ಶಿಕ್ಷಣ ಸಂಸ್ಥೆಗಳು ಬದುಕು ರೂಪಿಸುವ ಕೇಂದ್ರ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

Update: 2024-04-29 17:30 GMT

ಕೊಣಾಜೆ: ವಿದ್ಯಾಕೇಂದ್ರಗಳು ವಿದ್ಯಾರ್ಥಿಗಳನ್ನು ಹೊರ ತರುವ ಕಾರ್ಖಾನೆಗಳಾಗದೆ ವಿದ್ಯಾರ್ಥಿಗಳ ಬದುಕನ್ನು ರೂಪಿ ಸುವ ಕೇಂದ್ರಗಳಾಗಬೇಕು. ಮುಡಿಪುವಿನ ನವೋದಯ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಬದುಕಿಗೆ ಪ್ರೇರ ಪಣೆ ಒದಗಿಸುವ ಶೈಕ್ಷಣಿಕ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾಧಿಕಾರಿ‌ ಮುಲ್ಲೈ ಮುಗಿಲನ್ ಅವರು ಹೇಳಿದರು.

ಅವರು‌ ಮುಡಿಪುವಿನ ಜವಹಾರ್ ನವೋದಯ ಕೇಂದ್ರೀಯ ವಿದ್ಯಾಲಯ ಇದರ 23 ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕೇವಲ ಹಣ ಗಳಿಕೆ, ಐಷರಾಮಿ ಬದುಕಿನಿಂದ ಮಾತ್ರ ಜೀವನದಲ್ಲಿ ಯಶಸ್ಸನ್ನು ‌ಪಡೆಯಲು ಸಾಧ್ಯವಿಲ್ಲ. ಉದ್ದೇಶಿತ ಗುರಿಯೊಂದಿಗೆ ಪರಿಶ್ರಮದೊಂದಿಗೆ ಮುನ್ನಡೆದು ನೆಮ್ಮದಿ, ಸಂತೋಷ ಹಾಗೂ ಸಂತೃಪ್ತ ಜೀವನ ನಮ್ಮದಾದರೆ ಅದುವೇ ಬದುಕಿನ ನಿಜವಾದ ಯಶಸ್ಸು ಎಂದು ಹೇಳಿದರು.

ಜವಹಾರ್ ನವೋದಯ ವಿದ್ಯಾಲಯದ ಹೈದಾರಬಾದ್ ವಲಯದ ಡೆಪ್ಯೂಟಿ ಕಮಿಷನರ್ ಗೋಪಾಲಕೃಷ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳೆಂದರೆ ಕೇವಲ ಓದು ಮಾತ್ರವಲ್ಲ. ಅದರೊಂದಿಗೆ ಕ್ರೀಡೆ,‌ ಸಾಂಸ್ಕೃತಿಕ ರಂಗ, ಎನ್ ಸಿಸಿ ಸೇರಿದಂತೆ ಅವರ ಬದುಕಿಗೆ ಪೂರಕವಾಗುವ ಚಟುವಟಿಕೆ ಗಳಲ್ಲಿಯೂ ತೊಡಗಿಸಿಕೊಳ್ಳುವಂತಾಗಬೇಕು. ನವೋದಯ ವಿದ್ಯಾಲಯದಲ್ಲಿ ಇಂತಹ ಅವಕಾಶಗಳಿದ್ದು, ರಾಷ್ಟ್ರಮಟ್ಟದಲ್ಲಿ ಇಂದು ನವೋದಯ ವಿದ್ಯಾಲಯವು ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಎಂಸಿ ಸದಸ್ಯರಾದ ಪ್ರೊ.ಜಗದೀಶ್ ಪ್ರಸಾದ್ ಹಾಗೂ ಕೃಷ್ಣಪ್ರಸಾದ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪ್ರಾಂಶುಪಾಲರಾದ ಪಿ.ರಾಜೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮುಡಿಪುವಿನ ಜವಾಹಾರ್ ನವೋದಯ ವಿದ್ಯಾಲಯವು ನಿಮ್ಮೆಲ್ಲರ‌ ಸಹಕಾರದಿಂದ ಶೈಕ್ಷಣಿಕವಾಗಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಫ್ವೈ ಸ್ಟಾರ್ ವಿದ್ಯಾಲಯವಾಗಿ ರೂಪುಗೊಂಡಿದೆ ಎಂದು ಹೇಳಿದರು.

ಉಪಪ್ರಾಂಶುಪಾಲರಾದ ರೇಖಾ ಅಶೋಕ್ ಅವರು ಸ್ವಾಗತಿಸಿದರು. ಕೆ.ಪಿ.ರಾಘವನ್ ವಂದಿಸಿದರು. ಬಳಿಕ ವಿದ್ಯಾರ್ಥಿ ಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ವಿದ್ಯಾರ್ಥಿಗಳೊಂದಿಗೆ ಸಂವಾದ

ನವೋದಯ ವಿದ್ಯಾಲಯದ‌ ಸಾಧನೆಯನ್ನು ನೋಡಿ ಶಾಲಾ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಅಭಿನಂದಿಸಿದ ಜಿಲ್ಲಾಧಿಕಾರಿ ಯವರು ಸಭಾ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪರಿಶ್ರಮ ಮತ್ತು ಯಶಸ್ಸು ಜೀವನದ ಬಗ್ಗೆ ಕಿವಿಮಾತು ಹೇಳಿದರು.

ಚೆಂಡೆ ನುಡಿಸಿ ಸಂಭ್ರಮ

ಜಿಲ್ಲಾಧಿಕಾರಿ ಅವರು ಯಕ್ಷಗಾನ, ಚೆಂಡೆ ವಾದನನಸೇರಿದಂತೆ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಕಾರ್ಯಕ್ರಮದ ಸ್ಥಳಕ್ಕೆ ಬರುತ್ತಿದ್ದ ವೇಳೆ ಕುತೂಹಲದಿಂದ ವಿದ್ಯಾರ್ಥಿಯೋರ್ವನಿಂದ ಚೆಂಡೆ ತೆಗೆದುಕೊಂಡು ಅವರೊಂದಿಗೆ ತಾನೂ ಚೆಂಡೆ ನುಡಿಸಿ ಸಂಭ್ರಮಿಸಿ ಸಂತಸಪಟ್ಟರು.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News