನು ನಿರ್ಲಕ್ಷಿಸುವ, ದೂರುವ, ಹೀಗಳೆಯುವ, ದ್ವೇಷಿಸುವ ಗುಣವೂ ಅಭಿಮಾನದ ಇನ್ನೊಂದು ರೂಪವಾಗುವುದು ವಿಷಾದಕರ.

‘‘ಆ ನೋ ಭದ್ರಾ ಕ್ರತವೋ ಯಂತು ವಿಶ್ವತಃ’’ ಅನ್ನುವುದು ನಮ್ಮ ಪೂರ್ವಿಕರ ಮಾತು. ಉನ್ನತ ವಿಚಾರಗಳು ವಿಶ್ವದ ಎಲ್ಲಾ ಮೂಲೆಗಳಿಂದಲೂ ನಮ್ಮೆಡೆಗೆ ಬರಲಿ ಎಂದು ನಾನು, ನನ್ನದು, ಇತರರದು ಎಂದೆಲ್ಲಾ ಭಾವಿಸುವವರು ಲಘು ಚೇತನರು, ಉದಾರ ಚರಿತರ ಪಾಲಿಗೆ ‘ವಸುಧೈವ ಕುಟುಂಬಕಂ’ ಎನ್ನುವ ಉದಾತ್ತ ನುಡಿಯನ್ನು ಹೇಳಿದವರು ನಮ್ಮವರು.

ನಮ್ಮ ವಾಸ್ತವ ಬದುಕಿನಲ್ಲೇಕೆ ಅಸಹನೆ, ಅಸಮಾಧಾನ, ದ್ವೇಷ ಬೆಳೆಯುತ್ತಿದೆ ? ನಮ್ಮ ಅಸ್ತಿತ್ವದ ಪ್ರಜ್ಞೆ ಸಾಮಾಜಿಕ ಬದುಕಿನ ಸ್ವಾಸ್ಥ್ಯವನ್ನು ಕೆಡಿಸುವಷ್ಟರ ಮಟ್ಟಿಗೆ ತ್ರಿವಿಕ್ರಮಾವತಾರ ತಾಳಲು ಯತ್ನಿಸುತ್ತಿದೆ. ಪ್ರಜ್ಞಾವಂತರೆನಿಸಿಕೊಂಡವರಿಗಿಂತಲೂ ಕೆಲವು ಸಂದರ್ಭಗಳಲ್ಲಿ ಜನ ಸಾಮಾನ್ಯರು ವಿಶಾಲ ಹೃದಯದಿಂದ ಪ್ರತಿಕ್ರಿಯಿಸುವುದುಂಟು. ಮಕ್ಕಳಂತೂ ಕಲಿತವರಿಗಿಂತ, ದೊಡ್ಡವರಿಗಿಂತ ಉದಾರಗುಣದವರಾಗಿ ನಡೆದುಕೊಳ್ಳುತ್ತಾರೆ.

ನನ್ನ ಬಾಲ್ಯದ ಗೆಳತಿಯೊಬ್ಬಳ ಹೆಸರು ನೆಬಿಸ. ಈಕೆ ನನ್ನ ಶಾಲೆಯ ಸ್ನೇಹಿತೆಯಲ್ಲ. ನೆರೆ ಮನೆಯ ಗೆಳತಿ. ನನ್ನ ವಯಸ್ಸಿನವಳು. ನನಗಿಂತ ಸ್ವಲ್ಪ ಚಿಕ್ಕವಳೇ. ಬ್ಯಾರಿ ಸಮುದಾಯದ ಈ ಹುಡುಗಿ ನನ್ನ ಜೊತೆಯಲ್ಲಿ ‘ದೇವಿ ಮಹಾತ್ಮೆ’ ಯಕ್ಷಗಾನ ನೋಡಲು ಬಂದಿದ್ದಳು. ಅವಳ ಸಮುದಾಯದವರಿಗೆ ಅದು ‘ಹರಾಂ’ ಆಗಿರಬಹುದೇನೋ. ನಾವಿಬ್ಬರೂ ಆಟ ನೋಡಿದ್ದು ಅಷ್ಟಕಷ್ಟೆ. ರಾತ್ರಿ ನಿದ್ದೆ ಬಂದೊಡನೆ ಮರಳಿ ಬಂದು ನಮ್ಮ ಮನೆಯಲ್ಲಿ ಮಲಗಿ ಮಾರನೆಯ ಬೆಳಗ್ಗೆ ತನ್ನ ಮನೆಗೆ ಹೋಗಿದ್ದಳು. ಇದೇ ‘ನೆಬಿಸ’ಳ ಮನೆಯಲ್ಲಿ ರಮಝಾನ್ ಸಮಯದ ಸೂರ್ಯೋದಯ ಪೂರ್ವದ ಉಪಾಹಾರದಲ್ಲಿ ಮನೆಯವರಿಗೆ ತಿಳಿಯದಂತೆ ನಾನು ಹೋಗಿ ಕುಳಿತುಬಿಟ್ಟಿದ್ದೆ. ನನಗೆ ಆಗ 8 ವರ್ಷ. ನೆಬಿಸಳಿಗೆ 7 ವರ್ಷ. ಒಂದು ದೊಡ್ಡ ತಟ್ಟೆಯಲ್ಲಿ ಬೇಯಿಸಿದ ಕಡಲೆಕಾಳು, ಅವಲಕ್ಕಿ, ‘ಕಡ್ಲೆ ಬಜಿಲ್’ ಬಡಿಸಿಕೊಂಡು ಒಂದೇ ತಟ್ಟೆಯಲ್ಲಿ ಎಲ್ಲರೂ ತಿನ್ನುತ್ತಿದ್ದುದನ್ನು ಕಂಡು ಆಶ್ಚರ್ಯವಾಗಿತ್ತು. ನಾನು ಹಾಗೆಯೇ ಅದೇ ತಟ್ಟೆಯಲ್ಲಿ ತಿಂದಿದ್ದೆ. ನಮ್ಮ ಬಾಲ್ಯದ ‘ಸೌಹಾರ್ದದ ಚಟುವಟಿಕೆ’ಗಳಿಗೆ ಯಾರೂ ಆ ‘ಭಾರೀ’ ಹೆಸರನ್ನು ನೀಡಿರಲಿಲ್ಲ. ಮಕ್ಕಳು! ಎಂದು ನಕ್ಕುಬಿಟ್ಟಿದ್ದರು.

ನಮ್ಮ ತಮ್ಮ ಯಶ್ವಂತ ಮತ್ತು ನೆಬಿಸಳ ತಮ್ಮ ರಝಾಕ್ ಇಬ್ಬರೂ ಸ್ನೇಹಿತರು. ರಝಾಕ್‌ನನ್ನು ನಾನು ಈಗಲೂ ‘ಮೋನು’ ಎಂದೇ ಕರೆಯುತ್ತೇನೆ. ಅವನ ಮನೆಯಲ್ಲಿ ಕರೆಯುವ ಹೆಸರು ಅದು. ನನ್ನ ತಮ್ಮನನ್ನು ಮನೆಯ ಮುದ್ದಿನ ಹೆಸರಿನಲ್ಲಿ ‘ಬಾಬಾ’, ‘ಬಾಬಣ್ಣ’ ಎಂದೇ ಅವರ ಮನೆಯವರೆಲ್ಲ ಕರೆಯುತ್ತಾರೆ.

ಯಾರು ಹೇಳಿದರು ಕೋಮುವಾದದ ಬಗ್ಗೆ? ಸಮಾಜದಲ್ಲಿ ಎಲ್ಲಿಂದ ಬಂತೀ ಭೇದ? ನಮ್ಮ ಊರಿನಲ್ಲಿ ಧಾರ್ಮಿಕ ಪ್ರತಿಬಂಧಕಗಳು ಯಾರಿಗೂ ಇರಲಿಲ್ಲ. ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದಂತೆ ಪಳ್ಳಿಗಳಲ್ಲಿ ವಾಲ್ ನಡೆಯುತ್ತಿತ್ತು. ಹಬ್ಬ ಹರಿದಿನಗಳಲ್ಲಿ ಎಲ್ಲಾ ಸಮುದಾಯದವರು ಭಾಗವಹಿಸುತ್ತಿದ್ದರು. ಅವರ ಪಳ್ಳಿಯ ಹರಕೆಯ ಪ್ರಸಾದ ನಮ್ಮ ಮನೆಗೂ ಬರುತ್ತಿತ್ತು. ನಿತ್ಯವೂ ಲಲಿತ ಸಹಸ್ರನಾಮ ಓದುವ ಅಭ್ಯಾಸವಿದ್ದ ನನ್ನ ತಂದೆಯವರು ಅವರ ಮನೆಯ ಮಕ್ಕಳ ತಲೆ ಸವರಿ ತುಂಬು ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ಸಮಾಜದಲ್ಲಿ ಕೂಡಿ ಬದುಕಿದಾಗ, ಪರಸ್ಪರರ ಕಷ್ಟಗಳಿಗೆ ನೆರವಾದಾಗ ಅಸಹಿಷ್ಣುತೆ ಎನ್ನುವುದು ಎಂದಿಗೂ ಬರದು. ನೆಬಿಸಳ ಮನೆ ನಮ್ಮ ಆತ್ಮೀಯ ಸಂಬಂಧಿಗಳ ಮನೆಯಷ್ಟೇ ಹತ್ತಿರವೆನಿಸಿದ್ದು ಕಷ್ಟ ಸುಖಗಳಿಗೆ ಪರಸ್ಪರ ಒದಗುತ್ತಿದ್ದ ಕಾರಣಕ್ಕೆ. ನೆಬಿಸಳ ಅಜ್ಜಿ ಪಕೃಚ್ಚಿ ಬ್ಯಾರ್ದಿ ಪರಿಣತ ಸೂಲಗಿತ್ತಿಯಾಗಿದ್ದವರು. ಊರಿನ ಎಲ್ಲಾ ಹೆಣ್ಣು ಮಕ್ಕಳ ಹೆರಿಗೆಗಳನ್ನು ಧರ್ಮದ ಭೇದವಿಲ್ಲದೇ ಮಾಡಿಸುತ್ತಿದ್ದರು. ನನ್ನ ಚಿಕ್ಕ ತಮ್ಮ ಹುಟ್ಟಿದಾಗ ಸಹಾಯಕ್ಕೆ ಒದಗಿದವರು ಅವರೇ. ಅವಳ ಅಣ್ಣಂದಿರಿಗೂ ಮಾನಸಿಕ ಸಂಬಂಧದಲ್ಲಿ ನಾನು ತಂಗಿಯೇ ಆಗಿದ್ದೆ. ನನ್ನ ಎಂ.ಕಾಂ. ಅಧ್ಯಯನದ ದಿನಗಳಲ್ಲಿ ಒಂದು ದಿನ ಕೊಣಾಜೆಯ ಬಸ್ಸಿಗೆ ಕಾಯುತ್ತಾ ಮಾರ್ನಬೈಲ್ ಹತ್ತಿರ ನಿಂತಿದ್ದೆ. ಅನೇಕ ಜನ ಅಲ್ಲಿದ್ದರು. ನೆಬಿಸಳ ಅಣ್ಣ, ನಾವೆಲ್ಲ ಪುತ್ತು ಮೋನು ಬ್ಯಾರಿ ಎಂದು ಕರೆಯುತ್ತಿದ್ದ ಇಸ್ಮಾಲಿಯಾಕ ಅಲ್ಲೇ ಇದ್ದರು. ಆ ಹೊತ್ತಿಗೆ ಬಂಟ್ವಾಳದಲ್ಲಿ ಬಿ.ಡಿ.ಒ. ಆಗಿದ್ದ ಮಹಿಳಾ ಅಧಿಕಾರಿಯೊಬ್ಬರು ಸರಕಾರಿ ವಾಹನದಲ್ಲಿ ಬಂದು ಇಳಿದರು. ಅವರನ್ನು ದೂರದಿಂದ ತೋರಿಸುತ್ತಾ ನಮ್ಮ ಪುತ್ತು ಮೋನಾಕ ಆಡಿದ್ದ ಮಾತನ್ನು ಈಗಲೂ ನೆನಪಿಸಿಕೊಳ್ಳುತ್ತಿರುತ್ತೇನೆ. ‘‘ನಮ್ಮ ಧರಣಕ್ಕ ಹೀಗೆ ದೊಡ್ಡ ಅಧಿಕಾರಿಯಾಗಿ ಸರಕಾರಿ ವಾಹನದಲ್ಲಿ ಓಡಾಡಬೇಕು ಎನ್ನುವುದು ನನ್ನ ಆಸೆ’’ ಎಂದಿದ್ದರು.

ಸೌಹಾರ್ದವೆಂದರೇನು? ಕೃತಕವಾಗಿ ನಾವು ಆರೋಪಿಸಿಕೊಂಡು, ಹಣೆ ಪಟ್ಟಿ ಕಟ್ಟಿಕೊಂಡು ತಿರುಗಾಡಬೇಕಾದ ಆ ಭೂಷಣವಂತೂ ಅಲ್ಲ. ಪರಸ್ಪರರು ಮನುಷ್ಯತ್ವದ ಆಧಾರದಲ್ಲಿ ಕಷ್ಟ ಸುಖ ಹಂಚಿಕೊಂಡು ‘‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ’’.

ನನ್ನ ಮೊಬೈಲ್ ನಂಬರ್ ಪಡೆದು ಕೊಂಡಿದ್ದರೂ ಇಸ್ಮಾಲಿಯಾಕ ಎಂದೂ ಫೋನ್ ಮಾಡಿದವರಲ್ಲ. ಎಷ್ಟೋ ವರ್ಷಗಳ ಬಳಿಕ ಒಂದು ದಿನ ಅವರಿಂದ ಫೋನ್ ಬಂದು ತಕ್ಷಣ ಮೊಟಕಾಯಿತು. ಮತ್ತೆ ನಾನೇ ಫೋನ್ ಮಾಡಿದೆ. ‘‘ಇದಾರಿ ?’’ ‘‘ಆರಿ?’’ ಎಂದರು. ಹೆಸರು ಹೇಳಿದೆ. ನೀವೇ ಫೋನ್ ಮಾಡಿದ್ದೀರಿ ಎಂದು ಹೇಳಿದೆ. ‘‘ನೆಬಿಸಳಿಗೆ ಹಾರ್ಟ್ ಆಪರೇಷನ್, ಬೆಂಗಳೂರಿನಲ್ಲಿ ಇದ್ದೇನೆ, ಆಸ್ಪತ್ರೆಯಲ್ಲಿದ್ದೇವೆ’’ ಎಂದರು. ದೂರವೇ ಆದರೂ ಯಾವುದೋ ಒಂದು ಸಂದರ್ಭದಲ್ಲಿ ತಂಗಿಯ ಗೆಳತಿಗೆ ತಿಳಿಸಬೇಕೆನ್ನುವ ಮನಸ್ಸು ಅವರಿಗಿತ್ತು.

 

ನಾನು ಮತ್ತು ನೆಬಿಸ ಬಾಲ್ಯದಲ್ಲಿ ಒಂದೇ ಮಾವಿನಕಾಯಿಯನ್ನು ಅವಳ ‘ಎಲಸ್ರ’ದಲ್ಲಿ ಕಚ್ಚಿ ತಿಂದಿದ್ದೇವೆ. ಒಂದು ಮಾವಿನ ಹಣ್ಣಿನ ಸಿಪ್ಪೆ ಗೊರಟು ಹಂಚಿ ತಿಂದಿದ್ದೇವೆ. ಕೇಪಳ ಹಣ್ಣಿನ ಬೀಜದ ಒಳಗೆ ಒಂದು ಸಣ್ಣ ಚಮಚವಿರುತ್ತದೆ ಎಂದು ಒಂದು ಬೀಜ ಒಡೆದು ತೋರಿಸಿದ್ದಳು ಆಕೆ. ಪ್ರಳಯಕಾರಕ ಶಿವನ ಕಥೆಯನ್ನು ನಾನು ಅವಳಿಗೆ ಹೇಳಿದ್ದೆ. ಈಸಾ ನಬಿಯ ಕಥೆಯನ್ನು ಅವಳು ನನಗೆ ಹೇಳಿದ್ದಳು.

ಅವಳ ಭಾಷೆ ಬೇರೆ ಇತ್ತು, ನನ್ನ ಭಾಷೆ ಬೇರೆ. ಅವಳ ಉಡುಗೆ ತೊಡುಗೆ ನನಗಿಂತ ಸ್ವಲ್ಪ ಭಿನ್ನವಾಗಿತ್ತು. ಅವಳು ಕತ್ತಿನಲ್ಲಿ ಧರಿಸುತ್ತಿದ್ದ ತಾಬೀಜ್ ನನಗೆ ಆಕರ್ಷಣೆಯ ವಸ್ತುವಾಗಿತ್ತು. ನಮ್ಮ ಸ್ನೇಹಕ್ಕೆ ಮತ್ತು ಅವಳೇ ಉಪಯೋಗಿಸುತ್ತಿದ್ದ ಪದ ‘ಚಂಙಯಿ’ಗೆ ಯಾವ ತಡೆಯೂ ಎಲ್ಲಿಂದಲೂ ಇರಲಿಲ್ಲ. ನಮ್ಮ ಹೆತ್ತವರ ಪಾಲಿಗೂ ಅದೊಂದು ದೊಡ್ಡ ತಲೆ ಕೆಡಿಸುವ ಸಂಗತಿಯೂ ಆಗಿರಲಿಲ್ಲ.

‘‘ಮಕ್ಕಳು ! ಒಟ್ಟಿಗೆ ಆಟವಾಡುತ್ತಾರೆ, ಆಡಲಿ !’’

ಸೌಹಾರ್ದಯೆಂಬುದೇನು ತೊಡಕಾದ ಪದವೇ? ಸಹಜತೆಯೇ ಸೌಹಾರ್ದವಲ್ಲವೇ ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಧರಣೀದೇವಿ ಮಾಲಗತ್ತಿ

contributor

Similar News

ಒಳಗಣ್ಣು

ವೃತ್ತಾಂತ