ಮಂಗಳೂರು | ಕೋಮುದ್ವೇಷದ ಪೋಸ್ಟ್: ಪ್ರಕರಣ ದಾಖಲು
ಮಂಗಳೂರು, ಡಿ.9: ನಕಲಿ ಖಾತೆಯ ಮೂಲಕ ಫೇಸ್‌ಬುಕ್‌ನಲ್ಲಿ ಕೋಮು ದ್ವೇಷದ ಪೋಸ್ಟ್ ಮಾಡಿರುವ ಬಗ್ಗೆ ಕಾವೂರು ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಠಾಣೆಯ ಕಾನ್‌ಸ್ಟೇಬಲ್ ನಾಗರಾಜ್ ಭೈರಗೊಂಡ ಅವರು ಡಿ.8ರಂದು ಸಂಜೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುತ್ತಿರುವಾಗ ಮುಹಮ್ಮದ್ ಫಾರೂಕ್ ಅಬ್ದುಲ್ಲಾ ಎಂಬ ಹೆಸರಿನ ನಕಲಿ ಫೇಸ್‌ಬುಕ್ ಖಾತೆ ಹೊಂದಿರುವ ವ್ಯಕ್ತಿ ಮುಸ್ಲಿಂ ಧರ್ಮಗುರುಗಳ ರೀತಿಯಲ್ಲಿ ಕಾಣುವ ವ್ಯಕ್ತಿಯ ಭಾವ ಚಿತ್ರಕ್ಕೆ ಹಂದಿಯ ಮುಖ ಎಡಿಟ್ ಮಾಡಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.
ಸಾರ್ವಜನಿಕರಿಗೆ ತಪ್ಪುಸಂದೇಶಗಳನ್ನು ಕಳುಹಿಸುವ ಮೂಲಕ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಕೋಮು ಭಾವನೆ ಕೆರಳಿಸುವಂತೆ ಮಾಡಲು ಉದ್ದೇಶಪೂರ್ವಕವಾಗಿ ಪೋಸ್ಟ್ ಹಾಕಿ, ಕೋಮು ಸೂಕ್ಷ್ಮ ಸ್ಥಳದಲ್ಲಿ ದೊಂಬಿ-ಗಲಭೆ ನಡೆಸುವ ಹುನ್ನಾರ ಇದರ ಹಿಂದೆ ಅಡಗಿದೆ. ಆದ್ದರಿಂದ ವಿವಾದಾತ್ಮಕ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.