ಮಂಗಳೂರು | ಭಾರತ ಸೇವಾದಳ ವತಿಯಿಂದ ನೆಹರೂ ಜಯಂತಿ, ಮಕ್ಕಳ ದಿನಾಚರಣೆ
ಮಂಗಳೂರು, ನ.14: ಭಾರತ ಸೇವಾದಳ ವತಿಯಿಂದ ಶುಕ್ರವಾರ ನಗರದ ಪಾಂಡೇಶ್ವರದಲ್ಲಿರುವ ನೆಹರೂ ಪ್ರತಿಮೆ ಬಳಿ ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿ ಹಾಗೂ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿಯವರು, ಜವಾಹರಲಾಲ್ ನೆಹರೂರವರು ಆಧುನಿಕ ಭಾರತದ ಶಿಲ್ಪಿಯಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ ಹಾಕಿದ ಪಂಚ ವಾರ್ಷಿಕ ಯೋಜನೆಗಳು ದೇಶವನ್ನು ಅಭಿವೃದ್ಧಿ ಪಡಿಸುವಲ್ಲಿ ಸಹಕಾರಿಯಾಯಿತು. ಅವರ ಅವಧಿಯಲ್ಲಿ ಅನೇಕ ಬೃಹತ್ ಕೈಗಾರಿಕೆಗಳು, ಬ್ಯಾಂಕ್ ಗಳು ಸ್ಥಾಪನೆಯಾಯಿತು. ಮಕ್ಕಳ ಮೇಲೆ ವಿಶೇಷವಾದ ಪ್ರೀತಿಯಿದ್ದ ಕಾರಣ ನೆಹರೂ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ದೇಶಡೆಲ್ಲೆಡೆ ಇಂದು ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಭಾರತ ಸೇವಾದಳದ ಸದಸ್ಯರಿಂದ ನೆಹರೂ ಪೀತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಉಪಾಧ್ಯಕ್ಷ ಪ್ರೇಮ್ ಚಂದ್, ಕೃತಿನ್ ಕುಮಾರ್, ಸುನಿಲ್ ದೇವಾಡಿಗ, ಬೆಂಗ್ರೆ ಶಾಲೆ ಅಧ್ಯಕ್ಷ ರಾಕೇಶ್, ಸೇವಾದಳ ಶಿಕ್ಷಕಿಯರಾದ ಸುಮಾ, ಹರಿಣಾಕ್ಷಿ ಉಪಸ್ಥಿತರಿದ್ದರು.
ತೋಟ ಬೆಂಗ್ರೆ ಶಾಲೆ ಹಾಗೂ ಮುಲ್ಲಕಾಡು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು. ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್ ಸ್ವಾಗತಿಸಿ, ತಾಲೂಕು ಕಾರ್ಯದರ್ಶಿ ಉದಯ ಕುಂದರ್ ವಂದಿಸಿದರು. ಜಿಲ್ಲಾ ಸಂಘಟಕ ಮಂಜೇಗೌಡ ಕಾರ್ಯಕ್ರಮ ನಿರೂಪಿಸಿದರು.