ತುಂಬೆ ನೀರಿನ ಕುಸಿತ ತಡೆಯಲು ದ.ಕ. ಜಿಲ್ಲಾಡಳಿತದಿಂದ ಯತ್ನ

Update: 2024-05-06 16:10 GMT

ಮಂಗಳೂರು: ಎಎಂಆರ್ ಡ್ಯಾಂನ ನೀರು ಹರಿಸಿ ತುಂಬೆ ಡ್ಯಾಂ ಮಟ್ಟ ಹೆಚ್ಚಿಸಿದರೂ ಕೂಡ ಕಳೆದೊಂದು ತಿಂಗಳಿನಿಂದ ತುಂಬೆ ಡ್ಯಾಂ ನೀರಿನ ಮಟ್ಟದಲ್ಲಿ ಇಳಿಕೆಯಾಗುತ್ತಲಿದೆ. ಹಾಗಾಗಿ ನೀರಿನ ಮಟ್ಟ ಕುಸಿತ ತಡೆಗಟ್ಟಲು ದ.ಕ.ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯಿಂದ ನಾನಾ ಕಸರತ್ತು ನಡೆಯುತ್ತಿದೆ.

ಸೋಮವಾರ ತುಂಬೆ ಡ್ಯಾಂ ಮಟ್ಟ 4.08 ಹಾಗೂ ಎಎಂಆರ್ ನೀರಿನ ಮಟ್ಟ 15.66 ಮೀಟರ್ ಇತ್ತು. ಕಳೆದ ಒಂದು ವಾರದಿಂದ ಈ 2 ಡ್ಯಾಂಗಳಲ್ಲಿ ಸರಾಸರಿ 0.10 ಮೀ ನೀರು ಇಳಿಕೆಯಾಗುತ್ತಿದೆ.

ಸಾಮಾನ್ಯವಾಗಿ 1 ದಿನದಲ್ಲಿ 10 ಸೆಂ.ಮೀ. ನೀರು ತುಂಬೆ ಡ್ಯಾಂನಲ್ಲಿ ಕಡಿಮೆಯಾಗುತ್ತದೆ. ಆದರೆ ಈಗ ಡ್ಯಾಂನ ಕೆಳ ಭಾಗದ ನೀರು ಪಂಪಿಂಗ್ ಮಾಡುವ ಕಾರಣದಿಂದ ಸದ್ಯ 7 ಸೆಂ.ಮೀ.ನಷ್ಟು ನೀರು ಕಡಿಮೆಯಾಗುತ್ತಿದೆ. ಮಂಗಳೂರು ಪಾಲಿಕೆ ಅಧಿಕಾರಿಗಳ ತಂಡ, ಸಿಬ್ಬಂದಿ ವರ್ಗವು ಶ್ರಮಿಸುತ್ತಿದೆ. ತುಂಬೆ ಡ್ಯಾಂನಲ್ಲಿ ಸದ್ಯ ಇರುವ ನೀರು ಮುಂದಿನ 20 ದಿನಕ್ಕೆ ಮಾತ್ರ ಬರಲಿದೆ. ಇದೀಗ ರೇಶನಿಂಗ್ ಮಾಡಿದ್ದರಿಂದ 40 ದಿನದವರೆಗೆ ಬಳಸಬಹುದು ಎಂಬುದು ಪಾಲಿಕೆ ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ಪಾಲಿಕೆಯಿಂದಲೇ ಟ್ಯಾಂಕರ್ ನೀರು ಪೂರೈಕೆ

ನಗರದಲ್ಲೀಗ ರೇಶನಿಂಗ್ ನೀರಿನ ಪೂರೈಕೆ ಚಾಲ್ತಿಯಲ್ಲಿದ್ದರೂ ಕೂಡ ಬಹುತೇಕ ಕಡೆ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಇದೆ. ಸುರತ್ಕಲ್, ಪಾಂಡೇಶ್ವರ ಸಹಿತ ಪೈಪ್‌ಲೈನ್‌ನಿಂದ ನೀರು ತಲುಪದ ಕೆಲವು ಪ್ರದೇಶಗಳಿಗೆ ಪ್ರತಿನಿತ್ಯ ಸುಮಾರು 7 ಟ್ಯಾಂಕರ್ 70 ಟ್ರಿಪ್‌ಗಳ ಮೂಲಕ ನೀರು ಪೂರೈಕೆಯಾಗುತ್ತಿದೆ.

ಬೇಸಗೆ ಮುಕ್ತಾಯದವರೆಗೆ ಕುಡಿಯುವ ನೀರಿನ ಕೊರತೆ ತಲೆದೋರದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತುಂಬೆ ನೀರಿನ ಮಟ್ಟ ಹೆಚ್ಚಿಸಲು ಹರೇಕಳ ಡ್ಯಾಂನಿಂದ ನೀರು ಪಂಪಿಂಗ್ ಮಾಡಲಾಗುತ್ತಿದೆ. ಮೇ 5ರಿಂದ 2 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಮನಪಾ ಆಯುಕ್ತ ಆನಂದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News