ದ.ಕ. ಜಿಲ್ಲೆಯ ಅಭಿವೃದ್ಧಿಗೆ ಸರಕಾರಕ್ಕೆ ಎಸ್‌ಡಿಪಿಐ ಹಕ್ಕೋತ್ತಾಯ ಸಲ್ಲಿಕೆ: ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಮಂಗಳೂರು: ಮುಂದಿನ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ಹತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಆಗ್ರಹಿಸಿದೆ.
ನಗರದ ಜಿಲ್ಲಾ ಎಸ್‌ಡಿಪಿಐ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್. ಎಸ್ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಸರಕಾರದ ಮಂಡಿಸಲಾಗಿರುವ ಹಕ್ಕೋತ್ತಾಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಭೇದ ಮರೆತು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
2025-26ನೇ ಸಾಲಿಗೆ ಕಲ್ಯಾಣ ರಾಜ್ಯ ನಿರ್ಮಾಣದ ಜನಪರವಾದ ‘ಜನತಾ ಬಜೆಟ್’ನ್ನು ರಾಜ್ಯ ಸರಕಾರ ಮಂಡಿಸ ಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ ಎಂದು ಅನ್ವರ್ ಸಾದಾತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಶ್ ಅಲಿ ಮತ್ತು ಕಾರ್ಯದರ್ಶಿ ಅಶ್ರಫ್ ತಲಪಾಡಿ, ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರು, ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಕಾರ್ಯದರ್ಶಿ ನಿಸಾರ್ ಮರವೂರು ಉಪಸ್ಥಿತರಿದ್ದರು.