ಮಂಗಳೂರು | ಸಿಐಟಿಯು ಕಚೇರಿ ಕಾರ್ಯದರ್ಶಿಗೆ ಬೆದರಿಕೆ: ಪ್ರಕರಣ ದಾಖಲು
Update: 2025-12-09 20:01 IST
ಮಂಗಳೂರು, ಡಿ.9: ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು)ದ ಕಚೇರಿ ಕಾರ್ಯದರ್ಶಿ ಯೋಗಿತಾ ಸುವರ್ಣ ಅವರಿಗೆ ವ್ಯಕ್ತಿಯೊರ್ವ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.7ರಂದು ಸಂಜೆ 4 ಗಂಟೆಗೆ ಸಂಘದ ಸದಸ್ಯರಿಂದ ವಾರದ ದೇಣಿಗೆ ಸಂಗ್ರಹಕ್ಕಾಗಿ ಬೀದಿ ಬದಿ ವ್ಯಾಪಾರಿಗಳಿರುವ ಲೇಡಿಗೋಷನ್ ಆಸ್ಪತ್ರೆ ಬಳಿ ದೇಣಿಗೆ ಸಂಗ್ರಹಿಸುತ್ತಿರುವಾಗ ಅಲ್ಲಿಗೆ ಬಂದ ಮುಹಮ್ಮದ್ ಆಸಿಫ್ ಬಾವ ಎನ್ನುವ ವ್ಯಕ್ತಿ ನೀವು ವಾರದ ದೇಣಿಗೆ ಸಂಗ್ರಹ ಮಾಡಬಾರದು, ಇಲ್ಲಿಗೆ ಬಂದರೆ ನಾನು ಸುಮ್ಮನಿರುವುದಿಲ್ಲ ಎಂದು ತಳ್ಳಿ ಇತರ ವ್ಯಾಪಾರಿಗಳಲ್ಲಿ ದೇಣಿಗೆ ನೀಡದಂತೆ ತಿಳಿಸಿದ್ದಾನೆ. ಬಳಿಕ ಅವಾಚ್ಯ ಶಬ್ಧಗಳಿಂದ ಬೈದು ಇನ್ನೊಮ್ಮೆ ಇಲ್ಲಿ ಬಂದರೆ ಕೈ ಕಾಲು ಮುರಿದು ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಲು ಮುಂದಾಗಿದ್ದಾನೆ ಯೋಗಿತಾ ದೂರಿನಲ್ಲಿ ತಿಳಿಸಿದ್ದಾರೆ.