ಬಿಸಿಲ ಝಳದಲ್ಲೂ ಮಾವು, ಹಲಸು ಖರೀದಿ ಭರಾಟೆ: ಕದ್ರಿ ಪಾರ್ಕ್‌ನಲ್ಲಿ ಮೇಳಕ್ಕೆ ಚಾಲನೆ

Update: 2024-05-09 13:10 GMT

ಮಂಗಳೂರು, ಮೇ 9: ಬಿರು ಬೇಸಿಗೆಯ ನಡುವೆಯೇ ನಗರದ ಕದ್ರಿ ಪಾರ್ಕ್‌ನಲ್ಲಿ ದ.ಕ. ಜಿಲ್ಲಾಡಳಿತವು ಜಿ.ಪಂ. ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಮಾವು ಹಲಸು ಮೇಳದಲ್ಲಿ ಖರೀದಿ ಭರಾಟೆ ಬಿರುಸಾ ಗಿದೆ. ನೈಸರ್ಗಿಕವಾಗಿ ಹಣ್ಣಾಗಿಸಿದ ಹಣ್ಣುಗಳನ್ನೇ ಹೊಂದಿರುವ ಮೇಳಕ್ಕೆ ಗುರುವಾರ ಮಧ್ಯಾಹ್ನ ಅಧಿಕೃತವಾಗಿ ಚಾಲನೆ ನೀಡಲಾಯಿತಾದರೂ, ಅದಕ್ಕೂ ಮುಂಚಿತವಾಗಿಯೇ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.

ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಐದು ದಿನಗಳ ಕಾಲ ನಡೆಯಲಿರುವ ಮಾವು ಹಲಸು ಮೇಳಕ್ಕೆ ತಾವನೆ ನೀಡಿದ್ದು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಡಿ. ಮಂಜುನಾಥ್, ಸಹಾಯಕ ನಿರ್ದೇಶಕ ಪ್ರವೀಣ್, ಕದ್ರಿ ಪಾರ್ಕ್ ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಗನ್ನಾಥ್, ಜಿ.ಕೆ. ಭಟ್, ರಾಮ ಮುಗ್ರೋಡಿ ಮೊದಲಾದವರು ಉಪಸ್ಥಿತರಿದ್ದರು.

ರಾಮನಗರದ ವಿವಿಧ ಭಾಗಗಳ ರೈತರು ಸಾವಯವವಾಗಿ ಬೆಳೆದ ಮಾವು ಮತ್ತು ಹಲಸನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿದ್ದು, ಮೇ 13ರವರೆಗೆ ಮೇಳ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೇಳ ನಡೆಯಲಿದೆ. ಈಗಾಗಲೇ ಸುಮಾರು 10ಕ್ಕೂ ಅಧಿಕ ಮಳಿಗೆಗಳು ತೆರೆಯಲ್ಪಟ್ಟಿದ್ದು, ಅಲ್ಫೋನ್ಸೋ, ರತ್ನಗಿರಿ ಅಲ್ಫೋನ್ಸೋ, ಕಲಪಾಡಿ, ಚಿಟ್ಟೆ ಬಾದಾಮಿ, ಶುಗರ್ ಬೇಬಿ, ರಸಪೂರಿ, ಸರ್ವಋತು ಹಲಸಿನ ಹಣ್ಣು ಮೇಳದಲ್ಲಿದೆ.

15 ದಿನಗಳವರೆಗೂ ಕೆಡದ ಹಿಮಾ ಪಸಂದ್!

ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಬೃಹತ್ ಗಾತ್ರದ ಹಿಮಾ ಪಸಂದ್ ಮಾವು ಮರದಿಂದ ಬೇರ್ಪಟ್ಟ ಬಳಿಕ ಸುಮಾರು 15 ದಿನಗಳ ಕಾಲ ಕೆಡವುದಿಲ್ಲ. ಬಹುತೇಕವಾಗಿ ಈ ಮಾವೊಂದು ಒಂದು ಕೆಜಿಗೂ ಅಧಿಕ ತೂಕವನ್ನು ಹೊಂದಿರುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಮಲ್ಲಿಕಾ, ಅಲ್ಫೋನ್ಸೋ, ಬಾದಾಮಿ, ನೀಲಂ, ಆಮ್ರಪಾಲಿ, ರಸಪೂರಿ, ಬಂಗನಪಲ್ಲಿ(ಬೆನಿಶಾನ್), ಮೊದಲಾದವುಗಳು ವಿಭಿನ್ನ ರುಚಿ ಹಾಗೂ ಸುವಾಸನೆಯನ್ನು ಯನ್ನು ಹೊಂದಿರುತ್ತವೆ ಹಾಗೂ ಬೆಲೆಯಲ್ಲಿಯೂ ವ್ಯತ್ಯಾಸವಿರುತ್ತದೆ. ಮೇಳದ ಮಳಿಗೆಗಳಲ್ಲಿ ಮಾರಾಟವಾಗುವ ಮಾವು ತಳಿಗಳಿಗೆ ಸಾಮಾನ ದರವನ್ನು ಖಾತರಿಪಡಿಸಲಾಗಿದೆ. ಮಾತ್ರವಲ್ಲದೆ, ನೈಸರ್ಗಿಕವಾಗಿ ಮಾಗಿಸಿದ ಹಾಗೂ ಕಾರ್ಬೈಡ್ ಉಪಯೋಗಿಸಿ ಮಾಗಿಸಿದ ಹಣ್ಣು ಯಾವ ರೀತಿ ಇರುತ್ತದೆ ಎಂಬ ಬಗ್ಗೆಯೂ ಮಾವು ಪ್ರಿಯರಿಗೆ ಮೇಳದಲ್ಲಿ ಮಾಹಿತಿಯನ್ನು ನೀಡಲಾಗಿದೆ.

‘ಮೇಳನದಲ್ಲಿ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರವೇ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಂಗಳೂರಿನ ಜನರಿಗೆ ಉತ್ತಮ ಮಾವು ಹಲಸನ್ನು ನೀಡಬೇಕೆಂಬ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾ ಗಿರುವ ಕಾರಣ ಇಲ್ಲಿ ಹಣ್ಣುಗಳ ಗುಣಮಟ್ಟ ಮತ್ತು ದರವನ್ನು ಕೂಡಾ ಖಾತ್ರಿಪಡಿಸುವ ಕಾರ್ಯ ಮಾಡಲಾಗಿದೆ. ಸುಮಾರು 20 ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ಕ್ಯೂಆರ್ ಕೋಡ್ ಮೂಲಕ ಖರೀದಿಗೂ ಅವಕಾಶವಿದೆ.’

ಡಾ. ಆನಂದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ. ದ.ಕ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News