ಮಂಗಳೂರು ಕೆಥೋಲಿಕ್ ಪಾರಂಪರಿಕ ಮನೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ
ಮಂಗಳೂರು, ಅ.7: ಮಂಗಳೂರಿನ ಕೆಥೋಲಿಕ್ ಪಾರಂಪರಿಕ ಮನೆಗಳ ವೈಶಿಷ್ಟ್ಯತೆಯನ್ನು ದಾಖಲಿಸಿರುವ ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆ (ಇಂಟಾಕ್)ಯ ಮಂಗಳೂರು ವಿಭಾಗದ ವತಿಯಿಂದ ಛಾಯಾಚಿತ್ರ ಪ್ರದರ್ಶನಕ್ಕೆ ನಗರದ ಕೊಡಿಯಾಲ್‌ಗುತ್ತು ಕಲಾಕೇಂದ್ರದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಆಲ್ಬಮ್ ಆಫ್ ದಿ ಪೋರ್ಚಸ್ ಎಂಬ ರ್ಶೀಕೆಯಡಿ ನಡೆಯುತ್ತಿರುವ ಈ ಪ್ರದರ್ಶನವು ಅ.11ರವರೆಗೆ ಪೂ.11ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಈ ಯೋಜನೆಯು ನಗರದಾದ್ಯಂತ 27 ಸಾಂಪ್ರದಾಯಿಕ ಕೆಥೋಲಿಕ್ ಮನೆಗಳನ್ನು ದಾಖಲಿಸಿ ಅವುಗಳ ವಾಸ್ತುಶಿಲ್ಪ, ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಂಗ್ರಹಿಸಿದೆ.
ದ.ಕ. ಕೆಥೋಲಿಕ್ ಸಂಘ (ಸಿಎಎಸ್‌ಕೆ) ಅಧ್ಯಕ್ಷ ರೊನಾಲ್ಡ್ ಗೋಮ್ಸ್ ಪ್ರದರ್ಶನವನ್ನು ಉದ್ಘಾಟಿಸಿದರು. ಇಂಟಾಕ್ ಮಂಗಳೂರು ಸಂಚಾಲಕ ಮತ್ತು ವಾಸ್ತುಶಿಲ್ಪಿಸುಭಾಸ್ ಬಸು ಹಾಗು ಸಂಶೋಧಕ ಡಾ. ಮೈಕೆಲ್ ಲೋಬೊ ಉಪಸ್ಥಿತರಿದ್ದರು.
ಸಂಶೋಧಕಿ ಶರ್ವಾಣಿ ಭಟ್ ಮತ್ತು ಛಾಯಾಗ್ರಾಹಕ ಮುರಳಿ ಅಬ್ಬೆಮನೆ ಅವರನ್ನು ಯೋಜನೆಗೆ ಸಹಕಾರ ನೀಡಿದ ಇತರರೊಂದಿಗೆ ಸನ್ಮಾನಿಸಲಾಯಿತು.
ಭವಿಷ್ಯದ ಪೀಳಿಗೆಗಳಿಗೆ ಈ ಪರಂಪರೆಯನ್ನು ಸಂರಕ್ಷಿಸಲು ಸಹಕಾರಿಯಾಗುವಂತೆ ಇದನ್ನು ಆಲ್ಬಮ್-ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ಇದೆ ಎಂದು ಪ್ರಕಟನೆ ತಿಳಿಸಿದೆ.