ಸುರತ್ಕಲ್| ಅಂತರ್ಜಲವನ್ನು ಬಸಿದು ಕೈಗಾರಿಕೆಗಳಿಗೆ ಮಾರಾಟ ಮಾಡುವ ಕರಾಳ ದಂಧೆ ನಡೆಯುತ್ತಿದೆ: ಗ್ರಾಮಸ್ಥರ ಆರೋಪ

Update: 2024-05-04 18:18 GMT

ಸುರತ್ಕಲ್: ಭೂಮಿ ತಾಯಿಯ ಒಡಲಲ್ಲಿರುವ ಅಂತರ್ಜಲವನ್ನು ಬಸಿದು ಕೈಗಾರಿಕೆಗಳಿಗೆ ಮಾರಾಟ ಮಾಡುವ ಕರಾಳ ದಂಧೆಯ ಕುರಿತು ಮಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಿದ್ದರೂ ಪಾಲಿಕೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ದಂಧೆಕೋರರು ಯಾವುದೇ ಅಂಜಿಕೆ ಇಲ್ಲದೆ ಅಕ್ರಮ ದಂಧೆ ನಡೆಸುತ್ತಲೇ ಇದ್ದಾರೆ ಎಂದು ಸುರತ್ಕಲ್‌ ಇಡ್ಯಾ ಗ್ರಾಮದ ಕಬ್ಬಿನಹಿತ್ಲು ಮತ್ತು ಸುಭಾಷಿತ ನಗರದ ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಸಂಬಂಧ ಗ್ರಾಮಸ್ಥರು ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್‌ ವಲಯ ಕಚೇರಿಗೆ ದೂರು ನೀಡಿದ್ದಾರೆ. ಆದರೆ, ಈ ವರೆಗೂ ದಂಧೆಕೋರರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ದೂರು ನೀಡಿ ತಿಂಗಳು ಕಳೆದರೂ ಈಗಲೂ ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇಡ್ಯಾ ಗ್ರಾಮದ ಕಬ್ಬಿನ ಹಿತ್ಲು ಪರಿಸರದ ಸೀತಾ ಸದನ ಕಟ್ಟಡದ ಆವರಣದೊಳಗಿನ ಬಾವಿಯ ನೀರನ್ನು ದೊಡ್ಡ ದೊಡ್ಡ ಟ್ಯಾಂಕರ್ ಗಳಲ್ಲಿ ಹಗಲು - ರಾತ್ರಿ ನಿರಂತರವಾಗಿ ಸಾಗಿಸಿ ಗೃಹೋಪಯೋಗದ ಹೊರತು ಅನ್ಯ ಉದ್ದೇಶಗಳಿಗೆ ಉಪಯೋಗ ಮಾಡುತ್ತಿದ್ದು, ನಿರಂತರವಾಗಿ ಸಾಗಿಸುತ್ತಿರುವುದರಿಂದ ಕಬ್ಬಿನಹಿತ್ಲು ಮತ್ತು ಸುಭಾಷಿತನಗರದ ಸುತ್ತಮುತ್ತಲಿನ ಪರಿಸರದ ಕುಡಿಯುವ ನೀರಿನ ಬಾವಿಯ ಬತ್ತಿಹೋಗಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಕಳೆದ ಶನಿವಾರ ತಮ್ಮ ಇಲಾಖೆಗೆ ಮೌಖಿಕವಾಗಿ ನಗರಪಾಲಿಕೆ ಮತ್ತು ಸಂಬಂಧಪಟ್ಟ ನಗರ ಪಾಲಿಕಾ ಸದಸ್ಯರ ಗಮನಕ್ಕೆ ತಂದಿದ್ದೇವೆ. ಆದಾಗ್ಯೂ ಈಗಲೂ ನೀರಿನ ಸರಬರಾಜು ನಿರಂತರವಾಗಿ ಸಾಗಿಸುತ್ತಿರುವು‌ ದರಿಂದ ಮುಂದಿನ ದಿನಗಳಲ್ಲಿ ಬಾವಿಗಳ ಜಿಲಮಟ್ಟ ಇನ್ನಷ್ಟು ಕುಗ್ಗಿ ಪರಿಸರದ ನಿವಾಸಿಗಳಿಗೆ ಕುಡಿಯುವ ನೀರಿನ ಅಭಾವವಾಗುವ ಸ್ಥಿತಿಯುಂಟಾಗುವ ಸಾಧ್ಯತೆ ಇದೆ. ಅಲ್ಲದೆ, ನೀರಿನ ಸರಬರಾಜಿನಲ್ಲಿ ಹಲವು ಆಡಚಣೆ ಇರುವುದರಿಂದ ತಾವು ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಮಹಾನಗರ ಪಾಲಿಕೆಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

ಕಾನೂನು ಪ್ರಕಾರ ಕೈಗಾರಿಕೆಗಳಿಗೆ ಅಂತರ್ಜಲ ಕುಡಿಯುವ ನೀರು ಬಳಸುವಂತಿಲ್ಲ. ಆದರೆ, ಕೈಗಾರಿಕೆಗಳಿಗೆ ನೀರು ಬೇಕಾಗಿದ್ದಲ್ಲಿ ಸಂಸ್ಥೆಗಳು ತನ್ನದೇ ಸ್ವಂತ ಡ್ಯಾಂಗಳನ್ನು‌ ನಿರ್ಮಿಸಿಕೊಳ್ಳಬೇಕು ಅಥವಾ ಸಮುದ್ರದ ನೀರನ್ನು ಬಳಸಿ ಕೊಂಡು ತನ್ನ ನೀರಿನ ಪೂರೈಕೆ ಮಾಡಿಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ. ಇಲ್ಲಿನ ಎಂಆರ್ ಪಿಎಲ್, ಎಚ್ ಪಿಸಿಎಲ್ ನಂತಹಾ ಕೈಗಾರಿಕೆಗಳಿಗಾಗಿಯೇ ನೇತ್ರಾವತಿಗೆ ಪ್ರತ್ಯೇಕ ಅಣೆಕಟ್ಟು ಕಟ್ಟಲಾಗಿದೆ. ಕಂಪೆನಿಯ ಆವರಣದಲ್ಲೇ ಸಾಕಾಗುವಷ್ಟು ಬೋರ್ ವೆಲ್, ಬಾವಿಗಳನ್ನು ಕೊರೆಸಲು ಅನುಮತಿಯನ್ನೂ ನೀಡಲಾಗಿದೆ. ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಬದಲಾಯಿಸುವ ಘಟಕವೂ ಇದೆ. ಆದರೂ ಕಂಪೆನಿಯವರು ಎಚ್ ಪಿಸಿಎಲ್ ನ ಸ್ಥಳೀಯ ನೌಕರನೊಬ್ಬನ ಮಧ್ಯಸ್ಥಿಕೆಯಲ್ಲಿ ಅಂತರ್ಜಲವನ್ನೇ ಕದ್ದು ಬಳಸಿಕೊಳ್ಳುತ್ತಿದ್ದಾರೆ. ಪ್ರತೀ ದಿನ ಸರಾಸರಿ 50 ಲಕ್ಷ ಲೀಟರ್ ನಷ್ಟು ಕುಡಿಯುವ ನೀರನ್ನು ಅಕ್ರಮವಾಗಿ ಬಸಿದು, 12 ಚಕ್ರದ ಟ್ಯಾಂಕರ್ ಗಳ ಮೂಲಕ ಎಚ್ ಪಿಸಿಎಲ್ ಘಟಕದ ಒಳಗಡೆ ಸಂಗ್ರಹಿಸಲಾಗು ತ್ತಿದೆ‌ ಎಂಬ ಆರೋಪವೂ ಇದೆ.

"ಜನ ವಸತಿ ಪ್ರದೇಶದಿಂದ ಕೈಗಾರಿಕೆಗಳಿಗೆ ನೀರು ಪೂರೈಸಲು ಅವಕಾಶವಿರುವುದಿಲ್ಲ. ಬೇಸಿಗೆ ಸಮಯದಲ್ಲಿ ವಾಹನ ತೊಳೆಯುವ ಸರ್ವಿಸ್‌ ಸೆಂಟರ್ಗಳಿಗೂ ನೀರು ಪೂರೈಕೆಗೆ ನಿರ್ಬಂಧ ಇರುವಾಗ ಬೃಹತ್‌ ಟ್ಯಾಂಕರ್‌ ಗಳ ಮೂಲಕ ಎಂಆರ್ಪಿಎಲ್‌ ಎಚ್‌ ಪಿಸಿಎಲ್‌ ಗಳಿಗೆ ನೀರು ಪೂರೈಕಿ ಮಾಡುತ್ತಿರುವುದು ಕಾನೂನಿನ ಸಂಪೂರ್ಣ ಉಲ್ಲಂಘನೆಯೇ ಸರಿ. ಈ ದಂಧೆಯು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಲೇ ನಡೆಯು ತ್ತಿದೆ. ಈ ಕುರಿತು ಸಂಬಂಧ ಪಟ್ಟ ಇಲಾಖೆ ಮತ್ತು ಜನ ಪ್ರತಿನಿಧಿಗಳು ಶೀಘ್ರ ಕ್ರಮ ವಹಿಸಿ ಅಕ್ರಮ ದಂಧೆ ನಿಲ್ಲಸದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಬೃಹತ್‌ ಮಟ್ಟದ ಪ್ರತಿಭಟನೆ ನಡೆಸಲಾಗುವುದು".

-ಮುನೀರ್‌ ಕಾಟಿಪಳ್ಳ, ಹೋರಾಟಗಾರ

ಸುರತ್ಕಲ್‌ ಇಡ್ಯಾ ಗ್ರಾಮದ ಕಬ್ಬಿನಹಿತ್ಲು ಮತ್ತು ಸುಭಾಷಿತ ನಗರದ ಗ್ರಾಮಸ್ಥರ ಆರೋಪ ಮತ್ತು ಗ್ರಾಮಸ್ತರು ದೂರು ನೀಡಿದ್ದರೂ ಮಹಾನಗರ ಪಾಲಿಕೆ ಕ್ರಮ ವಹಿಸದಿರುವ ಕುರಿತು ಮನಪಾ ಮೇಯರ್‌ ಸುದೀರ್‌ ಶೆಟ್ಟಿ ಕಣ್ಣೂರು ಅವರನ್ನು ʼವಾರ್ತಾಭಾರತಿʼ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಚುನಾವಣಾ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಾಗುವುದಿಲ್ಲ. ಈ ಕುರಿತು ಮನಪಾ ಆಯುಕ್ತರನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ. ಮಹಾನಗರ ಪಾಲಿಕೆ ಉಪಾಯುಕ್ತ ಆನಂದ್‌ ಕುಮಾರ್‌ ಅವರನ್ನು ʼವಾರ್ತಾಭಾರತಿʼ ಹಲವು ಬಾರಿ ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸದರೂ ಅವರು ಕರೆ ಸ್ವೀಕರಿಸಿಲ್ಲ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News