ಮಂಗಳೂರು| ಆನ್‌ಲೈನ್ ಮೂಲಕ ವ್ಯಕ್ತಿಗೆ 1.60 ಕೋಟಿ ರೂ. ವಂಚನೆ

Update: 2024-05-09 17:46 GMT

ಮಂಗಳೂರು: ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ 1.60 ಕೋಟಿ ರೂ. ವಂಚಿಸಿದ ಘಟನೆ ವರದಿಯಾಗಿದೆ.

ಆನ್‌ಲೈನ್ ಮೂಲಕ ಹಣ ಕಳೆದುಕೊಂಡಿರುವ ವ್ಯಕ್ತಿ ಇದೀಗ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹಣ ಕಳೆದುಕೊಂಡಿರುವ ವ್ಯಕ್ತಿಗೆ ಇತ್ತೀಚೆಗೆ ಪೊಲೀಸ್ ಅಧಿಕಾರಿ ಎಂದು ಕರೆ ಮಾಡಿ ನೀವು ಮುಂಬೈನಿಂದ ಥಾಯ್ಲೆಂಡ್‌ಗೆ ಕಳುಹಿಸಿದ ಪಾರ್ಸೆಲ್‌ನಲ್ಲಿ ನಿಷೇಧಿತ ವಸ್ತು ಇದೆ ಎಂಬ ಕಾರಣ ನೀಡಿ ಥಾಯ್ಲೆಂಡ್‌ನ ಕಸ್ಟಮ್ಸ್‌ನ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಈ ಪ್ರಕರಣವನ್ನು ಮುಂಬೈನ ಸೈಬರ್ ಕ್ರೈಮ್ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ ಎನ್ನಲಾಗಿದೆ.

ಈ ಪಾರ್ಸೆಲ್ ವಿವಾದವನ್ನು ಬಗೆಹರಿಸಲು ತಾನು ಹೇಳಿದಷ್ಟು ಹಣವನ್ನು ಠೇವಣಿಯಾಗಿ ಇಡಬೇಕು. ಈ ಹಣವನ್ನು ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ವಾಪಸ್ ನೀಡಲಾಗುವುದು. ಹಣ ಪಾವತಿಸದಿದ್ದರೆ ವಿದೇಶದಲ್ಲಿ ಕಲಿಯುತ್ತಿರುವ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸುವುದಾಗಿ ಆತ ತಮಗೆ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಂಚನೆಗೊಳಗಾದ ವ್ಯಕ್ತಿ ತಿಳಿಸಿದ್ದಾರೆ.

ಮುಂಬೈನ ಪೊಲೀಸ್ ಅಧಿಕಾರಿಯೆಂದು ಪರಿಚಯಿಸಿಕೊಂಡ ವ್ಯಕ್ತಿ ಸೂಚನೆಯಂತೆ ವಿವಿಧ ಖಾತೆಗಳಿಗೆ 1.60 ಕೋಟಿ ರೂ. ಠೇವಣಿ ಇಟ್ಟು ಇದೀಗ ವಂಚನೆಗೊಳಗಾಗಿದ್ದಾರೆ. ವಂಚನೆ ಅರಿವಾಗುತ್ತಲೇ ಹಣ ಕಳೆದುಕೊಂಡಿರುವ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News