ಮಂಗಳೂರು: ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Update: 2024-05-06 09:24 GMT

ಮಂಗಳೂರು:  ಖ್ಯಾತ ಕೊಂಕಣಿ ಸಾಹಿತಿ ಮತ್ತು ಸಂಘಟಕ, ಕೊಂಕಣಿ ಸಾಹಿತಿ ಮತ್ತು ಕಲಾವಿದ ಸಂಘಟನೆಯ ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ (69) ಅವರು ಅಲ್ಪಕಾಲದ ಅನಾರೋಗ್ಯದಿಂದ  ಮೇ 6  ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

 ಸಣ್ಣ ಕತೆ ಮತ್ತು ಲಲಿತ ಪ್ರಬಂಧ ಸಾಹಿತ್ಯ ಪ್ರಕಾರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ರೊನಾಲ್ಡ್ ಸಿಕ್ವೇರಾ ’ಶಿಕೇರಾಮ್, ಸುರತ್ಕಲ್’ ಕಾವ್ಯನಾಮದಲ್ಲಿ ನಾಲ್ಕು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಅವರ ’ಗರ್ಜೆಕ್ ಪಡತ್’ ಕಥಾಸಂಗ್ರಹಕ್ಕೆ ಮಣಿಪಾಲದ ಡಾ| ಟಿ.ಎಮ್.ಎ. ಫೌಂಡೇಶನ್ ವತಿಯಿಂದ ವರ್ಷದ ಉತ್ತಮ ಕೃತಿ ಎಂಬ ಪ್ರಶಂಸಾ ಪುರಸ್ಕಾರ ಲಭಿಸಿತ್ತು.

ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿದ್ದ ಅವರು, ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆಯ ಅಧ್ಯಕ್ಷರಾಗಿ ಕೊಂಕಣಿ ಸಾಹಿತಿ ಮತ್ತು ಕಲಾವಿದರ ಹಕ್ಕು ಮತ್ತು ಕ್ಷೇಮಾಭಿವೃದ್ದಿಗಾಗಿ ಅವಿರತ ಶ್ರಮಿಸುತ್ತಿದ್ದರು. 

ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ, ವಿಶನ್ ಕೊಂಕಣಿ ಪುಸ್ತಕ ಪ್ರಾಧಿಕಾರದ ಪ್ರವರ್ತಕ ಮೈಕಲ್ ಡಿ ಸೊಜಾ, ಕವಿತಾ ಟ್ರಸ್ಟ್ ಅಧ್ಯಕ್ಷ ಕಿಶೂ, ಬಾರ್ಕೂರ್, ಆರ್ಸೊ ಸಂಪಾದಕ ವಿಲ್ಸನ್ ಕಟೀಲ್, ಕವಿ, ಚಿಂತಕ ಟೈಟಸ್ ನೊರೊನ್ಹಾ, ಪತ್ರಕರ್ತ ಎಚ್.ಎಮ್. ಪೆರ್ನಾಲ್ ಮುಂತಾದ ಗಣ್ಯರು ರೊನಾಲ್ಡ್ ಸಿಕ್ವೇರಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News