×
Ad

ಮಂಗಳೂರು: ನ.15ರಂದು ಡ್ರಗ್ಸ್ ವಿರುದ್ಧ 'ಜಾಗೃತಿ ಮಹಾ ಸಂಗಮ'

Update: 2025-11-13 14:50 IST

ಮಂಗಳೂರು, ನ.13: ದೂದ್ ನಾನಾ ಕಲ್ಚರಲ್ ಫೌಂಡೇಶನ್ ಹಾಗೂ ಅಲ್ ಸಲಾಮ ಕೌನ್ಸಿಲಿಂಗ್ ಸೆಂಟರ್ ವತಿಯಿಂದ ನ.15ರಂದು ನಗರದ ಪುರಭವನದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮಹಾ ಸಂಗಮವನ್ನು ಆಯೋಜಿಸಲಾಗಿದೆ.

ನಗರದ ಪ್ರೆಸ್ ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮ ಸಂಚಾಲಕ ಶೇಖ್ ಮುಹಮ್ಮದ್ ಇರ್ಫಾನಿ, ದ.ಕ.ಜಿಲ್ಲೆಯಲ್ಲಿ ಮಾದಕ ದ್ರವ್ಯ ವಸ್ತುಗಳ ಹಾವಳಿಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಸಮರ್ಪಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಹೇಳಿದರು.

ಬೆಳಗ್ಗೆ 10ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಮುಖ್ಯ ಭಾಷಣ ಮಾಡಲಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಕಾನೂನು ಸಲಹೆ ನೀಡಲಿದ್ದಾರೆ.

ಅಲ್ ಸಲಾಮ ಅಧ್ಯಕ್ಷ ಜಿ.ಎ.ಬಾವಾ ಯೋಜನೆ ಮಾಹಿತಿ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶರೀಫ್ ಹಾಜಿ ವೈಟ್ ಸ್ಟೋನ್ ವಹಿಸಲಿದ್ದು, ಸೈಯದ್ ಅಮೀರ್ ತಂಙಳ್ ದುಆ ನೆರವೇರಿಸಲಿದಾದರೆ. ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಬಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉದ್ಯಮಿ ಮುಸ್ತಫಾ ಭಾರತ್ ಸಂದೇಶ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಸ್ವೀಕರ್ ಯು.ಟಿ.ಖಾದರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ಹಾಗೂ ಮಾನವೀಯ ಸೇವೆ ನೀಡಿದ ಝೈನುಲ್ ಅಬಿದ್ ರವರನ್ನು ವಿಶೇಷವಾಗಿ ಗೌರವಿಸಲಾಗುವುದು. ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ.ಫಾರೂಕ್ ಪ್ರಾಜೆಕ್ಟ್ ಅನಾವರಣಗೊಳಿಸಲಿದ್ದಾರೆ. ಯೆನೆಪೊಯ ಅಬ್ದುಲ್ಲಾ ಕುಂಞಿ, ಇನಾಯತ್ ಅಲಿ ಮುಲ್ಕಿ, ಹೈದರ್ ಪರ್ತಿಪ್ಪಾಡಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಮಾದಕ ದ್ರವ್ಯ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಹಾಗೂ ಯುವಜನರ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಅಧ್ಯಯ ನಡೆಸಲಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲಾದ 2,000 ಪ್ರಕರಣಗಳಲ್ಲಿ 1,600 ಪ್ರಕರಣಗಳಲ್ಲಿ ಮುಸ್ಲಿಮ್ ಸಮುದಾಯದವರಿರುವುದು ಕಂಡುಬಂದಿದೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವ್ಯಾಪ್ತಿಯಲ್ಲಿ ದಾಖಲಾದ 1,800 ಪ್ರಕರಣಗಳಲ್ಲಿ 1,200ರಷ್ಟು ಮಂದಿ ಮುಸ್ಲಿಮ್ ಸಮುದಾಯದವರು. ಎಂಡಿಎಂಎ ಪೂರೈಕೆ ಮತ್ತು ಬಳಕೆ ಹೆಚ್ಚಿದ್ದು, ಇದು ಯುವಜನರ ಆರೋಗ್ಯದ ಮೇಲೆ ತೀವ್ರ ರೀತಿಯ ಪರಿಣಾಮ ಬೀಳುತ್ತಿದೆ. ಶಾಲಾ, ಕಾಲೇಜು ಮಕ್ಕಳಿಗೆ ಡ್ರಗ್ಸ್ ಪೂರೈಕೆದಾರರು (ಪೆಡ್ಲರ್)ಗಳು ಪರೀಕ್ಷೆಯ ಹಿಂದಿನ ದಿನ ಓದಿದ್ದು, ಮಾದಕ ವಸ್ತುಗಳ ಬಳಕೆಯಿಂದ ಪರೀಕ್ಷೆಯ ದಿನ ನೆನಪು ಶಕ್ತಿಗೆ ನೆರವಾಗುತ್ತದೆ ಎಂಬ ಆಮಿಷ ತೋರಿಸಿ ಮಾದಕ ವ್ಯಸನದ ಜಾಲಕ್ಕೆ ಸಿಲುಕಿಸುವಂತಹ ಪ್ರಕರಣಗಳು ಅಧ್ಯಯನ ವೇಳೆ ಪತ್ತೆಯಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ತಿಳಿಸಿದರು.

ಮುಸಲ್ಮಾನ ಸಮಾಜದಲ್ಲಿ ಮದ್ಯಪಾನ ನಿಷೇಧವಿದೆ. ಈ ಬಗ್ಗೆ ಮದ್ರಸಗಳಲ್ಲಿಯೂ ಬಾಲ್ಯದಲ್ಲೇ ಜಾಗೃತಿ ಮೂಡಿಸಲಾಗುತ್ತದೆ. ಮದ್ಯಪಾನ ಮಾಡಿದರೆ ಅದರ ವಾಸನೆಯಿಂದ ತಿಳಿಯುತ್ತದೆ. ಆದರೆ ಡ್ರಗ್ಸ್ ಸೇವನೆ ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ ಸಮುದಾಯದ ಯುವ ಪೀಳಿಗೆ ಈ ದುಶ್ಚಟಕ್ಕೆ ಹೆಚ್ಚು ಬಲಿಯಾಗುತ್ತಿದ್ದು, ಡ್ರಗ್ಸ್ ವಿರುದ್ಧ ಧರ್ಮಗುರುಗಳಿಂದ ಫತ್ವಾ ಹೊರಡಿಸುವ ಮೂಲಕ ಮದ್ರಸಗಳಿಂದಲೇ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಹಾಜಿ ಬಿಎಂ.ಶರೀಫ್ ವೈಟ್ ಸ್ಟೋನ್, ಕೋಶಾಧಿಕಾರಿ ಫಕೀರಬ್ಬ, ದೂದ್ ನಾನಾ ಫೌಂಡೇಶನ್ ಅಧ್ಯಕ್ಷ ಝೈನುಲ್ ಆಬಿದ್ ಬಿ.ಕೆ., ಅಶ್ರಫ್ ಕುಂಬ್ರ, ಮುಹಮ್ಮದ್ ಕುಂಞಿ ಮಾಸ್ಟರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News