ಉಳ್ಳಾಲ ಘಟಕದಿಂದ ಕಸಾಪ ಸಂಸ್ಥಾಪನಾ ದಿನಾಚರಣೆ

Update: 2024-05-06 15:13 GMT

ಕೊಣಾಜೆ: ಏಕೀಕರಣ ಹೋರಾಟದ ಸಂದರ್ಭದಲ್ಲಿ ಹರಿಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದಾಗಿಸುವ ಉದ್ದೇಶದಿಂದ ಹುಟ್ಟಿಕೊಂಡ ಸಂಘಟನೆ ಕನ್ನಡ ಸಾಹಿತ್ಯ ಪರಿಷತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ, ನಂಜುಂಡಯ್ಯ ಮೊದಲಾದ ಹಿರಿಯರ ಹೋರಾಟ, ಸಂಕಲ್ಪ ಶಕ್ತಿಯಿಂದ ರೂಪುಗೊಂಡ ಈ ಸಂಸ್ಥೆ ಕನ್ನಡಕ್ಕೆ ಕುಂದುಂಟಾ ದಾಗಲೆಲ್ಲ ಧ್ವನಿಯೆತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೇಳಿದರು.

ಅವರು ಸೋಮವಾರ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ವಿವಿಯ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಆಶಯ ಭಾಷಣ ಮಾಡಿದರು.

ಸಾಹಿತ್ಯ ಪರಿಷತ್ತು ಸ್ಥಾಪನೆ ಪೂರ್ವದಲ್ಲಿಯೇ ಧಾರವಾಡ ವಿದ್ಯಾವರ್ಧಕ ಸಂಘ ಸ್ಥಾಪನೆಗೊಂಡು ಆಲೂರು ವೆಂಕಟರಾ ಯರ ನೇತೃತ್ವದಲ್ಲಿ ಏಕೀಕರಣ ಹೋರಾಟ ಆರಂಭಗೊಂಡಿತು. ಆದರೆ ಸಾಹಿತ್ಯ ಪರಿಷತ್ತು ಸ್ಥಾಪನೆ ಹಾಗೂ ಮೈಸೂರು ವಿವಿಯ ಸ್ಥಾಪನೆ ಕನ್ನಡ ಹೋರಾಟಕ್ಕೆ ವಿಶೇಷ ಶಕ್ತಿ ತುಂಬಿತು ಎಂದರು.

ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಮಾತನಾಡಿ ಕನ್ನಡ ಭಾಷೆ, ನಾಡಿನ ರಕ್ಷಣೆಗೆ ಹುಟ್ಟಿಕೊಂಡ ಪರಿಷತ್ತು ಕನ್ನಡದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಮಾಡುವ ಹೋರಾಟ ತೀವ್ರಗೊಳ್ಳಬೇಕು. ಪರಿಷತ್ತು ಈ ಹೋರಾಟವನ್ನು ಕೈಗೆತ್ತಿಕೊಳ್ಳಬೇಕು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಕುತ್ತು: ಕುಂಬ್ಳೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಮಾತನಾಡಿ ಪರಿಷತ್ತು ಸ್ವಾಯತ್ತ ಸಂಸ್ಥೆ. ಸರಕಾರದ ಅನುದಾನ ಪಡೆಯುತ್ತಿದ್ದರೂ ಅದು ಸರಕಾರದ ಕೈಗೊಂಬೆಯಲ್ಲ. ಜನರ ಪ್ರತಿನಿಧಿಯಾಗಿ ಕನ್ನಡಕ್ಕೆ ತೊಂದರೆಯಾದಾಗ ಸರಕಾರವನ್ನು ಎಚ್ಚರಿಸುವ ಜವಾಬ್ದಾರಿಯುತ ಸಂಸ್ಥೆ. ಇಂದು ಕನ್ನಡ ಮಾಧ್ಯಮದ ಸರಕಾರಿ ಮತ್ತು ಅನುದಾನಿತ ಶಾಲೆಗಳು ಆತಂಕದಲ್ಲಿವೆ. ಉನ್ನತ ಶಿಕ್ಷಣದಲ್ಲಿ ಭಾಷಾಕಲಿಕೆಯಲ್ಲಿ ಎರಡು ವರ್ಷದಿಂದ ಒಂದೇ ವರ್ಷಕ್ಕೆ ಇಳಿಸುವ ಹುನ್ನಾರ ಡೀಮ್ಡ್ ಯುನಿವರ್ಸಿಟಿಗಳಲ್ಲಿ ಆರಂಭವಾಗಿದೆ. ಇದು ಅಪಾಯಕಾರಿ ಪ್ರವೃತ್ತಿ. ಭಾಷೆಯನ್ನು ಕಲಿತವರಿಗೆ ಸಿಗುವ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಕನ್ನಡದಲ್ಲಿ ಬಿ.ಇಡಿ ಕಲಿಯುವವರಿಗೆ ಇದರಿಂದ ಅವಕಾಶ ತಪ್ಪಿಹೋಗುತ್ತದೆ. ಖಾಸಗಿ ವಲಯದಲ್ಲಿ ಸದ್ದಿಲ್ಲದೇ ನಡೆಯುವ ಈ ಅಪಾಯಕಾರಿ ಕನ್ನಡ ವಿರೋಧಿ ನಡೆಯನ್ನು ಪ್ರತಿಭಟಿಸಬೇಕಿದೆ ಎಂದರು.

ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಕಸಾಪ ಪದಾಧಿಕಾರಿಗಳಾದ ಸುರೇಂದ್ರ ರೈ ಗ್ರಾಮಚಾವಡಿ, ರಾಧಾಕೃಷ್ಣ ರಾವ್, ರಹಮಾನ್ ಎ.ಕೆ ಉಪಸ್ಥಿತರಿದ್ದರು. ಉಳ್ಳಾಲ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಹರೇಕಳ ಸ್ವಾಗತಿಸಿದರು. ಕೋಶಾಧಿಕಾರಿ ದೇರಳಕಟ್ಟೆಯ ಕಂಪರ್ಟ್ಸ್ ಇನ್ ಮಾಲಿಕ ಲ.ಚಂದ್ರಹಾಸ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News