ಮಂಗಳೂರು | ‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕ ಬಿಡುಗಡೆ
ಮಂಗಳೂರು : ಬ್ಯಾರಿ ಕಲಾರಂಗ ಮಂಗಳೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಪ್ರಥಮ ಕಾರ್ಯಕ್ರಮವಾಗಿ ಸಂಘದ ಅಧ್ಯಕ್ಷ ಅಝೀಝ್ ಬೈಕಂಪಾಡಿ ಅವರು ಬರೆದ ‘ಬ್ಯಾರಿ ಬಾಸೆ ಪಡಿಕೋರು’ ಎಂಬ ಪುಸ್ತಕವನ್ನು ಗುರುವಾರ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಪುಸ್ತಕ ಬಿಡುಗಡೆಗೊಳಿಸಿದ ಮಂಗಳೂರು ಪ್ರಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಮಾತನಾಡಿ, ಕರಾವಳಿ ವೈವಿಧ್ಯಮಯ ಭಾಷೆಗಳನ್ನು ಹೊಂದಿರುವ ಭೂ ಪ್ರದೇಶವಾಗಿದ್ದು, ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆ ಭಾಷೆ ಹೀಗಿ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಇಂದು ಬ್ಯಾರಿ ಭಾಷೆಯ ಬೆಳವಣಿಗೆಯಲ್ಲಿ ಸಿನಿಮಾ ಮತ್ತು ಸಾಹಿತ್ಯ ಅಕಾಡೆಮಿ ಪೂರಕವಾಗಿ ಕೆಲಸ ಮಾಡುತ್ತಿದೆ. ಬಾಲ್ಯದಲ್ಲೇ ಹಲವು ಭಾಷೆಗಳನ್ನು ಕಲಿತರೆ ಮಾತನಾಡಲೂ ಸಲೀಸಾಗುತ್ತದೆ. ‘ಬ್ಯಾರಿ ಭಾಷೆ ಪಡಿಕೋರು’ ಪುಸ್ತಕ ಪುಸ್ತಕ ಭಾಷೆಯ ಬೆಳವಣಿಗೆಯ ಜತೆಗೆ ಹೊಸಬರಿಗೆ ಶಬ್ಧಗಳನ್ನು ತಿಳಿಯಲು ಕೂಡಾ ಸಹಕಾರಿಯಾಗಿದೆ ಎಂದರು.
ಸಾಹಿತಿ ಮುಹಮ್ಮದ್ ಬಡ್ಡೂರು ಅವರು ಮಾತನಾಡಿ, ಎಲ್ಲರೂ ಎಲ್ಲ ಭಾಷೆಯನ್ನು ಕಲಿಯಬೇಕು. ಭಾಷೆಯಲ್ಲಿ ಮೇಲು - ಕೀಳು ಎಂಬುವುದಿಲ್ಲ. ಮಾತನಾಡುವವರ ಸಂಖ್ಯೆಯಲ್ಲಿ ಮಾತ್ರ ಹೆಚ್ಚು ಕಡಿಮೆ ಇದೆ. ಹೊರ ಜಿಲ್ಲೆಗಳಿಂದ ಬರುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಈ ಪುಸ್ತಕ ಕೈ ಪಿಡಿ ರೀತಿಯಲ್ಲಿ ಕೆಲಸ ಮಾಡುವಂತಾಗಲಿ ಎಂದರು.
ಬ್ಯಾರಿ ಕಲಾರಂಗ ಅಧ್ಯಕ್ಷ, ಲೇಖಕ ಅಝೀಝ್ ಬೈಕಂಪಾಡಿ ಅವರು ಮಾತನಾಡಿ, ಬ್ಯಾರಿ ಭಾಷೆಯನ್ನು ಇತರ ಭಾಷಿಗರು ಸುಲಭವಾಗಿ ಕಲಿಯುವಂತಾಗಲಿ ಎನ್ನುವ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಿ, ಬಿಡುಗಡೆಗೊಳಿಸಲಾಗಿದೆ. ಕಂದಾಯ ಇಲಾಖೆ, ವಿದ್ಯಾ ಸಂಸ್ಥೆಗಳಿಗೆ, ಪೊಲೀಸ್ ಇಲಾಖೆ, ಎಲ್ಲ ಗ್ರಂಥಾಲಯಗಳಿಗೂ ಪುಸ್ತಕವನ್ನು ಉಚಿತವಾಗಿ ಹಂಚಲಾಗುವುದು. ಬೆಳ್ಳಿ ಹಬ್ಬದ ಭಾಗವಾಗಿ ಮುಂದಿನ ದಿನಗಳಲ್ಲಿ ಪುಣ್ಯಕೋಟಿ ಎಂಬ ಹಾಡಿನ ವಿಡಿಯೋ ಮತ್ತು ಆಡಿಯೋ, ಎರಡು ನಾಟಕ ಪುಸ್ತಕ ಮತ್ತು ರಾಜ್ಯದ ವಿವಿಧೆಡೆ ಜಾನಪದ, ಸಾಂಸ್ಕೃತಿಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರಮುಖರಾದ ಇಸ್ಮಾಯಿಲ್ ಮೂಡುಶೆಡ್ಡೆ, ಶಾಹುಲ್ ಹಮೀದ್, ಸತೀಶ್ ಸುರತ್ಕಲ್, ಡಾ.ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು.