ಅಂಗೈಯಲ್ಲಿ ಜಗತ್ತು; ತಲೆಯಲ್ಲಿ ಜ್ವಾಲಾಮುಖಿ!
ಯುವ ಪತ್ರಕರ್ತರಾಗಿರುವ ಕಬೀರ್, ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಾರ್ತಾ ಭಾರತಿಯಲ್ಲಿ ವೃತ್ತಿ ಜೀವನ ಆರಂಭ. ಕಳೆದ 20 ವರ್ಷಗಳಿಂದ ಅಕ್ಷರ ಸೇವೆ. ಸದ್ಯ ಟಿವಿ೯ ಕನ್ನಡ ಟಿವಿ ಚಾನಲ್ ನಲ್ಲಿ ಔಟ್ ಪುಟ್ ಎಡಿಟರ್.
ಬೆಳಗ್ಗೆದ್ದು ಹಲ್ಲುಜ್ಜಲು ಟೂತ್ ಬ್ರಷ್, ಟೂತ್ ಪೇಸ್ಟ್ ಹುಡುಕಾಡುವ ಕಾಲವೊಂದಿತ್ತು. ಇದೀಗ, ಎಚ್ಚರ ಆದ ತಕ್ಷಣ ಕೈ ಮೊಬೈಲನ್ನು ತಡಕಾಡುತ್ತೆ. ರೀಲ್ಸ್ ಇಲ್ಲಾ, ವೀಡಿಯೊ ನೋಡುತ್ತಾ ನಿದ್ದೆಗೆ ಜಾರುವ ನಾವು ರಾತ್ರಿಯ ಸುಖ ನಿದ್ದೆಯಿಂದೆದ್ದು, ಕಣ್ಣುಜ್ಜುತ್ತಾ, ಹಲ್ಲುಜ್ಜಲು ಹೋಗೋದೇ ಇಲ್ಲ. ಮೊಬೈಲ್ ಅರಸುತ್ತೇವೆ. ಇಪ್ಪತ್ತು ವರ್ಷಗಳಿಂದ ಟಿವಿ ಮನೆಯ ಹಾಲ್‌ನಲ್ಲಿ ಇತ್ತು. ಈಗ ಮೊಬೈಲ್ ಬೆಡ್ ಮೇಲೆನೇ ಇರುತ್ತೆ. ಅಂಗೈಯಲ್ಲೇ ಜಗತ್ತು ತೋರಿಸೋ ಮೊಬೈಲ್. ಇದರಲ್ಲಿ ಸರ್ವವೂ ಲಭ್ಯ.
ಮೊಬೈಲ್ ಮತ್ತು ಗೂಗಲ್ ಈ ಕಾಲದ ಕಾಮಧೇನು. ಫೇಸ್ಬುಕ್, ಟ್ವಿಟರ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಜಸ್ಟ್ ಸೋಷಿಯಲ್ ಮೀಡಿಯಾ ಅಷ್ಟೇ ಅಲ್ಲ. ಪ್ರತಿಯೊಬ್ಬರ ದಿನಚರಿ ಇದರಲ್ಲೇ ಆರಂಭ, ಇಲ್ಲೇ ಅಂತ್ಯ. ಬೆಳಗ್ಗೆದ್ದು ಮಕ್ಕಳ ಶಾಲೆ, ಕಾಲೇಜಿಗೆ ರಜೆ ಇದ್ಯಾ? ಮಳೆ ಬರುತ್ತಾ? ಸುದ್ದಿ ಏನಿದೆ? ತಿಳಿಯಲು ಗೂಗಲ್ ಬೇಕು. ಮನೆಯಿಂದ ಹೊರಗಡೆ ಕಾಲಿಟ್ಟ ತಕ್ಷಣ, ಗೂಗಲ್ ಮ್ಯಾಪ್ ಓಪನ್ ಮಾಡದೋರು ಸಿಟಿಯಲ್ಲಿ ಯಾರಿದ್ದಾರೆ? ಮೊಬೈಲ್ ಮತ್ತು ಗೂಗಲ್ ಇಲ್ಲದ ಲೈಫ್ ಸದ್ಯಕ್ಕಂತೂ ಊಹಿಸೋದೇ ಕಷ್ಟ. ಮಕ್ಕಳು, ಯುವಕರು, ಅಜ್ಜ ಅಜ್ಜಿಯರು ಎಲ್ಲರೂ ಗೂಗಲ್ ಮಾಡ್ಲಾ ಅಂತಾರೆ. ಇದಕ್ಕೆಲ್ಲಾ ಒಂದು ಮೊಬೈಲ್ ಸಾಕು.
ಇದು ಕಳೆದ 40 ವರ್ಷದಲ್ಲಿ ಆದ ಜಾಗತಿಕ ಕ್ರಾಂತಿ. ಇಂಟರ್‌ನೆಟ್ ಸೃಷ್ಟಿಸಿದ ಅಲೆ. 90ರ ದಶಕದಲ್ಲಿ ವೆಬ್‌ಸೈಟ್ ಕೇವಲ ಓದಲು ಬಳಕೆಯಾಗುತ್ತಿತ್ತು. ಅಪ್ಲೋಡ್ ಮಾಡಲು ಜನಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಆದರೆ, ಕಳೆದ 20ವರ್ಷದೊಳಗೆ ಗೂಗಲ್, ಯೂಟ್ಯೂಬ್, ಫೇಸ್ಬುಕ್, ಟ್ವಿಟರ್ ಹುಟ್ಟಿತು. ಯೂಟ್ಯೂಬ್ ಎಲ್ಲರಿಗೂ ವೀಡಿಯೊ ಅಪ್ಲೋಡ್ ಮಾಡಲು ಅವಕಾಶ ನೀಡಿತು. ಫೇಸ್‌ಬುಕ್‌ನಲ್ಲಿ ಯಾರು ಬೇಕಾದ್ರೂ ಪೋಸ್ಟ್ ಮಾಡ್ಬಹುದು. ಏನನ್ನೂ ಫಿಲ್ಟರ್‌ಗಳೇ ಇಲ್ಲದೆ ಬರೆಯಬಹುದು. ಇದು ನಿಜಕ್ಕೂ ಜಗತ್ತಿನಲ್ಲಿ ಭಾರೀ ಕ್ರಾಂತಿಗೂ, ಸ್ವಲ್ಪ ಭ್ರಾಂತಿಗೂ ಕಾರಣವಾಯಿತು. ಯಾರು, ಏನೇ ಬೇಕಾದ್ರೂ ಸೃಷ್ಟಿಸಬಹುದು. ಎಲ್ಲರಿಗೂ ಸಮಾನ ಅವಕಾಶ. ಇದು ನಿಜಕ್ಕೂ ರೋಮಾಂಚಕ. ಸೋಶಿಯಲ್ ಮೀಡಿಯಾ ಈ ವಿಚಾರದಲ್ಲಿ ಸೋಶಿಯಲಿಸ್ಟ್ ಮೀಡಿಯಾ ಆಗೋಯ್ತು.
ಹತ್ತು ವರ್ಷದಲ್ಲಿ ಭಾರೀ ಬದಲಾವಣೆಗಳಾಗಿವೆ. ಮೊಬೈಲ್ ಬಳಕೆ ಮಿತಿ ಮೀರಿದೆ. ಅಂಗೈಯಲ್ಲಿ ಜಗತ್ತು ಹರಡಿದೆ. ದೇಶದಲ್ಲಿ ಜಿಯೋ ಉಚಿತ ಡೇಟಾ ಆರಂಭಿಸಿದ ಮೇಲಂತೂ ಮೊಬೈಲ್ ಬಳಕೆಗೆ ಇತಿ ಮೀತಿಯೇ ಇಲ್ಲ. ಈಗ ಪ್ರತಿಯೊಬ್ಬರೂ ಮೊಬೈಲ್ ದಾಸರು. ಕ್ಷಣಕ್ಕೊಮ್ಮೆ ನೋಡಿಲ್ಲ ಅಂದ್ರೆ, ವಾಟ್ಸ್ ಆ್ಯಪ್ ಓಪನ್ ಮಾಡಿಲ್ಲ ಅಂದ್ರೆ, ಆಗಲ್ಲ. ಎಲ್ಲಿ ಏನೇ ಸಿಗಲಿ, ಅಲ್ಲೇ ಆಸ್ವಾದಿಸುತ್ತೀವಿ. ಈ ಮಾಯೆಯನ್ನು ರಂಗೇರಿಸುತ್ತಿರೋದೇ 30-60 ಸೆಕೆಂಡ್ಸ್ ರೀಲ್.
2020ರ ಎಪ್ರಿಲ್‌ನಲ್ಲಿ ಜಗತ್ತಿನ ಅತಿದೊಡ್ಡ ಸೋಶಿಯಲ್ ಮೀಡಿಯಾ ಕಂಪೆನಿ ಫೇಸ್ಬುಕ್, ರಿಲಯನ್ಸ್ ಸಂಸ್ಥೆಯ ಜಿಯೋದಲ್ಲಿ ಹೂಡಿಕೆ ಮಾಡಿದ್ದು ರೂ. 43,574 ಕೋಟಿ. ಅದೇ 2020ರ ಜೂನ್ ತಿಂಗಳಲ್ಲಿ ಭಾರತ ಸರಕಾರ ಚೀನಾದ ಪಾಪ್ಯುಲರ್ ಆಪ್ ಟಿಕ್‌ಟಾಕ್‌ನ್ನು ಬ್ಯಾನ್ ಮಾಡಿತು. ಟಿಕ್ಟಾಕ್ ಆಗಷ್ಟೇ 15 ಸೆಕೆಂಡ್ ವೀಡಿಯೊ ಫಾರ್ಮಾಟ್ ಮೂಲಕ ಖ್ಯಾತಿ ಪಡೆಯುತ್ತಿತ್ತು. ಟಿಕ್ಟಾಕ್ ಬ್ಯಾನ್ ಬಳಿಕ, ಭಾರತದಲ್ಲಿ 2020ರ ಜುಲೈ ತಿಂಗಳಲ್ಲಿ ಫೇಸ್ಬುಕ್ ಒಡೆತನದ ಇನ್‌ಸ್ಟ್ಟಾಗ್ರಾಮ್ 15 ಸೆಕೆಂಡ್ ವೀಡಿಯೊ ರೀಲ್ಸ್ ಪ್ರಯೋಗಾರ್ಥವಾಗಿ ಬಳಸಲು ಆರಂಭಿಸಿತು. ಜಗತ್ತಿನಾದ್ಯಂತ ವೀಡಿಯೊ ಕ್ರಾಂತಿಗೆ ಕಾರಣವಾದ ಗೂಗಲ್ ಒಡೆತನದ ಯೂಟ್ಯೂಬ್, ರೀಲ್ಸ್ ಮತ್ತು ಟಿಕ್ಟಾಕ್ ಕ್ರೇಜನ್ನು ಗಮನಿಸಿತು. ಯೂಟ್ಯೂಬ್ ಶಾರ್ಟ್ಸ್ ಮೂಲಕ ಮತ್ತಷ್ಟು ವ್ಯಾಪಿಸಲು ಹೊರಟಿತು. 2020ರ ಸೆಪ್ಟಂಬರ್ 20ರಂದು ಭಾರತದಲ್ಲಿ ಮೊದಲ ಯೂಟ್ಯೂಬ್ ಶಾರ್ಟ್ಸ್ ವೀಡಿಯೊ ಬಿಡುಗಡೆ ಆಯಿತು. ಈಗ ಯೂಟ್ಯೂಬ್ ಶಾರ್ಟ್ಸ್
ಅವತಾರವೂ ಜನಪ್ರಿಯವಾಗಿದೆ. ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ಸ್ ಶಾರ್ಟ್ಸ್ಅನ್ನು ನೆಚ್ಚಿಕೊಂಡಿದ್ದಾರೆ. ಬಳಕೆದಾರರು ಅದನ್ನು ಹುಚ್ಚಾಗಿ ಹಚ್ಚಿಕೊಂಡಿದ್ದಾರೆ. ಮಕ್ಕಳಿಂದ, ಮುತ್ತಜ್ಜಂದಿರವರೆಗೂ ಎಲ್ಲರೂ ರೀಲ್ಸ್ ಮತ್ತು ಶಾರ್ಟ್ಸ್ ದಾಸರು. ಸರಸರನೇ ಸುರಿಯುವ ರೀಲ್ಸ್ ಸರಮಾಲೆಗೆ ಜೋತು ಬಿದ್ರೆ ಸೂರ್ಯೋದಯ, ಸೂರ್ಯಾಸ್ತಮಾನ ಎರಡೂ ಗೊತ್ತೇ ಆಗಲ್ಲ.
ಒಂದು ರೀಲ್, ನೀವು ಕಂಪ್ಲೀಟ್ ನೋಡಿ ಬಿಟ್ಟರೆ, ಅದೇ ರೀತಿಯ, ಅದೇ ಹಾವ, ಅದೇ ಭಾವದೊಂದಿಗೆ ಮತ್ತೊಂದು ರೀಲ್ ಪ್ರತ್ಯಕ್ಷವಾಗಿಬಿಡುತ್ತೆ. ಒಂದು ನಿಮಿಷ ಸುದೀರ್ಘದ ರೀಲ್. ಇಪ್ಪತ್ತು, ಮೂವತ್ತು ರೀಲ್ಸ್ ನೋಡಿದ್ರೆ ನಿಮ್ಮ ಅರ್ಧ ಗಂಟೆ ಜಾರಿದ್ದೇ ಗೊತ್ತಾಗಲ್ಲ. ರೀಲ್ಸ್ ಮಾಡೋನು ಮಹಾಶೂರ, ನೋಡೋನು ಮಹಾ ‘ಬೋರ’. ಕೂತಲ್ಲೇ ಕೂತು ನೋಡಿದರೆ ಉದಾಸೀನ ಮತ್ತು ತಲೆನೋವು ಗ್ಯಾರಂಟಿ.
ಟಿಕ್‌ಟಾಕ್‌ನಿಂದ ಶುರುವಾದ ಈ ಟ್ರೆಂಡ್ ಫೇಸ್ಬುಕ್, ಇನ್‌ಸ್ಟ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಮೂಲಕ ಜಗತ್ತಿಗೆ ವ್ಯಾಪಿಸಿದೆ. ಈ ರೀಲ್ಸ್, ಶಾರ್ಟ್ಸ್
ಮಾಡೋದು ಎಷ್ಟು ಸುಲಭ ಅಂದ್ರೆ, ಒಂದು ಸ್ಮಾರ್ಟ್‌ಫೋನ್ ಇದ್ರೆ ಸಾಕು. ನಿಮಿಷದ ಶಾರ್ಟ್ ವೀಡಿಯೊ ಮಾಡಿ ವೈರಲ್ ಸೆನ್ಸೇಷನ್ ಆಗಬಹುದು. ನಿಂತಲ್ಲಿ ಕುಂತಲ್ಲಿ ವೀಡಿಯೊ ಮಾಡಿ ಅಪ್ಲೋಡ್ ಮಾಡಿ ಪತ್ರಕರ್ತನಾದೆ ಅಂತ ಬೆನ್ನು ಚಪ್ಪರಿಸಿಕೊಳ್ಳಬಹುದು. ಇದರಿಂದಲೇ ಬದುಕು ಕಟ್ಟಿಕೊಳ್ಳುತ್ತಿರುವವರೂ ಇದ್ದಾರೆ. ತಾರೆಗಳಾದವರೂ ಇದ್ದಾರೆ. ಹಳೆ ತಲೆಮಾರಿನ ನಟ ನಟಿಯರೂ ಜಾಲಿಯಾಗಿ ಸುತ್ತುತ್ತಾ, ಹಾಯಾಗಿ ಪೋಸ್ ಕೊಡುತ್ತಾ ಚಾಲ್ತಿಯಲ್ಲಿ ಉಳಿಯಲು ಮರಳಿಯತ್ನವ ಮಾಡುತ್ತಿದ್ದಾರೆ. ಕಳೆದ 4 ವರ್ಷದಲ್ಲಿ ಇನ್‌ಸ್ಟ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್‌ಗೆ ಜೋತು ಬೀಳದವರೇ ಇಲ್ಲ.
ನಾಗ್ಪುರದ ಬೀದಿ ಬದಿಯಲ್ಲಿ ಟೀ ಮಾರೋ ಡಾಲಿ ಚಾಯ್ವಾಲಾ ಕಥೆ ಗೊತ್ತಾ? ಈತನ ಇನ್‌ಸ್ಟಾಗ್ರಾಮ್ ಫಾಲೋವರ್ಸ್ 4.5 ಮಿಲಿಯನ್. ಯೂಟ್ಯೂಬ್ ಸಬ್‌ಸ್ಕ್ರೈಬರ್ಸ್ 2 ಮಿಲಿಯನ್. ಈತನ ಟೀ ಕುಡಿಯಲು ಜನ ಕಿಲೋಮೀಟರ್ ಗಟ್ಟಲೆ ಟ್ರಾವೆಲ್ ಮಾಡ್ತಾರೆ. ಗಂಟೆ ಗಟ್ಟಲೆ ಕ್ಯೂ ನಿಲ್ತಾರೆ. ಈತನನ್ನು ಜಗತ್ತಿನ ಕುಬೇರ ಬಿಲ್ಗೇಟ್ಸ್ ಮೀಟ್ ಆದ ವೀಡಿಯೊ ವೈರಲ್ ಆಗೋಯ್ತು.
ನಿಮಗೂ ಗೊತ್ತು, ಮನೆ ಮನೆಯಲ್ಲಿ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್‌ಗಳಿದ್ದಾರೆ. ಕ್ವಾಲಿಟಿ ಕೇಳಂಗಿಲ್ಲ. ಯಾವುದನ್ನು ನೋಡೋದು, ಯಾವುದನ್ನು ಬಿಡೋದು, ಆಯ್ಕೆ ಕಷ್ಟ. ಒಂದೆರಡು ಗಂಟೆ ಸುದೀರ್ಘ ವೀಡಿಯೊ ನೋಡಲು ಬೇಜಾರು. 1 ನಿಮಿಷದ 20-30 ವೀಡಿಯೊ ಒಂದೇ ಉಸುರಿಗೆ ನೋಡೋರೇ ಹೆಚ್ಚು. ಸುದೀರ್ಘ ಕಥೆ ಬೇಕಿಲ್ಲ. ಎಲ್ಲಾ ಫಟಾಫಟ್. ಚಿಕ್ಕದಾಗಿ, ಚೊಕ್ಕದಾಗಿ ಏನೇ ಕೊಟ್ಟರೂ ಸ್ವಾಹಾ. ಇದರಿಂದಲೇ ರೀಲ್ಸ್ ಮತ್ತು ಶಾರ್ಟ್ಸ್‌ಗೆ ಮಾಸ್ ಅಟ್ರಾಕ್ಷನ್. ಇದೆಲ್ಲಾ, ಒಂದೆರಡು ವರ್ಷದಲ್ಲಿ ಆದ ಬದಲಾವಣೆ ಅಲ್ಲ. ಸೂಪರ್‌ಫಾಸ್ಟ್ ಸುದ್ದಿ, ಭಾರತದ ಟಿವಿ ಚಾನೆಲ್‌ಗಳಲ್ಲಿ ಟ್ರೆಂಡ್ ಆಗಿ 10 ವರ್ಷಗಳೇ ಕಳೆಯಿತು. ಪ್ರೇಕ್ಷಕರು ಒಂದು ವೀಡಿಯೊ ನೋಡೋ ರೀತಿ ಮತ್ತು ನೀತಿ ಬದಲಾಗಿದೆ. ಒಂದೇ ವಿಚಾರವನ್ನು 1 ನಿಮಿಷ ಬಿಟ್ಟರೆ ಎರಡು ನಿಮಿಷ. ಅದಕ್ಕಿಂತ ಹೆಚ್ಚು ನೋಡೊ ತಾಳ್ಮೆನೂ ಇಲ್ಲ. ‘ಆತ್ಮಬಲ’ವೂ ಇಲ್ಲ ಅನ್ಸುತ್ತೆ!
ನವ ಮಾಧ್ಯಮದ ಅಲೆಯ ಆಘಾತ ದೇಶದಲ್ಲಷ್ಟೇ ಅಲ್ಲ, ಜಗತ್ತಿನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳ ಮೇಲೂ ಬೀರಿವೆ. ಎಲ್ಲಾ ಪತ್ರಿಕೆ, ಟಿವಿ ಸಂಸ್ಥೆ ಯೂಟ್ಯೂಬ್ ಶಾರ್ಟ್ಸ್ ರೀಲ್ಸ್ ಮೇಲೆ ಗಮನ ನೀಡುತ್ತಿದೆ. ಎಷ್ಟು ಸಾಧ್ಯವೋ ಅಷ್ಟು ಹೊಸ ಓದುಗರನ್ನು, ವೀಕ್ಷಕರನ್ನು ಪಡೆಯಲು, ಆ ಮೂಲಕ ಹೊಸ ಅಲೆಗೆ ಅಲುಗಾಡದಿರಲು, ಬ್ರಾಂಡ್ ನೇಮ್ ಗಟ್ಟಿಯಾಗಿಡಲು ಸರ್ವ ಪ್ರಯತ್ನ ಮಾಡುತ್ತಿದೆ.
ಮೊದಲೆಲ್ಲಾ ಪತ್ರಿಕೆ ಓದಿ, ರೇಡಿಯೊ ಕೇಳಿ, ಟಿವಿ ನೋಡಿ ಮನೆಯಲ್ಲಿ ಗೊಣಗುತ್ತಿದ್ದವರೇ ಹೆಚ್ಚು. ಗೆಳೆಯರ ಜೊತೆ ಹರಟುತ್ತಾ, ವಾದಿಸುತ್ತಾ ಗೀಳು ತೀರಿಸಿಕೊಳ್ಳುತ್ತಿದ್ದವರೂ ಇದ್ರು. ಓದುಗರ ಪತ್ರ, ಕೇಳುಗರ ಪತ್ರ ಬರೆಯುತ್ತಿದ್ದರು. ಈಗ ಮೊಬೈಲ್ ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಕ್ಷಣ ಮಾತ್ರದಲ್ಲಿ ವೈರಲ್ ಆಗ್ಬಹುದು. ಅನಿಸಿಕೆ ಏನಿರುತ್ತೋ, ಅದೇಗಿರುತ್ತೋ, ಯಥಾವತ್ ಅಲ್ಲೇ ಕಕ್ಕಿಬಿಡುತ್ತೇವೆ. ಅಳೆದುತೂಗಿ ಪ್ರತಿಕ್ರಿಯಿಸುವ ಜಾಯಮಾನ ಕಡಿಮೆಯಾಗಿದೆ. ಇಲ್ಲಿ ಎಲ್ಲರಿಗೂ ತರಾತುರಿ. ತಾಳ್ಮೆ ಅನ್ನೋದು ಗುಜರಿ.
ಹೊಸ ಮೀಡಿಯಾದ ಮೂಲಕ ಪ್ರತಿಯೊಬ್ಬರೂ ಪ್ರತಿಕ್ರಿಯಿಸಬಹುದು. ಓದುಗರ ಪತ್ರ, ನೋಡುಗರ ಪತ್ರದ ಬದಲು ವೈರಲ್ ಆದ ಮಿತ್ರರೇ ನಮ್ಮ ಸುತ್ತ ಮುತ್ತ ತುಂಬಾ. ಆದ್ರೀಗ ಲೆವೆಲ್ ಚೇಂಜ್ ಆಗುತ್ತಿದೆ. ಮತ್ತೊಂದು ಹಂತಕ್ಕೆ ಹೋಗುತ್ತಿದೆ. ನಮ್ಮ ಮೀಡಿಯಾ ನಿಂತ ನೀರು ಅಂತ ಗೊಣಗುತ್ತಿದ್ದವರು ಬೆಕ್ಕಸ ಬೆರಗಾಗಿದ್ದಾರೆ. ಈಗ ಜನಪ್ರಿಯವಾಗುತ್ತಿರುವ Ai(ಆರ್ಟಿಫೀಶಿಯಲ್ ಇಂಟೆಲಿಜೆನ್ಸ್) ಅಕ್ಷರಶಃ ಮಾಯಾಂಗನೆ. Ai ಗೆ ಸದ್ಯಕ್ಕಂತೂ ಸೀಮೆಗಳಿಲ್ಲ. ಸೀಮಿತ ರೇಖೆಗಳಿಲ್ಲ. ಇದು ಅಸೀಮ. ನೀವು ಊಹಿಸಲೂ ಅಸಾಧ್ಯವಾದ ಲೋಕದ ಕಥೆಯನ್ನು ಉಣಬಡಿಸುವ ಕಾಮಧೇನು.
ಒಂದು ಚೆಂದದ ವೀಡಿಯೊ ವರದಿ ನಿಮ್ಮ ಮುಂದಿಡಲು, ಅದೆಷ್ಟೋ ಬೆವರು ಚಿಮ್ಮುವಷ್ಟು ಫೀಲ್ಡ್ ಮತ್ತು ಸ್ಟುಡಿಯೋ ವರ್ಕ್ ಮಾಡ್ಬೇಕು. ಆದರೆ, ಮೊಬೈಲ್ ಮೂಲಕ Ai ಅನಿಮೇಶನ್ ಬಳಸಿ ಕ್ಷಣಾರ್ಧದಲ್ಲಿ ವೀಡಿಯೊ ಸೃಷ್ಟಿ ಸಾಧ್ಯ. ಕ್ಯಾಮರಾದಲ್ಲಿ ಸೆರೆ ಹಿಡಿಯಲು, ಮರುಸೃಷ್ಟಿಸಲು ಅಸಾಧ್ಯವಾದ, ಅದ್ಭುತ ಕಲ್ಪನಾ ಲೋಕವನ್ನು Ai ಬಳಸಿ ಸೃಷ್ಟಿಸಬಹುದು. ಕ್ಯಾಮರಾದಲ್ಲಿ ಸೆರೆ ಹಿಡಿದು, ಎಡಿಟಿಂಗ್ ಮಾಡಿ, ಸಂಯೋಜಿಸಲು ಟೈಮ್ ಬೇಕು. ಆದರೆ, Ai ಮೂಲಕ ಏನೇನೂ ಬೇಕಿಲ್ಲ. ಇಲ್ಲಿ ಸಿನೆಮಾ ಕೂಡಾ ಸುಲಭ ಸಾಧ್ಯ. ಹೊಸ ಜಗತ್ತು ಹೊಸ ರೀತಿಯ ಸುದ್ದಿ ಮತ್ತು ಮನರಂಜನೆ ಉಣ ಬಡಿಸಲು ಸಜ್ಜಾಗಿದೆ.
ಕ್ಯಾಮರಾ ವೀಡಿಯೊ, Aiವೀಡಿಯೊ, ಯಾವುದು ಬೆಸ್ಟ್ ಅಂತ ಕೇಳಿದ್ರೆ ಕಳೆದ 20 ವರ್ಷದೊಳಗೆ ಹುಟ್ಟಿದವರು, Ai ವೀಡಿಯೊವನ್ನೇ ಮೆಚ್ಚುತ್ತಾರೆ. ಈಗ ಶಾಲೆ, ಕಾಲೇಜಿನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಗೇಮಿಂಗ್, ಅನಿಮೇಶನ್, ಅನಿಮೀ ಅನ್ನೋದು ನಾರ್ಮಲ್. ಕಳೆದ 20 ವರ್ಷದಲ್ಲಿ, ಮಾಧ್ಯಮದಲ್ಲಾದ ಬದಲಾವಣೆಯ ವೇಗ ಯಾರೂ ಊಹಿಸಿರಲಿಲ್ಲ. ಮೊದಲ ಪುಟದಿಂದ ಕೊನೆ ಪುಟದ ತನಕ ಪತ್ರಿಕೆ ಓದಿ, ಒಂದೇ ಟಿವಿ ಚಾನೆಲ್ ಬೆಳಗ್ಗಿನಿಂದ ಸಂಜೆ ತನಕ ನೋಡಿ ಬೆಳೆದವರಿಗೆ ಈ ಬದಲಾವಣೆ ಸ್ವೀಕರಿಸುವುದು ಕಷ್ಟವಾಗಬಹುದು. ಅನಿಮೇಶನ್, ಅನಿಮೀ, ಕಾರ್ಟೂನ್ ನೋಡಿ ಬೆಳೆದ ಮಕ್ಕಳು ಅಜಿ ಸಿದ್ಧ ಪಡಿಸೋ ಫಟಾಫಟ್ ವೀಡಿಯೊಗಳ ದಾಸರಾದರೆ, ಅವರನ್ನು ದೂರುವುದರಿಂದ ಫಲವಿಲ್ಲ.
ಶಾರ್ಟ್ ಕಂಟೆಂಟ್ ಕ್ರಿಯೇಟ್ ಮಾಡೋರು ಮಾಸ್ ಲೆವೆಲ್ ರೀಚ್ ಆಗಿ ಬಾಸ್ ಆಗ್ತಿದ್ದಾರೆ. ಸದ್ಯಕ್ಕಂತೂ ಈ ಮೊಬೈಲ್ ಮಾಯಾಜಿಂಕೆಗೆ ಎಐ ಮತ್ತಷ್ಟು ವೇಗ ತುಂಬಿದೆ. ಇದು ಇನ್ನು ಎಲ್ಲೆಲ್ಲಿಗೆ ಮಾಧ್ಯಮವನ್ನು ಹೊತ್ತೊಯ್ಯುತ್ತೆ, ಊಹಿಸೋದು ಕಷ್ಟ. ಆದರೆ, ಈ ಅತಿಯಾದ ವೇಗ, ಮನುಷ್ಯನ ಗಮನ ಮತ್ತು ಏಕಾಗ್ರತೆಯನ್ನು ಗುಜರಿಗೆ ಸೇರಿಸಿದೆ. ಒಂದೇ ಕಡೆ ಕೂರಕ್ಕೂ ಆಗಲ್ಲ, ಒಂದೇ ಸುದೀರ್ಘ ಮನರಂಜನೆ ವೀಡಿಯೊ ಕೂತ್ಕೊಂಡು ನೋಡಕ್ಕಾಗುತ್ತಿಲ್ಲ. ಎಲ್ಲರಿಗೂ ಶಾರ್ಟ್ ಇಷ್ಟ. ಎಲ್ಲಾ ಚಿಕ್ಕದಾಗಿ, ಚೊಕ್ಕದಾಗಿರಬೇಕು. ಮರ್ಕಟ ಮನಸು ಒಂದೇ ಕಡೆ ನಿಲ್ಲೋದಿಲ್ಲ. ಅದನ್ನು ಕಟ್ಟಿಹಾಕೋದು ಸದ್ಯಕ್ಕಂತೂ ಸಾಧ್ಯನೂ ಇಲ್ಲ. ಯಾಕೆಂದರೆ, ಅಂಗೈಯಲ್ಲಿ ಜಗತ್ತೇ ಇದೆ, ಆದರೆ, ತಲೆಯಲ್ಲಿ ನೂರಾರು ಜ್ವಾಲಾಮುಖಿ ಸ್ಫೋಟಿಸುತ್ತಿವೆ.