ಶೇಕ್ ಮುಹ್ಯುದ್ದೀನ್ ಇಬ್ನು ಅರಬಿ ನುಡಿಮುತ್ತುಗಳು
ಶೇಕ್ ಮುಹ್ಯುದ್ದೀನ್ ಇಬ್ನು ಅರಬಿ, ಅಧ್ಯಾತ್ಮ ಮತ್ತು ತತ್ವಶಾಸ್ತ್ರ ರಂಗದಲ್ಲಿ ವಿಶ್ವಮಾನ್ಯ ವಿದ್ವಾಂಸರಲ್ಲೊಬ್ಬರು. 2014ರ ಕೊನೆಯಲ್ಲಿ ಬಿಡುಗಡೆಗೊಂಡ ಜನಪ್ರಿಯ ಟರ್ಕಿಶ್ ಟಿವಿ ಸೀರಿಯಲ್ ‘ದಿರಿಲಿಸ್ ಎರ್ತೂಗ್ರಲ್’ನಲ್ಲಿ ಶೇಕ್ ಇಬ್ನು ಅರಬಿ ಅವರನ್ನು ಸರಣಿಯ ನಾಯಕನ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿ ತೋರಿಸಲಾಗಿದೆ. ಶೇಕ್ ಅವರ ಹಲವು ವಾದಗಳ ಕುರಿತು ಮುಸ್ಲಿಮ್ ವಿದ್ವಾಂಸರ ದೊಡ್ಡ ವರ್ಗವೊಂದು ತೀವ್ರ ಆಕ್ಷೇಪ ಪ್ರಕಟಿಸುತ್ತಾ ಬಂದಿದೆ. ಆದರೂ ಅವರ ಆಪ್ತ ಅಭಿಮಾನಿ ವಲಯ ಜಗತ್ತಿನ ಹೆಚ್ಚಿನ ಕಡೆ ಕಂಡು ಬರುತ್ತದೆ. ಸೂಫಿ ವಲಯಗಳಲ್ಲಿ ಅವರನ್ನು ‘ಶೇಕುಲ್ ಅಕ್ಬರ್’ (ಮಹಾ ಗುರು) ಎಂದು ಗುರುತಿಸಲಾಗುತ್ತದೆ. 1165 ರಲ್ಲಿ ಸ್ಪೇನ್ ದೇಶದಲ್ಲಿ ಜನಿಸಿದ ಶೇಕ್, 1240 ರಲ್ಲಿ ಸಿರಿಯಾದಲ್ಲಿ ನಿಧನರಾದರು. ಅವರು ಸಾವಿರಕ್ಕೂ ಹೆಚ್ಚಿನ ಗ್ರಂಥಗಳನ್ನು ರಚಿಸಿದ್ದಾರೆಂಬ ಪ್ರತೀತಿ ಇದೆ.
'ಕಣ್ಣಿಂದ ಉದುರುವ ಅಶ್ರು ಹನಿಗಳು ಮನದೊಳಗಿನ ಹೂದೋಟಗಳನ್ನು ಸದಾ ಹಸಿರಾಗಿಡುತ್ತವೆ.'
'ತನ್ನ ಸಿಪ್ಪೆಯನ್ನು ತನ್ನಿಂದ ಅಗಲಲು ಬಿಡದ ಬೀಜವು ಎಂದೂ ಮರವಾಗಿ ಬೆಳೆಯುವುದಿಲ್ಲ.'
'ಸಂಕಟ ಎಂಬುದು ಒಂದು ದೊಡ್ಡ ಅನುಗ್ರಹ. ಹಾಗಲ್ಲದಿದ್ದರೆ ದೇವರು ತನ್ನ ಅತ್ಯಂತ ಪ್ರೀತಿಪಾತ್ರರಾದ ದೂತರಿಗೆ ಅಷ್ಟೊಂದು ಸಂಕಷ್ಟಗಳನ್ನು ನೀಡುತ್ತಿರಲಿಲ್ಲ.'
'ನೀನು ಬಿತ್ತುತ್ತಿರುವುದು ಏನೆಂಬುದನ್ನು ಗಮನವಿಟ್ಟು ನೋಡು. ಏಕೆಂದರೆ, ನೀನು ಏನನ್ನು ಬಿತ್ತಿರುವೆಯೋ ಅದರ ಫಲಮಾತ್ರ ನಿನಗೆ ಸಿಗಲಿದೆ.'
'ಲೌಕಿಕ ವ್ಯಾಮೋಹಗಳೆಂದರೆ ಸಮುದ್ರದ ಉಪ್ಪು ನೀರಿನಂತೆ - ದಾಹ ನೀಗಿಸಲೆಂದು ನೀರು ಕುಡಿದಷ್ಟೂ ದಾಹ ಹೆಚ್ಚುತ್ತಲೇ ಹೋಗುತ್ತದೆ.'
'ಅಪೇಕ್ಷೆಗಳ ಸರಪಣಿಯಲ್ಲಿ ಬಂದಿಯಾಗಿರುವ ಮನಸ್ಸಿಗೆ, ದೇವರೆಡೆಗೆ ಪ್ರಯಾಣಿಸಲು ಹೇಗೆ ತಾನೇ ಸಾಧ್ಯವಾದೀತು?'
'ದೇವರನ್ನು ಗ್ರಹಿಸುವ ಸಾಮರ್ಥ್ಯ ದೃಷ್ಟಿಗಾಗಲಿ ಬುದ್ಧಿಗಾಗಲಿ ಇಲ್ಲ. ತಮ್ಮ ಎಟುಕಿಗೆ ಮೀರಿದ್ದನ್ನು ಊಹಿಸಲು, ವರ್ಣಿಸಲು ಅಥವಾ ಚಿತ್ರಿಸಲು ಪ್ರಯತ್ನಿಸುವವರು ಅವನನ್ನು ತೀರಾ ಸೀಮಿತ ಹಾಗೂ ದುರ್ಬಲಗೊಳಿಸಿ ಜನರ ಮುಂದಿಡುತ್ತಾರೆ.'
;ಬದುಕಿನ ಕೊನೆಯ ಕ್ಷಣದ ತನಕವೂ ನಾನು ಪರಿಪೂರ್ಣನಾಗಿದ್ದೇನೆ ಎಂಬ ಭ್ರಮೆಯನ್ನು ಬೆಳೆಸಿಕೊಳ್ಳಬೇಡಿ. ದೇವರ ಹೊರತು ಬೇರಾರೂ ಪರಿಪೂರ್ಣರಲ್ಲ. ನಾವೆಲ್ಲಾ ಸತ್ಯದ ಹಾದಿಯಲ್ಲಿರುವ ಪ್ರಯಾಣಿಕರು ಮಾತ್ರ.';
'ಧರ್ಮ ವಿಶ್ವಾಸ ಮತ್ತು ಸುಶೀಲತೆ ಇವೆರಡು ವಿಶಿಷ್ಟ ಹಕ್ಕಿಗಳು. ಆ ಪೈಕಿ ಒಂದು ಹಕ್ಕಿ ಕೈತಪ್ಪಿ ಹೊರಟು ಹೋದರೆ ಸಾಕು, ಇನ್ನೊಂದು ತನ್ನಿಂತಾನೇ ನಿಮ್ಮನ್ನಗಲಿ ಹಾರಿಹೋಗುತ್ತದೆ.'
'ನಿಮ್ಮ ಚಿಂತನೆಯೇ ನಿಮ್ಮ ನೈಜ ಅಸ್ತಿತ್ವ. ಉಳಿದಿದ್ದೆಲ್ಲವೂ ಕೇವಲ ಮೂಳೆ, ಮಾಂಸ ಮಾತ್ರ.'