ದೇಶದಲ್ಲಿ ನಿಗದಿತ ಗುರಿಯ ಐದು ವರ್ಷ ಮುನ್ನವೇ ಪರಿಸರಸ್ನೇಹಿ ಮೂಲದಿಂದ ಶೇಕಡ 50 ವಿದ್ಯುತ್ ಉತ್ಪಾದನೆ
Photo:Rueters
ಹೊಸದಿಲ್ಲಿ: ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವಾಗಿರುವ 484.8 ಗಿಗಾವ್ಯಾಟ್ ಪೈಕಿ ಶೇಕಡ 50ರಷ್ಟು ವಿದ್ಯುತ್ತನ್ನು ಭಾರತ ಈಗ ಜೀವ್ಯವಶೇಷ (ಫಾಸಿಲ್) ಹೊರತಾದ ಮೂಲಗಳಿಂದ ಉತ್ಪಾದಿಸುತ್ತಿದೆ. ಈ ಮಹತ್ವದ ಮೈಲುಗಲ್ಲನ್ನು ಪ್ಯಾರೀಸ್ ಹವಾಮಾನ ಒಪ್ಪಂದದ ಅಡಿಯಲ್ಲಿ ನೀಡಿರುವ ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳ (ಎನ್‍ಡಿಸಿ) ನಿಗದಿತ ಗುರಿಯಿಂದ ಐದು ವರ್ಷ ಮುನ್ನವೇ ಸಾಧಿಸಲಾಗಿದೆ.
"ಹವಾಮಾನ ಪರಿಹಾರಗಳನ್ನು ಇಡೀ ವಿಶ್ವ ಎದುರು ನೋಡುತ್ತಿದ್ದರೆ ಭಾರತ ಅದಕ್ಕೆ ದಾರಿ ತೋರಿಸುತ್ತಿದೆ" ಎಂದು ಪುನರ್ಬಳಕೆ ಇಂಧನ ಖಾತೆ ಸಚಿವ ಪ್ರಹ್ಲಾದ್ ಜೋಶಿ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಭಾರತದ ಹಸಿರು ವರ್ಗಾಂತರದ ಮೂಲಕ ಸುಸ್ಥಿರ ಭವಿಷ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಕಾರಣ" ಎಂದು ಬಣ್ಣಿಸಿದ್ದಾರೆ.
ಮೋದಿಯವರು 2014ರಿಂದಲೇ ಸ್ವಚ್ಛ ಇಂಧನಕ್ಕೆ ಒತ್ತು ನೀಡುತ್ತಿದ್ದಾರೆ. 2015ರಲ್ಲಿ ಭಾರತ ಮೆಗಾವ್ಯಾಟ್ ಗಳಿಂದ ಗಿಗಾವ್ಯಾಟ್ ಗೆ ಮುನ್ನಡೆಯುವ ಮಂತ್ರವನ್ನು ನೀಡಿದ್ದರು. ಸ್ವಚ್ಛ ಇಂಧನ ಗುರಿಯನ್ನು 2000 ಮೆಗಾವ್ಯಾಟ್ ಗಳಿಂದ 2025ರ ಒಳಗಾಗಿ 175 ಗಿಗಾವ್ಯಾಟ್ ಗೆ ಹೆಚ್ಚಿಸುವ ಗುರಿ ಹಾಕಿಕೊಂಡಿದ್ದರು. 2021ರಲ್ಲಿ ಸಿಓ ಗ್ಲಾಸ್ಕೊದಲ್ಲಿ ನಡೆದ ಹವಾಮಾನ ಸಮಾವೇಶದಲ್ಲಿ ಭಾರತ 2030ರ ಒಳಗಾಗಿ 500 ಗಿಗಾವ್ಯಾಟ್ ವಿದ್ಯುತ್ತನ್ನು ಪುನರ್ಬಳಕೆ ಇಂಧನದಿಂದ ಉತ್ಪಾದಿಸುವ ಗುರಿಯನ್ನು ಘೋಷಿಸಿತು ಎಂದು ವಿವರಿಸಿದ್ದಾರೆ.
ಆ ಬಳಿಕ ಸರ್ಕಾರದ ನವೀಕರಿಸಬಹುದಾದ ಇಂಧನ ನೀತಿಯು ಕೇವಲ ಸೌರ ಅಥವಾ ಪವನ ವಿದ್ಯುತ್ತನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಈ ಮೊದಲು ಸ್ವಚ್ಛ ಇಂಧನದಿಂದ ಹೊರಗಿದ್ದ ಜಲವಿದ್ಯುತ್ ಯೋಜನೆಗಳನ್ನೂ ಇದರಡಿ ಸೇರಿಸಲು ಕ್ರಮ ಕೈಗೊಂಡಿತು. ವಿದ್ಯುತ್ ಭದ್ರತೆ, ಹವಾಮಾನ ಕ್ರಮ ಮತ್ತು ಸುಸ್ಥಿರ ಆರ್ಥಿಕ ಪ್ರಗತಿಯ ಬಗೆಗಿನ ಬದ್ಧತೆ ಮೂಲಕ ಇದನ್ನು ಸಾಧಿಸಲು ಉದ್ದೇಶಿಸಿತು.
ನವೀಕರಿಸಬಹುದಾದ ಮೂಲದ ವಿದ್ಯುತ್ ಪ್ರಮುಖ ಭಾಗವಾಗಿದ್ದರೆ, ಸಮಗ್ರ ಕಾರ್ಯತಂತ್ರದಲ್ಲಿ ಅಣುವಿದ್ಯುತ್, ಹಸಿರು ಜಲಜನಕ, ಜಿಯೋಥರ್ಮಲ್ ವಿದ್ಯುತ್ ಮತ್ತು ವಿಕಾಶೀಲ ತಂತ್ರಜ್ಞಾನದ ಬಳಕೆಯನ್ನು ಒಳಗೊಂಡಿದೆ. ಜೂನ್ ವೇಳೆಗೆ ಭಾರತದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 484.8 ಗಿಗಾವ್ಯಾಟ್ ಆಗಿದ್ದು, ದೊಡ್ಡ ಜಲವಿದ್ಯುತ್ ಯೋಜನೆಗಳು ಸೇರಿದಂತೆ ನವೀಕರಿಸಬಹುದಾದ ಮೂಲದಿಂದ ಉತ್ಪಾದನೆಯಾಗುವ ವಿದ್ಯುತ್ 234 ಗಿಗಾವ್ಯಾಟ್ ಆಗಿದೆ.