ಅಡಕೆ, ಬಾಳೆಗಿಡ ಕಡಿದು ನಾಶ ಮಾಡಿದ ಮಗಳು: ತಂದೆಯಿಂದ ದೂರು

Update: 2024-05-10 15:00 GMT

ಸುಳ್ಯ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ತಂದೆ ಮತ್ತು ಮಗಳ ನಡುವೆ ಜಗಳ ಉಂಟಾಗಿ ಸ್ವತಃ ಮಗಳೇ ತಂದೆಯ ಕೃಷಿ ತೋಟದ ಬಾಳೆ ಹಾಗೂ ಅಡಕೆ ಗಿಡಗಳನ್ನು ಕತ್ತರಿಸಿ ನಾಶ ಪಡಿಸಿ, ಕೃಷಿ ಯಂತ್ರಗಳನ್ನು ಹಾನಿಗೊಳಿಸಿದ್ದಾರೆ ಎನ್ನಲಾದ ಘಟನೆ ಸಂಪಾಜೆಯಲ್ಲಿ ನಡೆದಿದೆ.

ಸಂಪಾಜೆಯ ಗಡಿಕಲ್ಲಿನ ನಿವಾಸಿ ಇಬ್ರಾಹಿಂ ಮಾಸ್ತರ್ ಹಾಗೂ ಅವರ ಮಗಳು ಪೌಮ್ಯ ಎಂಬವರು ಸಂಪಾಜೆಯ ಗಡಿಕಲ್ಲಿ ನಲ್ಲಿ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದರು. ಇಬ್ಬರ ನಡುವೆ ಆಸ್ತಿ ವಿವಾದ ಇದ್ದ ಹಿನ್ನೆಲೆಯಲ್ಲಿ ಮಗಳು ತಂದೆಯ ಕೃಷಿ ತೋಟಕ್ಕೆ ಬಂದು ತೋಟದಲ್ಲಿ ಬಳಸುವ ಸ್ಪ್ರಿಂಕ್ಲರ್‍ಗಳನ್ನು ಹಾಗೂ ಬಾಳೆ ಮತ್ತು ಅಡಕೆ ಗಿಡಗಳನ್ನು ಕತ್ತರಿಸಿ ನಾಶ ಪಡಿಸಿ, ಕೊಟ್ಟಿಗೆಯಲ್ಲಿ ಶೇಖರಿಸಿಟ್ಟಿದ್ದ ಕಟ್ಟಿಗೆ ಮತ್ತು ತೆಂಗಿನಕಾಯಿ ಚೆಪ್ಪುಗಳಿಗೆ ಬೆಂಕಿಯನ್ನು ಕೊಟ್ಟಿದ್ದಾರೆ ಎಂದು ತಂದೆ ಇಬ್ರಾಹಿಂ ಮಾಸ್ತರ್ ದೂರು ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಮೇ 8 ರಂದು ಪೌಮ್ಯ ಕೂಡ ಸುಳ್ಯ ಪೊಲೀಸ್ ಠಾಣೆಯಲ್ಲಿ ತಂದೆ ಇಬ್ರಾಹಿಂ ಹಾಗೂ ತಾಯಿ ವಿರುದ್ಧ ದೂರು ನೀಡಿದ್ದು, ತಂದೆ ಮತ್ತು ತಾಯಿ ಮೇ 7ರಂದು ಸಂಜೆ ಕಾನೂನು ಬಾಹಿರವಾಗಿ ನನ್ನ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ನನ್ನನ್ನು ಅವಾಚ್ಯ ಶಬ್ಧಗಳಿಂದ ಬೈದು ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸರು ಇಬ್ಬರ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News