×
Ad

ಕೆಎಸ್ಸಾರ್ಟಿಸಿ ವಿದ್ಯಾರ್ಥಿ ಬಸ್ ಪಾಸ್: ಅರ್ಜಿ ಆಹ್ವಾನ

Update: 2025-06-05 20:50 IST

ಮಂಗಳೂರು, ಜೂ.5: ಪ್ರಸಕ್ತ (2025-26ನೇ) ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕೆಎಸ್ಸಾರ್ಟಿಸಿ ಬಸ್‌ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ (https://sevasindhuservices.karnataka.gov.in/buspassservices) ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಕರ್ನಾಟಕ-ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರಕಾರದ ಆದೇಶದಂತೆ ರೂ.30 ಸೇವಾ ಶುಲ್ಕವನ್ನು ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಅವಕಾಶವಿರುತ್ತದೆ.

ವಿದ್ಯಾರ್ಥಿಗಳು ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸಲು ಘೋಷಣೆ ಫಾರ್ಮ್ (Declaration Form) ಸೇವಾಸಿಂಧು ತಂತ್ರಾಂಶದಲ್ಲಿ ಅಥವಾ ಕರಾರಸಾ ನಿಗಮದ ವೆಬ್‌ಸೈಟ್ https://ksrtc.karnataka.gov.in/studentpass ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಘೋಷಣೆ ಫಾರ್ಮನ್ನು ಭರ್ತಿಮಾಡಿ ಶಾಲಾ/ಕಾಲೇಜು ಮುಖ್ಯ ಶಿಕ್ಷಕರ ಪ್ರಾಂಶುಪಾಲರ ಸಹಿ ಮತ್ತು ಶಾಲಾ/ಕಾಲೇಜು ಮೊಹರಿನೊಂದಿಗೆ ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡಬೇಕು.

ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್‌ನ ಹೆಸರು/ವಿಳಾಸ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ವಿದ್ಯಾರ್ಥಿ ಬಸ್‌ಪಾಸುಗಳನ್ನು ಜೂ.2ರಿಂದ ನಿಗದಿತ ಕೌಂಟರ್‌ಗಳಲ್ಲಿ ವಿತರಿಸಲಾಗುತ್ತದೆ.

ಬಳಿಕ ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್‌ಗೆ ತೆರಳಿ ನಿಗದಿತ ಪಾಸಿನ ಶುಲ್ಕವನ್ನು ನಗದು ಪಾವತಿಸಿ ಪಾಸನ್ನು ಪಡೆಯಬಹುದು. ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿರುತ್ತದೆ. ನೆರೆ ರಾಜ್ಯದಲ್ಲಿ ವಾಸವಿದ್ದು ಕರ್ನಾಟಕ ರಾಜ್ಯದ ಶಾಲೆ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸು ಪಡೆಯುವ ಅಗತ್ಯವಿದೆ. ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ಗಡಿಭಾಗದ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಬಹುದು.

ಕೆಎಸ್ಸಾರ್ಟಿಸಿ ವ್ಯಾಪ್ತಿಯ ಪಾಸ್ ವಿತರಣಾ ಕೌಂಟರ್‌ಗಳ ವಿವರಗಳನ್ನು ವಿದ್ಯಾರ್ಥಿಗಳು ವೆಬ್‌ಸೈಟ್ https://ksrtc.karnataka.gov.in ನಲ್ಲಿ ಪರಿಶೀಲಿಸಬಹುದು ಎಂದು ಕೆಎಸ್ಸಾರ್ಟಿಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News