ಮೇ 9ರಂದು ದ.ಕ. ಜಿಲ್ಲೆಯಿಂದ ಹಜ್ ಯಾತ್ರೆಗೆ ಮೊದಲ ತಂಡ ಪಯಣ

Update: 2024-05-06 18:25 GMT

ಮಂಗಳೂರು: ಪವಿತ್ರ ಹಜ್ ನಿರ್ವಹಿಸಲು ದ.ಕ.ಜಿಲ್ಲೆಯ ಮೊದಲ ತಂಡ ಮೇ 9ರಂದು ಬೆಂಗಳೂರಿನಿಂದ ವಿಮಾನದ ಮೂಲಕ ತೆರಳಲಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯ ಸಯ್ಯಿದ್ ಮುಹಮ್ಮದ್ ಅಶ್ರಫ್ ತಂಙಳ್ ಅಸ್ಸಖಾಫ್ ಮದನಿ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಜಿಲ್ಲೆಯಿಂದ 1044  ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ ಎಂದರು.

ಮೊದಲು ಮಂಗಳೂರಿನಿಂದಲೇ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಇತ್ತು. ಆದರೆ ಕೊರೋನ ಬಳಿಕ ಇಲ್ಲಿಂದ ನೇರ ವಿಮಾನದ ವ್ಯವಸ್ಥೆ ಇಲ್ಲ. ಬೆಂಗಳೂರಿಗೆ ಹೋಗಿ ಅಲ್ಲಿಂದ ವಿಮಾನದ ಮೂಲಕ ತೆರಳಬೇಕಾಗಿದೆ ಎಂದು ಹೇಳಿದರು.

ಮಂಗಳೂರಿನಿಂದ ನೇರ ವಿಮಾನ ಸ್ಥಗಿತಗೊಂಡ ಬಳಿಕ ಬೆಂಗಳೂರು ಮತ್ತು ಕೇರಳದ ಮೂಲಕ ವಿಮಾನದಲ್ಲಿ ಹಜ್ ಯಾತ್ರೆ ಕೈಗೊಳ್ಳಬೇಕಾಗಿದೆ. ಮುಂದಿನ ವರ್ಷ ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ಹಜ್‌ಗೆ ತೆರಳಲು ವಿಮಾನದ ಸೌಲಭ್ಯವನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಭರವಸೆ ನೀಡಿರುವುದಾಗಿ ತಿಳಿಸಿದರು.

ಲಸಿಕೆ , ತರಬೇತಿ ನೀಡಲಾಗಿದೆ: ದ.ಕ. ಜಿಲ್ಲೆಯಿಂದ ಹಜ್ ಯಾತ್ರೆಗೆ ಕೈಗೊಳ್ಳುವ ಎಲ್ಲರಿಗೂ ಲಸಿಕೆ ನೀಡಲಾಗಿದೆ. ಹಜ್ ತರಬೇತಿ ನೀಡಲಾಗಿದೆ. ಹಜ್ ಯಾತ್ರೆಗೆ ದ.ಕ. ಜಿಲ್ಲೆಯಿಂದ 1074 ಮತ್ತು ಉಡುಪಿ ಜಿಲ್ಲೆಯಿಂದ 79 ಮಂದಿ ತೆರಳಲಿ ದ್ದಾರೆ ಎಂದು ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ತಿಳಿಸಿದರು.

ಮಂಗಳೂರಿನಿಂದ ಬೆಂಗಳೂರಿಗೆ ಹೋಗಲು ಹಜ್ ಕಮಿಟಿಯಿಂದ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಅವರವರ ಸ್ವಂತ ಖರ್ಚಿನಲ್ಲಿ ಹೋಗಬೇಕಾಗಿದೆ. ವಿಮಾನದಲ್ಲಿ ಯಾತ್ರೆ ಕೈಗೊಳ್ಳಬೇಕಾದ 48 ಗಂಟೆಗಳ ಮುಂಚಿತವಾಗಿ ಹಜ್ ಕ್ಯಾಂಪ್‌ಗೆ ತಲುಪಿ ವರದಿ ಮಾಡಬೇಕಾಗಿದೆ. ಉದಾರಣೆಗೆ ಮೇ 10ಕ್ಕೆ ವಿಮಾನದಲ್ಲಿ ಟಿಕೆಟ್ ಬುಕ್ ಆಗಿದ್ದರೆ ಮೇ 8ರಂದು ಹಜ್ ಕಾಂಪ್‌ನಲ್ಲಿ ಲಗೇಜ್ ಹಸ್ತಾಂತರಿಸಿ ವರದಿ ಮಾಡಬೇಕಾಗಿದೆ. ಮೇ 9ರಂದು ಪಾಸ್‌ಪೋರ್ಟ್ ಪಡೆದುಕೊಳ್ಳಬೇಕಾಗಿದೆ. ಮೇ 10ರಂದು ಹಜ್ ಕಮಿಟಿ ತಿಳಿಸಿರುವ ಸಮಯಕ್ಕೆ ಹಜ್ ಕ್ಯಾಂಪ್‌ಗೆ ಹಾಜರಾಗಬೇಕಗಿದೆ. ಅಲ್ಲಿಂದ ಬಸ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತದೆ. ತಲಾ20 ಕೆ.ಜಿ 2 ಬ್ಯಾಗ್‌ಗಳನ್ನು ಕೊಂಡೊಯ್ಯಲು ಅವಕಾಶ ಇದೆ. 7 ಕೆ.ಜಿ ಯ ಹ್ಯಾಂಡ್ ಬ್ಯಾಗ್‌ನ್ನು ತಮ್ಮೊಂದಿಗೆ ಕೊಂಡು ಹೋಗಬಹುದು ಎಂದರು.

ಹಜ್ಜಾಜ್‌ಗಳನ್ನು ಹೊತ್ತ ಮೊದಲ ವಿಮಾನ ಬೆಂಗಳೂರಿನಿಂದ ಮದೀನಕ್ಕೆ ತೆರಳಲಿದೆ.ಮೊದಲ ದಿನ ಎರಡು ವಿಮಾನಗಳ ಸೌಲಭ್ಯ ಇರುತ್ತದೆ. ಮೇ 25ರ ತನಕ ವಿಮಾನ ಇರುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾರಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎಸ್‌ಎಂ ರಶೀದ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಪ್ರಮುಖರಾದ ಬಿ.ಎಸ್.ಬಶೀರ್ ಹಾಜಿ, ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News