ದ.ಕ. ಜಿಲ್ಲೆಯಲ್ಲಿ ಮೋದಿ ಹವಾ ಇಲ್ಲ, ಇಲ್ಲಿ ಕಾಂಗ್ರೆಸ್ 'ಗ್ಯಾರಂಟಿ ಹವಾ' ಜೋರಾಗಿದೆ: ಹರೀಶ್ ಕುಮಾರ್

Update: 2024-04-24 07:37 GMT

ಮಂಗಳೂರು, ಎ. 24: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲೊಪ್ಪಿಕೊಂಡಿದ್ದು, ಇಲ್ಲಿ ಪ್ರಧಾನಿ ಮೋದಿ ಹವಾ ಇಲ್ಲ. ಬದಲಾಗಿ ಇಲ್ಲಿಯೂ ಕಾಂಗ್ರೆಸ್ ನ ಗ್ಯಾರಂಟಿ ಹವಾ ಜೋರಾಗಿದೆ. ಹಾಗಾಗಿ ಚುನಾವಣಾ ಕಣದಲ್ಲಿ ಪೈಪೋಟಿ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 33 ವರ್ಷಗಳಿಂದ ಈ ಲೋಕಸಭಾ ಕ್ಷೇತ್ರವನ್ನು ಗೆದ್ದಿರುವ ಬಿಜೆಪಿ ಪಾಳಯದಲ್ಲಿ ಭಯ ಶುರವಾಗಿದ್ದು, ಪ್ರಚಾರಕ್ಕಾಗಿ ಪ್ರಧಾನಿ ಮೋದಿಯವರನ್ನೇ ಕರೆಸಿದರೂ ಅವರು ಮನಪೂರ್ವಕವಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಹಿಂದೆಲ್ಲಾ ಸೇರಿಸುತ್ತಿದ್ದ ಜನ ಸೇರಿಸಲು ಈ ಬಾರಿ ಬಿಜೆಪಿಯಿಂದ ಸಾಧ್ಯವಾಗಿಲ್ಲ ಎಂದರು.

ಪ್ರಧಾನಿ ಮೋದಿ ಹತಾಶೆಗೊಂಡಿರುವುದು ಚುನಾವಣಾ ಪ್ರಚಾರದ ಹೇಳಿಕೆಗಳಿಂದ ವ್ಯಕ್ತವಾಗುತ್ತಿದೆ. ಅವರು ಓರ್ವ ಪ್ರಧಾನಿಯಾಗಿ ಮಾತನಾಡುತ್ತಿಲ್ಲ. ಕಾಂಗ್ರೆಸ್ ನವರು ಮಂಗಳಸೂತ್ರ ಕಸಿಯುತ್ತಾರೆ, ಮುಸ್ಲಿಮರಿಗೆ ಆಸ್ತಿ ಹಂಚಿಕೆ ಮಾಡುತ್ತಾರೆ, ದಲಿತ ಮೀಸಲಾತಿ ತೆಗೆದು ಮುಸ್ಲಿಮರಿಗೆ ನೀಡುತ್ತಾರೆ ಎಂಬೆಲ್ಲಾ ಮಾತುಗಳನ್ನು ದಾಖಲೆರಹಿತವಾಗಿ ಪ್ರಧಾನಿ ಊಹೆ ಮಾಡುತ್ತಿರುವುದು ವಿಷಾದನೀಯ ಎಂದು ಹರೀಶ್ ಕುಮಾರ್ ಪ್ರತಿಕ್ರಿಯಿಸಿದರು.

ಮಂಗಳಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿಯವರಿಗೆ ಮಣಿಪುರ ಸಂಘರ್ಷದಲ್ಲಿ ಹುತಾತ್ಮರಾದವರ ಪತ್ನಿಯರ ಮಂಗಳಸೂತ್ರದ ನೆನಪಾಗಿಲ್ಲ. ಕೊರೋನ, ನೋಟ್ ಬ್ಯಾನ್ನಲ್ಲಿ ಮೃತಪಟ್ಟವರ ಮಂಗಳಸೂತ್ರದ ಬಗ್ಗೆ ಅರಿವಿಲ್ಲ ಎಂದು ಹರೀಶ್ ಕುಮಾರ್ ಆಕ್ಷೇಪಿಸಿದರು.

ಜನರು ಕೇಂದ್ರ ಸರಕಾರದಿಂದ ಭ್ರಮನಿರಸನಗೊಂಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವಿಧಾನಸಭಾಚುನಾವಣೆಯಲ್ಲಿ ಪ್ರಣಾಳಿಕೆಯಂತೆ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಭರವಸೆ ಈಡೇರಿಸಿದೆ. ಕೇಂದ್ರದಲ್ಲಿ ಮತ್ತೆ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದ್ದು, ಇದನ್ನು ಅನುಷ್ಠಾನಗೊಳಿಸುವ ಭರವಸೆಯೂ ಮತದಾರರಿಗೆ ಮೂಡಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ನೋಟಾ ಅಭಿಯಾನ ಪಕ್ಷದ ಅಭ್ಯರ್ಥಿ ಗೆಲುವಿಗೆ ಪರಿಣಾಮ ಬೀರುವುದೇ ಎಂಬ ಪ್ರಶ್ನೆಗೆ, ನಾವು ಅದರ ಬಗ್ಗೆ ಗಮನಿಸಿಲ್ಲ, ಆ ಬಗ್ಗೆ ಚರ್ಚಿಸಲೂ ಇಷ್ಟಪಡುವುದಿಲ್ಲ ಎಂದರು.

ಮಾಜಿ ಮೇಯರ್ ಕವಿತಾ ಸನಿಲ್ ಬಿಜೆಪಿ ಸೇರ್ಪಡೆಯ ಪ್ರಶ್ನೆಗೆ, ಕಾಂಗ್ರೆಸ್ ಈ ವಿಷಯವನ್ನು ದೊಡ್ಡ ವಿಷಯವಾಗಿ ಪರಿಗಣಿಸಿಯೇ ಇಲ್ಲ. ಜೆಡಿಎಸ್ ನ ಸಾಕಷ್ಟು ನಾಯಕರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಬಲ ತುಂಬಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಹಾಬಲ ಮಾರ್ಲ, ನೀರಜ್ ಪಾಲ್, ಟಿ.ಎಂ.ಶಹೀದ್ ತೆಕ್ಕಿಲ್, ಜಿತೇಂದ್ರ, ಮುಹಮ್ಮದ್, ಶುಭೋದಯ ಆಳ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News