ಕುಡುಪು ಜಮೀನಿನ ಟಿಡಿಆರ್ ಪ್ರಕರಣ: ಆರ್‌ಟಿಸಿಯಲ್ಲಿ ಹೆಸರಿಲ್ಲದವರಿಗೆ ಟಿಡಿಆರ್ ಶಿಫಾರಸ್ಸು!

Update: 2024-04-29 14:09 GMT

ಮಂಗಳೂರು ಮಹಾನಗರ ಪಾಲಿಕೆ 

ಮಂಗಳೂರು, ಎ. 29: ಕುಡುಪು ಗ್ರಾಮದ ಸರ್ವೆ ನಂಬ್ರ 57/Pರಲ್ಲಿರುವ 10.8 ಎಕರೆ ಜಮೀನು ಟಿ.ಡಿ.ಆರ್‌ನಡಿ ಖರೀದಿ ಪ್ರಸ್ತಾವ ಪ್ರಕರಣವು ಹೊಸ ಟ್ವಿಸ್ಟ್ ಪಡೆದುಕೊಂಡಿದೆ.

ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಘನತ್ಯಾಜ್ಯ ಘಟಕ ವಿಸ್ತರಣೆಗೆ ಅಗತ್ಯವಿರುವ ಈ ಜಮೀನನ್ನು ಟಿಡಿಆರ್ ನಿಯಮದಡಿ ಖರೀದಿಸಲು ಪ್ರಸ್ತಾವ ಸಲ್ಲಿಸಿರುವ ಉದ್ಯಮಿ ಆರ್‌ಟಿಸಿ ಪ್ರಕಾರ ಭೂ ಮಾಲಕನೇ ಅಲ್ಲ. ಆ ವ್ಯಕ್ತಿಗೆ ಟಿಡಿಆರ್/ ಡಿಆರ್‌ಸಿ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆ ಶಿಫಾರಸ್ಸು ಮಾಡಿರುವುದು ಯಾವ ಆಧಾರದಲ್ಲಿ ಎಂಬ ಬಗ್ಗೆ ಮಾಹಿತಿ ನೀಡಬೇಕೆಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರು ಪಾಲಿಕೆಗೆ ಪತ್ರ ಬರೆದಿದ್ದಾರೆ.

ಮಾತ್ರವಲ್ಲದೆ, ರಾಜ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೂ ಪತ್ರ ಬರೆದಿರುವ ಮುಡಾ ಆಯುಕ್ತರು, ಸಾರ್ವಜನಿಕ ಅಥವಾ ಅರೆ ಸಾರ್ವಜನಿಕ ಉದ್ದೇಶದಲ್ಲಿ ಬಾರದ ಘನತ್ಯಾಜ್ಯ ನಿರ್ವಹಣೆ ಘಟಕವನ್ನು ಕೃಷಿ ವಲಯಕ್ಕೊಳಪಡುವ ಜಮೀನಿನಲ್ಲಿ ನಿರ್ಮಿಸಲು ಅನುಮತಿ ನೀಡುವ ಬಗ್ಗೆ ನಿರ್ದೇಶನ ನೀಡುವಂತೆಯೂ ಕೋರಿಕೊಂಡಿದ್ದಾರೆ.

ಮುಡಾದ ನೂತನ ಆಯುಕ್ತರಾದ ನೂರ್ ಜಹಾನ್ ಅವರು ಎ. 22ರಂದು ಈ ಕುರಿತು ಪಾಲಿಕೆ ಹಾಗೂ ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿರುವ ಪತ್ರಗಳು ‘ವಾರ್ತಾಭಾರತಿ’ಗೆ ಲಭ್ಯವಾಗಿದೆ.

ಪಚ್ಚನಾಡಿ ಗ್ರಾಮದ ಸುತ್ತಮುತ್ತ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆ ಘಟಕವನ್ನು ಭವಿಷ್ಯದಲ್ಲಿ ವಿಸ್ತರಣೆ ಮಾಡಲು ಅಗತ್ಯವಾಗಿರುವ ಜಮೀನನ್ನು ಟಿಡಿಆರ್ ನಿಯಮದಡಿ ಪರಿತ್ಯಾಜನಾ ಪತ್ರ ಪರ್ಯಾಯ ವಾಗಿ ಡಿಆರ್‌ಸಿ/ಟಿಡಿಆರ್ ದೃಢಪತ್ರ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆಯಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಇದನ್ನು ಪರಿಶೀಲಿಸಲಾಗಿದ್ದು, ಪ್ರಸ್ತಾವದಲ್ಲಿ 7ನೆ ಭೂಮ ಮಾಲಕರಾದ ಕನ್ಸೆಂಟಿಂಗ್ ಪಾರ್ಟಿ ಗಿರಿಧರ್ ಶೆಟ್ಟಿ ಪ್ರಸ್ತುತ ಆರ್‌ಟಿಸಿ ಪ್ರಕಾರ ಭೂ ಮಾಲಕರಾಗಿರುವುದಿಲ್ಲ. ಆದರೆ ಅವರಿಗೆ ಡಿಆರ್‌ಸಿ ಯನ್ನು ನೀಡುವಂತೆ ಶಿಫಾರಸು ಮಾಡಿ ಸಲ್ಲಿಸಲಾಗಿದೆ. ಆದ್ದರಿಂದ ಭೂ ಮಾಲಕರ ಹೆಸರು ಆರ್‌ಟಿಸಿಯಲ್ಲಿ ಇಲ್ಲದಿದ್ದರೂ ಯಾವ ಆಧಾರದಲ್ಲಿ ಅವರಿಗೆ ಡಿಆರ್‌ಸಿ ನೀಡಲು ಶಿಫಾರಸು ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಭೂ ಮಾಲಕತ್ವವನ್ನು ದೃಢೀಕರಿಸುವ ಎಲ್ಲ ದಾಖಲೆಗಳನ್ನು ಸಲ್ಲಿಸಬೇಕು. ಮುಂದೆ ಡಿಆರ್‌ಸಿ ನೀಡಲು ಸಲ್ಲಿಸುವ ಎಲ್ಲಾ ಪ್ರಸ್ತಾವಗಳ ಜತೆ ಭೂ ಮಾಲಕತ್ವದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸುತ್ತಿರುವುದಾಗಿ ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಮುಡಾ ಆಯುಕ್ತರು ತಿಳಿಸಿದ್ದಾರೆ.

ಪಚ್ಚನಾಡಿಯ ಘನತ್ಯಾಜ್ಯ ಘಟಕವನ್ನು ವಿಸ್ತರಿಸಲು ಅಗತ್ಯವಾಗಿರುವ ಜಮೀನಿಗೆ ಟಿಡಿಆರ್ ನಿಯಮದಡಿ ದೃಢಪತ್ರ ಕೋರಲಾಗಿದ್ದು, ಕೆಟಿಸಿಪಿ ಕಾಯ್ದೆಯಡಿ ಸೀವೇಜ್ ಉದ್ದೇಶಕ್ಕೆ ಡಿಆರ್‌ಸಿ ನೀಡಲು ಅವಕಾಶ ಇದೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯು ಘನತ್ಯಾಜ್ಯ ನಿರ್ವಹಣೆ ಘಟಕವನ್ನು ವಿಸ್ತರಣೆ ಮಾಡಲು ಭೂಸ್ವಾಧೀನ ಪಡಿಸಲು ಜಮೀನಿನ ಮಾಲಕರಿಗೆ ಡಿಆರ್‌ಸಿ ನೀಡಲು ಮುಡಾಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದ ಕಾರಣ ಘನತ್ಯಾಜ್ಯ ನಿರ್ವಹಣೆಯನ್ನು ಕೆಟಿಸಿಪಿ ಕಾಯ್ದೆ ಕಲಂ 14ರ ಬಿಯಡಿ ಸಾರ್ವಜನಿಕ ಉದ್ದೇಶ ಎಂದು ಪರಿಗಣಿಸುವ ಬಗ್ಗೆ ಮಾರ್ಗದರ್ಶನ ಕೋರಲಾ ಗುತ್ತಿದೆ. ಪ್ರಸ್ತಾವನೆ ಸಲ್ಲಿಕೆಯಾದ ಜಮೀನು ಮಹಾಯೋಜನೆ (ಪ-2) ರಂತೆ ಕೃಷಿ ವಲಯದಲ್ಲಿದೆ. ಈ ವಲಯದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಜಿಲ್ಲೆಯ ವಲಯ ನಿಯಮಾ ವಳಿಗಳಂತೆ ಘನತ್ಯಾಜ್ಯ ನಿರ್ವಹಣೆ ಘಟಕವು ಸಾರ್ವಜನಿಕ ಮತ್ತು ಅರೆ ಸಾರ್ವಜನನಿಕ ಉದ್ದೇಶಕ್ಕೆ ಬಾರದೆ ಇರುವ ಕಾರಣ ಈ ಘಟಕವನ್ನು ಕೃಷಿ ವಲಯದಲ್ಲಿ ನಿರ್ಮಿಸಲು ಅನುಮತಿ ನೀಡುವ ಕುರಿತು ನಿರ್ದೇಶನ ನೀಡಬೇಕೆಂದು ನೂತನ ಮುಡಾ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಈ ಪತ್ರಗಳು, ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ಜಮೀನು ಟಿ.ಡಿ.ಆರ್ ನಡಿ ಪಡೆಯಲು ಮುಂದಾಗಿರುವಲ್ಲಿ ಭಾರೀ ದಂಧೆಯ ಅನುಮಾನವಿದೆ ಎಂಬ ಸಾರ್ವಜನಿಕ ವಲಯದ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

ಈ ಜಮೀನಿನ ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿ ಮುಡಾದ ಹಿಂದಿನ ಆಯುಕ್ತ ಮನ್ಸೂರ್ ಅಲಿ ಅವರನ್ನು ಲಂಚ ಪಡೆದ ಆರೋಪದಲ್ಲಿ ಬಂಧಿಸಲಾಗಿ, ಲೋಕಾಯುಕ್ತ ಪ್ರಕರಣವೂ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭೂ ದಂಧೆಯ ಅನುಮಾನ ವಿದ್ದು, ಟಿಡಿಆರ್‌ನಡಿ ಭೂಮಿ ಖರೀದಿಸುವ ಪಾಲಿಕೆಯ ಒಪ್ಪಂದ ರದ್ದುಗೊಳಿಸಿ ಹಗರಣದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಪಿಎಂ ಮಂಗಳೂರು ನಗರ ಘಟಕದಿಂದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೂ ಮನವಿಯನ್ನೂ ಸಲ್ಲಿಸಲಾಗಿತ್ತು.

ಈ ಉದ್ದೇಶಿತ ಜಮೀನಿನ ಟಿಡಿಆರ್ ಅನುಮತಿ ನೀಡಲು 25 ಲಕ್ಷ ರೂ. ಮೊತ್ತದ ಲಂಚ ಬೇಡಿಕೆ ಇಟ್ಟ ಆರೋಪದಲ್ಲಿ ಮುಡ ಆಯುಕ್ತರ ಬಂಧನದ ಕುರಿತಾದ ಪ್ರಕರಣ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆ ಆಗಬೇಕು. ಹಾಗೂ 10 ಎಕರೆ ನಿರುಪಯೋಗಿ ಜಮೀನಿಗೆ ಹತ್ತಾರು ಕೋಟಿ ರೂ. ಮೌಲ್ಯದ ಟಿ.ಡಿ.ಆರ್. ನೀಡಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿರುವ ಕುರಿತಂತೆಯೂ ತನಿಖೆ ನಡೆಯಬೇಕು. ನಗರ ಪಾಲಿಕೆಯಲ್ಲಿ ಬಿಜೆಪಿ ಶಾಸಕರು ಅಧಿಕಾರ ಹಿಡಿದ ನಂತರ ಟಿಡಿಆರ್ ನೀಡುವ ಮೂಲಕ ಜಮೀನು ಖರೀದಿ ಎಂಬುದು ದಂಧೆಯ ಸ್ವರೂಪ ಪಡೆದಿದೆ ಎಂದು ಮುನೀರ್ ಕಾಟಿಪಳ್ಳ ಅವರು ಆರೋಪಿಸಿ ಪ್ರಕಟನೆಯನ್ನೂ ನೀಡಿದ್ದರು.

"ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ಜಮೀನು ಟಿ.ಡಿ.ಆರ್‌ನಡಿ ಖರೀದಿಸುವ ಪ್ರಕರಣಕ್ಕೆ ಸಂಬಂಧಿಸಿ ಮುಡಾದ ನೂತನ ಆಯುಕ್ತರು ಪಾಲಿಕೆಗೆ ಭೂಮಿಯ ಮೂಲ ಮಾಲಕನೇ ಅಲ್ಲದವರಿಗೆ ಟಿಡಿಆರ್ ನೀಡಲು ಶಿಫಾರಸು ಮಾಡಿರುವುದನ್ನು ಪ್ರಶ್ನಿಸಿರುವುದು ಸದ್ಯ ನಮ್ಮ ಹೋರಾಟಕ್ಕೆ ಆಂಶಿಕ ಜಯ ದೊರಕಿದಂತಾಗಿದೆ. ಈ ಪ್ರಕರಣದಲ್ಲಿ ಟಿ.ಡಿ.ಆರ್ ನೀಡುವ ಒಪ್ಪಂದಕ್ಕೆ ಸಂಬಂಧಿಸಿ ನಗರ ಪಾಲಿಕೆಯಿಂದ ನಿಯಮಗಳ ಉಲ್ಲಂಘನೆ ಆಗಿರುವ ಕುರಿತು ನಗರ ಪಾಲಿಕೆಗೆ ಹಾಗೂ ನಿಯಮ ಉಲ್ಲಂಘಿಸಿರುವ ಫೈಲ್ ಕ್ಲಿಯರ್ ಮಾಡಲು ತಾಂತ್ರಿಕ ಸಮಸ್ಯೆ ಇರುವ ಕುರಿತು ರಾಜ್ಯ ಸರಕಾರಕ್ಕೆ ಮುಡಾ ಆಯುಕ್ತರು ಪತ್ರ ಬರೆದಿರುವುದು ಈ ಪ್ರಕರಣದಲ್ಲಿ ಭ್ರಷ್ಟಾಚಾರ, ನಗರ ದಕ್ಷಿಣದ ಬಿಜೆಪಿ ಶಾಸಕರ ಕೂಟದಿಂದ ರಾಜಕೀಯ ಪ್ರಭಾವದ ದುರ್ಬಳಕೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರಕಾರ ಈ ಟಿಡಿಆರ್ ಒಪ್ಪಂದವನ್ನು ತಕ್ಷಣದಿಂದಲೆ ರದ್ದುಗೊಳಿಸು ವಂತೆ ನಗರ ಪಾಲಿಕೆಗೆ ಆದೇಶಿಸಬೇಕು. ಇದು ಹತ್ತಾರು ಕೋಟಿ ರೂಪಾಯಿಗಳ ಹಗರಣ ಆಗಿರುವುದರಿಂದ ಟಿಡಿಆರ್ ಫೈಲ್ ಕ್ಲಿಯರ್ ವಿಚಾರದಲ್ಲಿ ಮುಡಾ ಆಯುಕ್ತರಾಗಿದ್ದ ಮನ್ಸೂರ್ ಅವರನ್ನು ಸಹಿ ಹಾಕಲು ಲಂಚ ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಪಡಿಸಿರುವುದು ರಾಜಕೀಯ ಬಲದ ಪಿತೂರಿಯಂತೆ ಕಾಣುತ್ತದೆ. ಆಯ್ತುಕರು ಲಂಚ ಪಡೆದ ಪ್ರಕರಣವನ್ನೂ ರಾಜ್ಯ ಸರಕಾರ ಸಮಗ್ರ ತನಿಖೆಗೆ ಒಳಪಡಿಸುವ ಅಗತ್ಯವಿದೆ".

-ಮುನೀರ್ ಕಾಟಿಪಳ್ಳ, ಮುಖಂಡರು, ಸಿಪಿಎಂ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News