ಪ್ರೀತಿ - ಸ್ನೇಹದಿಂದ ಜಗತ್ತನ್ನು ಗೆಲ್ಲೋಣ: ಡಾ. ಬೋಬಿ ಚೆಮ್ಮನ್ನೂರ್

Update: 2024-05-04 17:40 GMT

ಮಂಗಳೂರು, ಮೇ 4: ಜಗತ್ತಿನಾದ್ಯಂತ ಬೇರೆ ಬೇರೆ ಕಾರಣಕ್ಕೆ ಯುದ್ಧ, ಬಾಂಬ್ ಸ್ಫೋಟ, ಸಾಮೂಹಿಕ ಹತ್ಯೆ ಇತ್ಯಾದಿ ನಡೆಯುತ್ತಿದೆ. ಅದರೆ ಇದರಿಂದ ನಾವೇನು ಗಳಿಸಿದ್ದೇವೆ ಎಂಬ ಅರಿವು ನಮಗೆ ಯಾರಿಗೂ ಇರುವುದಿಲ್ಲ. ಪ್ರತಿಯೊಬ್ಬರೂ ನೆಮ್ಮದಿಯಿಂದ ಬಾಳಬೇಕಾದರೆ ನಾವೆಲ್ಲಾ ಸ್ನೇಹದ ಹಸ್ತ ಚಾಚಬೇಕು. ಹಾಗಾಗಿ ನಾವು ಸ್ನೇಹ-ಪ್ರೀತಿಯಿಂದ ಜಗತ್ತನ್ನು ಗೆಲ್ಲೋಣ ಎಂದು ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ ಡಾ. ಬೋಬಿ ಚೆಮ್ಮನ್ನೂರು ಹೇಳಿದರು.


ಟೀಂ‌ ಬಿ ಹ್ಯೂಮನ್ ವತಿಯಿಂದ ಸೋಮೇಶ್ವರ ಉಚ್ಚಿಲದ ಕಿಯಾಂಝ ಗಾರ್ಡನ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಂಗಳೂರು ಬಗ್ಗೆ ನನಗೆ ಕೆಟ್ಟ ಅಭಿಪ್ರಾಯವಿತ್ತು. ಹಾಗಾಗಿ ಇಲ್ಲಿನ ಕೆಲವರು ನನ್ನನ್ನು ಆಹ್ವಾನಿಸಿದರೂ ಬರಲು ಮನಸ್ಸು ಮಾಡಿರಲಿಲ್ಲ. ಅದರೆ, ಟೀಂ-ಬಿ ಹ್ಯೂಮನ್‌ನ ಸಮಾಜ ಸೇವೆಯ ವೀಡಿಯೋ ವೀಕ್ಷಿಸಿದ ಬಳಿಕ ಮಂಗಳೂರಿಗರ ಬಗ್ಗೆ ನನಗಿದ್ದ ಕೆಟ್ಟ ಕಲ್ಪನೆ ದೂರವಾಗಿದೆ. ನನ್ನ ಅಭಿಮಾನಿಗಳನ್ನು ಒಳಗೊಂಡ ಚಾರಿಟೇಬಲ್ ಟ್ರಸ್ಟ್ ಮೂಲಕ ಈ ಭಾಗದ ಜನರ ಸಂಕಷ್ಟಕ್ಕೆ ನೆರವಾಗುವೆ ಎಂದು ಡಾ. ಬೋಬಿ ಚೆಮ್ಮನ್ನೂರು ಭರವಸೆ ನೀಡಿದರು.


ಒಂದು ಕಾಲದಲ್ಲಿ ನಾನು ಶೋಕಿವಾಲನಾಗಿದ್ದೆ. ನನ್ನ‌ ಮನಪರಿವರ್ತನೆ ಆದ ಬಳಿಕ ಜಗತ್ತನ್ನು ಪ್ರೀತಿಸಲು, ಸ್ನೇಹಿಸಲು ಕಲಿತೆ. ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕೇರಳದ ಯುವಕ ಅಬ್ದುಲ್ ರಹೀಂನ ಬಿಡುಗಡೆಗೆ ಸ್ವತಃ ತಾನು ಒಂದು ಕೋಟಿ ರೂ. ಸಹಾಯಧನ ನೀಡಿದ್ದಲ್ಲದೆ ಭಿಕ್ಷಾಟನೆಯ ಮೂಲಕ ಕ್ರೌಡ್ ಫಂಡಿಂಗ್ ಸಂಗ್ರಹಿಸಿದೆ. ಜೀವಮಾನದಲ್ಲಿ ಕ್ರೈಸ್ತೇತರರಿಗೆ ಒಂದು ರೂ. ನೀಡದ ನನ್ನ ಅಮ್ಮ ಕೂಡ ಒಂದು ಲಕ್ಷ ರೂ. ನೀಡಿ ಪ್ರೋತ್ಸಾಹಿಸಿದರು. ನನ್ನ ಗುರಿ ಸಾಧಿಸಲು ಅನೇಕ ಮಂದಿ ಸಹಾಯ ಮಾಡಿದ್ದಾರೆ. ಅವರಿಗೆಲ್ಲಾ ನಾನು ಅಭಾರಿಯಾಗಿರುವೆ ಎಂದರು‌.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮಾನವೀಯತೆಗೆ ಕೇರಳವು ದೇಶಕ್ಕೆ ಮಾದರಿಯಾಗಿದೆ. ಕೇರಳವನ್ನು ವಿಕೃತವಾಗಿ ಕೆಲವರು ಚಿತ್ರೀಕರಿಸಿದ್ದರೂ ಕೂಡ ನಿಜವಾದ ಕೇರಳ ಸ್ಟೋರಿಯನ್ನು ಬೋಚೆ ಎಂದೇ ಮನೆ ಮಾತಾಗಿರುವ ಡಾ. ಬೋಬಿ ಚೆಮ್ಮನ್ನೂರು ಸೃಷ್ಟಿಸಿದ್ದಾರೆ. ಇಂತಹ ಸಮಾಜ ಸೇವಕರನ್ನು ಟೀಂ ಬಿ ಹ್ಯೂಮನ್ ಗೌರವಿಸಿರುವುದು ಶ್ಲಾಘನೀಯ ಎಂದರು. ರಾಜ್ಯ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ವೀಡಿಯೋ ಸಂದೇಶದ ಮೂಲಕ ಶುಭ ಹಾರೈಸಿದರು.


‘ಟೀಂ ಬಿ-ಹ್ಯೂಮನ್’ನ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಪಸ್ಯ ಫೌಂಡೇಶನ್‌ನ ಸ್ಥಾಪಕ ಆಡಳಿತ ಟ್ರಸ್ಟಿ ಸಬಿತಾ ಶೆಟ್ಟಿ ಮತ್ತು ಪುತ್ತೂರಿನ ಸಿಆರ್‌ಡಿಎಫ್ ಪ್ರಧಾನ ಕಾರ್ಯದರ್ಶಿ ಹನೀಫ್ ಪುತ್ತೂರು ಅವರನ್ನೂ ಸನ್ಮಾನಿಸಲಾಯಿತು.


ಮುಖ್ಯ ಅತಿಥಿಯಾಗಿ ಅಲ್ ಮುಝೈನ್ ಗ್ರೂಪ್‌ನ ಆಡಳಿತ ನಿರ್ದೇಶಕ ಝಕರಿಯಾ ಜೋಕಟ್ಟೆ, ವೈಟ್‌ಸ್ಟೋನ್‌ನ ಆಡಳಿತ ನಿರ್ದೇಶಕ ಶರೀಫ್ ಬೋಳಾರ, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಎಎನ್‌ಐ ಟ್ರೇಡಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಅಬ್ದುಲ್ ಲತೀಫ್ ಗುರುಪುರ, ಟೀಂ-ಬಿ ಹ್ಯೂಮನ್‌ನ ಟ್ರಸ್ಟಿ ಅಡ್ವಕೇಟ್ ಮುಝಫರ್ ಅಹ್ಮದ್, ಖತರ್‌ನ ಯೂರೋ ಗ್ರೂಪ್‌ನ ಆಡಳಿತ ನಿರ್ದೇಶಕ ಅಬ್ದುಲ್ಲಾ ಮೋನು, ಡೀಲ್ಸ್ ಗ್ರೂಪ್‌ನ ಕೆ.ಎ.ಬಾವ, ಕಾಸರಗೋಡಿನ ಅಭಯಂ ಡಯಾಲಿಸಿಸ್ ಸೆಂಟರ್‌ನ ಟ್ರಸ್ಟಿ ಖಯ್ಯೂಮ್ ಮಾನ್ಯ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಎ.ಕೆ.ಜಮಾಲ್, ಸಮೀರ್ ಕಾಸರಗೋಡು, ನವೀನ್ ಹೆಗ್ಡೆ ಭಾಗವಹಿಸಿದ್ದರು. ಟೀಂ ಬಿ ಹ್ಯೂಮನ್‌ನ ಮಂಗಳೂರು ಘಟಕದ ಅಧ್ಯಕ್ಷ ಸಿರಾಜ್ ಸ್ವಾಗತಿಸಿದರು. ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ಮತ್ತು ಹೋಪ್ ಫೌಂಡೇಶನ್‌ನ ಸ್ಥಾಪಕ ಸೈಫ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.


































 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News