×
Ad

ವಿದ್ಯಾರ್ಥಿಗಳ ಕೊರತೆಯಿಂದ ನಾಲ್ಕು ಪಿಜಿ ಕೋರ್ಸ್ ತಾತ್ಕಾಲಿಕ ಸ್ಥಗಿತ: ಮಂಗಳೂರು ವಿವಿ ಕುಲಪತಿ

Update: 2025-11-05 18:53 IST

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆ ಕ್ಯಾಂಪಸ್‌ನಲ್ಲಿ ಈ ಬಾರಿ ನಾಲ್ಕು ಪಿಜಿ ವಿಭಾಗಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕುಲಪತಿ ಪ್ರೊ.ಪಿ.ಎಲ್. ಧರ್ಮ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ನಡೆದ ಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸಂಖ್ಯಾಶಾಸ್ತ್ರ, ಎಚ್‌ಆರ್‌ಡಿ, ಎಂಸಿಜೆ (ಪತ್ರಿಕೋದ್ಯಮ), ಇಲೆಕ್ಟ್ರಾನಿಕ್ಸ್ ವಿಭಾಗಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದ್ದರಿಂದ ಈ ವರ್ಷಕ್ಕೆ ಅನ್ವಯಿಸುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಎಂಸಿಜೆ ವಿಭಾಗಕ್ಕೆ ಕೇವಲ ಒಬ್ಬ ವಿದ್ಯಾರ್ಥಿ ಅರ್ಜಿ ಸಲ್ಲಿಸಿದ್ದರು. ಈ ವಿಭಾಗವನ್ನು ನಡೆಸಲು ಕನಿಷ್ಠ 10-15 ವಿದ್ಯಾರ್ಥಿಗಳಾದರೂ ಬೇಕು. ಈ ಬಗ್ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಆಡಳಿತಾತ್ಮಕ ಸಮಜಾಯಿಶಿ ನೀಡಲಾಗಿದೆ ಎಂದು ಪ್ರೊ. ಪಿ.ಎಲ್.ಧರ್ಮ ತಿಳಿಸಿದರು.

ವಿವಿಗೆ ಕೊಣಾಜೆ ಗ್ರಾಮಪಂಚಾಯತ್‌ನಿಂದ ಕಂದಾಯ ವಿಧಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿ ಅವರು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗುವ ಕಟ್ಟಡಗಳಿಗೆ ಮಾತ್ರ ಕಂದಾಯ ವಿಧಿಸಬಹುದೇ ವಿನಃ ಸೇವಾ ವಿಭಾಗಗಳಿಗೆ ವಿಧಿಸಬಾರದು. ಈ ಬಗ್ಗೆ ಸ್ಪೀಕರ್ ಖಾದರ್ ಬಳಿ ಮಾತುಕತೆ ನಡೆಸಲಾಗಿದೆ. ಸರಿಯಾಗಿ ಕಂದಾಯ ಲೆಕ್ಕಾಚಾರ ನಡೆದ ಬಳಿಕ ಮುಂದಿನ ಹಂತದಲ್ಲಿ ಅದನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News