ಸಾಣೂರು| ಅಡ್ಡರಸ್ತೆ ತಿರುವಿನಲ್ಲಿ ಅಪಾಯಕಾರಿ ಜಲ್ಲಿ ಕಲ್ಲುಗಳು: ವಾಹನ ಚಾಲಕರಲ್ಲಿ ಆತಂಕ

Update: 2024-05-05 16:47 GMT

ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರು ಶ್ರೀರಾಮ ಮಂದಿರದ ಪಕ್ಕದಲ್ಲಿ ಚಿಕ್ಕಬೆಟ್ಟು ಗುರುಬೆಟ್ಟುಗೆ ಹೋಗುವ ಅಡ್ಡರಸ್ತೆಯ ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದಾರಿಯುವುದಕ್ಕೂ ರಸ್ತೆ ಕಾಮಗಾರಿಗಾಗಿ ಹಾಕಿದ ಸಣ್ಣ ಜಲ್ಲಿಕಲ್ಲುಗಳು ಚದುರಿ ಹೋಗಿದ್ದು, ದ್ವಿಚಕ್ರ ವಾಹನ ಚಾಲಕರು ಜಲ್ಲಿ ಕಲ್ಲುಗಳ ಮೇಲೆ ಸಾಗುವಾಗ ಆಯತಪ್ಪಿ ಬೀಳುವ ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿದೆ.

ಘನ ವಾಹನಗಳು ಚಲಿಸುವಾಗ ಜಲ್ಲಿ ಕಲ್ಲುಗಳು ಇತರ ವಾಹನಗಳು, ಸಾರ್ವಜನಿಕರ ಮೇಲೇ ಹಾರುತಿದ್ದು ಕೆಲವರಿಗೆ ಗಾಯಗಳಾದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಅಡ್ಡರಸ್ತೆಯಲ್ಲಿ ಕೇವಲ 50 ಮೀಟರ್ ಸಾಗಿದಾಗ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ 50ಕ್ಕಿಂತಲೂ ಹೆಚ್ಚಿನ ಹೈನುಗಾರರು ತಮ್ಮ ದ್ವಿಚಕ್ರ ವಾಹನದಲ್ಲಿ ಹಾಲಿನ ಕ್ಯಾನ್ ಇಟ್ಟು ವಾಹನ ಚಲಾಯಿಸುತ್ತಿದ್ದು, ಜಲ್ಲಿ ಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಚಲಾಯಿಸುವಾಗ ಹಾಲಿನ ಕ್ಯಾನ್ ಬಿದ್ದು ಹೋಗುವ ಅಪಾಯ, ಹಾಗೆಯೇ ಚಲಿಸಿದರೆ ದ್ವಿಚಕ್ರವಾಹನ ಆಯತಪ್ಪಿ ಬೀಳುವ ಅಪಾಯ ಎದುರಾಗಿದೆ. ಕಳೆದ ಒಂದು ವಾರದಿಂದ ಹಲವಾರು ದ್ವಿಚಕ್ರ ವಾಹನಗಳು ಅಡ್ಡರಸ್ತೆಯ ತಿರುವಿನಲ್ಲಿ ಮುಖ್ಯರಸ್ತೆ ಸಂಪರ್ಕಿಸುವಾಗ ಟೈಯರ್ ನಡಿ ಜಲ್ಲಿ ಕಲ್ಲುಗಳು ಸಿಲುಕಿ ಆಯತಪ್ಪಿ ಬೀಳುತ್ತಿದ್ದು, ಹಲವಾರು ಸಣ್ಣಪುಟ್ಟ ಗಾಯಗಳೊಂದಿಗೆ ವಾಹನ ಚಾಲಕರು ಅಪಾಯದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಮಳೆ ಪ್ರಾರಂಭವಾದರೆ ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯ ಬದಿಯಲ್ಲಿರುವ ಜಲ್ಲಿಕಲ್ಲುಗಳು ಅಡ್ಡರಸ್ತೆಯ ಉದ್ದಕ್ಕೂ ಚದುರಿ ಇನ್ನಷ್ಟು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಕೂಡಲೇ ಎಚ್ಚೆತ್ತು ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆ ಯಿಂದ ಅಡ್ಡರಸ್ತೆಗೆ ತಿರುವಿನಲ್ಲಿ ಕನಿಷ್ಠ ಒಂದು ಪದರ ಡಾಮರೀಕರಣ ಮಾಡಿ ಸುಸ್ಥಿತಿಗೊಳಿಸಿದರೆ ಇನ್ನಷ್ಟು ಸಂಭಾವ್ಯ ಅಪಾಯದಿಂದ ಪಾರಾಗಬಹುದು. ಸಾರ್ವಜನಿಕರು ರಸ್ತೆಗೆಳಿದು ಪ್ರತಿಭಟಿಸುವ ಮೊದಲೇ ಈ ಅಪಾಯಕಾರಿ ಸ್ಥಿತಿಯಿಂದ ತಕ್ಷಣ ಸುರಕ್ಷತಾ ಕಾಮಗಾರಿ ನಡೆಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ತನ್ನ ಕರ್ತವ್ಯ ಪ್ರಜ್ಞೆ ಹಾಗೂ ಜವಾಬ್ದಾರಿಯನ್ನು ನಿರ್ವಹಿಸಿದರೆ ಒಳಿತು ಎಂದು ಸಾಣೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ತಿಳಿಸಿರುತ್ತಾರೆ.




Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News