ಪಾರಂಪರಿಕ ಸ್ಥಳಗಳಿಗೆ ಸಂಬಂಧಿಸಿದ ವಿಶೇಷ ಚಿತ್ರ ಪ್ರದರ್ಶನ

Update: 2024-04-18 14:53 GMT

ಮಂಗಳೂರು: ಜನರಲ್ಲಿ ವಿವಿಧ ದೇಶಗಳ ಪರಂಪರೆಯ ಕುರಿತು ಮಾಹಿತಿ ನೀಡುವುದು ವಿಶ್ವ ಪರಂಪರೆ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪಾರಂಪರಿಕ ಸ್ಥಳ ಮತ್ತು ವಸ್ತುಗಳ ರಕ್ಷಣೆ ಮತ್ತು ಜವಬ್ದಾರಿಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಇತಿಹಾಸ ಸಂಶೋಧಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ತಿಳಿಸಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಪಂರೆ ಇಲಾಖೆಯ ವತಿಯಿಂದ ಬಿಜೈಯ ಶ್ರೀಮಂತಿ ಬಾಯಿ ಸರಕಾರಿ ವಸ್ತು ಸಂಗ್ರಹಾಲಯದಲ್ಲಿ ವಿಶ್ವಪರಂಪರೆ ದಿನಾಚರಣೆಯ ಅಂಗವಾಗಿ ಗುರುವಾರ ನಡೆದ ಪಾರಂಪರಿಕ ಸ್ಥಳಗಳಿಗೆ ಸಂಬಂಧಿ ಸಿದ ವಿಶೇಷ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರತಿ ದೇಶದ ಪರಂಪರೆಯನ್ನು ಗೌರವಿಸುವುದರೊಂದಿಗೆ ಅದನ್ನು ತಿಳಿದುಕೊಂಡು ಅದರ ರಕ್ಷಣೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಅಗತ್ಯವಿದೆ. ನಾಶವಾಗುತ್ತಿರುವ ಸ್ಮಾರಕಗಳ ರಕ್ಷಣೆಯು ಇಂದಿನ ಅಗತ್ಯವಾಗಿದೆ ಎಂದು ಡಾ. ಪುಂಡಿಕಾಯಿ ಗಣಪಯ್ಯ ಭಟ್ ಹೇಳಿದರು.

ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಎಲ್ಲಾ ಧರ್ಮಗಳಿಗೆ ಸಂಬಂಧಿಸಿದಂತೆೆ ಸುಮಾರು ೪ ಸಾವಿರ ಪ್ರಾಚೀನ ಧಾರ್ಮಿಕ ಕೇಂದ್ರಗಳಿವೆ. ಅದನ್ನು ರಕ್ಷಿಸುವ ಜವಾಬ್ದಾರಿ ಆಯಾ ಪ್ರದೇಶದ ಜನರದ್ದಾಗಿರುತ್ತದೆ. ಯುನೆಸ್ಕೊ ದಾಖಲೆ ಪ್ರಕಾರ ೧೬೬ ದೇಶಗಳಲ್ಲಿ ಒಟ್ಟು ೧,೧೭೨ ವಿಶ್ವ ಪರಂಪರೆ ತಾಣಗಳಿದೆ. ಭಾರತದಲ್ಲಿ ೪೨ ವಿಶ್ವ ಪರಂಪರೆ ತಾಣಗಳಿವೆ. ಕರ್ನಾಟಕದಿಂದ ಕೇವಲ ೨ರಿಂದ ೩ ಸ್ಥಳಗಳು ಮಾತ್ರ ವಿಶ್ವ ಪರಂಪರೆ ಸ್ಥಳಗಳೆಂದು ದಾಖಲಾಗಿದೆ. ಅಭಿವೃದ್ದಿ ಹೆಸರಲ್ಲಿ ಜನರಿಗೆ ಅರಿವಿಲ್ಲದೆ ಅದೆಷ್ಟೊ ಹಳೆಕಾಲದ ಶಿಲಾ ಶಾಸನಗಳು, ಪ್ರಾರ್ಥನಾ ಕೇಂದ್ರಗಳು, ಸ್ಮಾರಕಗಳನ್ನು ಕರ್ನಾಟಕದಲ್ಲಿ ನಾಶ ಮಾಡಲಾಗಿದೆ ಎಂದು ಅವರು ಡಾ. ಪುಂಡಿಕಾಯಿ ಗಣಪಯ್ಯ ಭಟ್ ಮಾಹಿತಿ ನೀಡಿದರು.

ಈ ಸಂದರ್ಭ ಅಂಚೆ ಚೀಟಿ ಸಂಗ್ರಾಹಕಿ ವಿದ್ಯಾ ಬಗಲೋಡಿ, ಕಿಶೋರ್ ಬಗಲೋಡಿ, ಶ್ರೀಮಂತಿ ಬಾಯಿ ಸರಕಾರಿ ವಸ್ತು ಸಂಗ್ರಹಾಲಯದ ಮೇಲ್ವಿಚಾರಕಿ ಧನಲಕ್ಷ್ಮಿ ಅಮ್ಮಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News