ಜನಪ್ರಿಯತೆಯನ್ನು ಬಯಸಬೇಡಿ : ವಿದಾಯ ಭಾಷಣದಲ್ಲಿ ನ್ಯಾಯಾಧೀಶರಿಗೆ ನ್ಯಾ.ಎ.ಎಸ್. ಓಕಾ ಕಿವಿಮಾತು
ನ್ಯಾ.ಎ.ಎಸ್. ಓಕಾ | PTI
ಹೊಸದಿಲ್ಲಿ: ನ್ಯಾಯಾಧೀಶರು ದೃಢವಾಗಿ ಮತ್ತು ಕಟ್ಟು ನಿಟ್ಟಾಗಿರಬೇಕು, ಎಂದಿಗೂ ಜನಪ್ರಿಯರಾಗಲು ಪಯತ್ನಿಸಬಾರದು ಎಂದು ವಿದಾಯ ಭಾಷಣದಲ್ಲಿ ನ್ಯಾ.ಎ.ಎಸ್. ಓಕಾ ಹೇಳಿದರು.
ಓರ್ವ ನ್ಯಾಯಾಧೀಶನಾಗಿ ತಾನು ಕಠಿಣವಾಗಿ ವರ್ತಿಸಿರಬಹುದು, ಆದರೆ ಅದು ಸಂವಿಧಾನದಲ್ಲಿ ಸೂಚಿಸಲಾದ ತತ್ವಗಳನ್ನು ಎತ್ತಿ ಹಿಡಿಯಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮಾತ್ರವಾಗಿತ್ತು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಎ.ಎಸ್. ಓಕಾ ಅವರು ತನ್ನ ಕೆಲಸದ ಕೊನೆಯ ದಿನವಾದ ಶುಕ್ರವಾರ ಹೇಳಿದರು. ಅವರು ಶನಿವಾರ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಸಾಂವಿಧಾನಿಕ ತತ್ವಗಳನ್ನು ಎತ್ತಿ ಹಿಡಿಯುವ ತನ್ನ ಪ್ರಯತ್ನದಲ್ಲಿ ತಾನು ಕೆಲವು ವಕೀಲರನ್ನು ಮನ ನೋಯಿಸಿರಬಹುದು, ಆದರೆ ನ್ಯಾಯಾಧೀಶರಾದವರು ತುಂಬ ದೃಢರಾಗಿರಬೇಕು, ಕಟ್ಟುನಿಟ್ಟಾಗಿರಬೇಕು ಮತ್ತು ಯಾರನ್ನೂ ನೋಯಿಸಲು ಎಂದಿಗೂ ಹಿಂಜರಿಯಬಾರದು ಎಂದು ನ್ಯಾ.ಓಕಾ ಹೇಳಿದರು.
ನೀವು ಜನಪ್ರಿಯರಾಗಲು ನ್ಯಾಯಾಧೀಶರಾಗುತ್ತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರೋರ್ವರು ತನಗೆ ಕಿವಿಮಾತು ಹೇಳಿದ್ದನ್ನು ನೆನಪಿಸಿಕೊಂಡ ನ್ಯಾ.ಓಕಾ, ‘ಅವರ ಸಲಹೆಯನ್ನು ನಾನು ಸಂಪೂರ್ಣವಾಗಿ ಪಾಲಿಸಿದ್ದೆ ಮತ್ತು ಅದೊಂದೇ ಕಾರಣದಿಂದ ನಾನು ಕಠೋರನಾಗಿದ್ದೆ. ಸಂವಿಧಾನದಲ್ಲಿ ಹೇಳಲಾಗಿರುವ ತತ್ವಗಳನ್ನು ಎತ್ತಿ ಹಿಡಿಯಲು ನಾನು ಬಯಸಿದ್ದೆ ’ ಎಂದು ಹೇಳಿದರು.
ವಿಧ್ಯುಕ್ತ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಆಸೀನರಾಗಿದ್ದ ನ್ಯಾ.ಓಕಾ,ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಎತ್ತಿ ಹಿಡಿಯುವುದನ್ನು ಸರ್ವೋಚ್ಚ ನ್ಯಾಯಾಲಯವು ಮುಂದುವರಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
‘ನನ್ನಿಂದ ಮಾತುಗಳು ಹೊರಡುತ್ತಿಲ್ಲ. ನಾನು ಹೃದಯಾಂತರಾಳದಿಂದ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ನ್ಯಾಯಾಲಯದಲ್ಲಿಯ ನೆನಪುಗಳನ್ನು ನಾನು ಮೆಲುಕು ಹಾಕುತ್ತಿರುತ್ತೇನೆ’ ಎಂದು ಅವರು ಹೇಳಿದರು.
ಕರ್ತವ್ಯದ ಕೊನೆಯ ದಿನವಾದ ಶುಕ್ರವಾರ ನ್ಯಾ.ಓಕಾ 11 ತೀರ್ಪುಗಳನ್ನು ಪ್ರಕಟಿಸಿದರು.
ತಾಯಿ ನಿಧನರಾಗಿದ್ದರಿಂದ ಗುರುವಾರವಷ್ಟೇ ಮುಂಬೈಗೆ ತೆರಳಿದ್ದ ನ್ಯಾ.ಓಕಾ ತನ್ನ ಸೇವಾವಧಿಯ ಕೊನೆಯ ದಿನದ ಕರ್ತವ್ಯವನ್ನು ನಿರ್ವಹಿಸಲು ದಿಲ್ಲಿಗೆ ಮರಳಿದ್ದರು.
ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಷಿಯೇಷನ್ ತನಗಾಗಿ ಆಯೋಜಿಸಿದ್ದ ವಿದಾಯ ಸಮಾರಂಭದಲ್ಲಿ ನ್ಯಾ.ಓಕಾ ಅವರು ,ನಿವೃತ್ತಿಯನ್ನು ಹೊಂದುವ ನ್ಯಾಯಾಧೀಶರು ತಮ್ಮ ಕೊನೆಯ ದಿನ ಪೀಠದಲ್ಲಿ ಕುಳಿತು ಕಲಾಪಗಳನ್ನು ನಡೆಸದಿರುವ ಸಂಪ್ರದಾಯವನ್ನು ತಾನು ಒಪ್ಪುವುದಿಲ್ಲ ಎಂದು ಹೇಳಿದ್ದರು. ‘ನಿವೃತ್ತಿ ಎಂಬ ಪದವನ್ನು ನಾನು ದ್ವೇಷಿಸುತ್ತೇನೆ. ಕಳೆದ ಜನವರಿಯಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳ ವಿಚಾರಣೆಯನ್ನು ನಡೆಸಲು ನಿರ್ಧರಿಸಿದ್ದೆ’ಎಂದು ತಿಳಿಸಿದ್ದರು.
1960ರ ಮೇ 5ರಂದು ಜನಿಸಿದ್ದ ನ್ಯಾ.ಓಕಾ ಬಾಂಬೆ ವಿವಿಯಲ್ಲಿ ಕಾನೂನು ಶಿಕ್ಷಣದ ಬಳಿಕ 1983ರ ಜೂನ್ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದರು. ಥಾಣೆ ಜಿಲ್ಲಾ ನ್ಯಾಯಾಲಯದಲ್ಲಿ ತನ್ನ ತಂದೆ ಶ್ರೀನಿವಾಸ ಓಕಾ ಅವರ ಜೊತೆ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು.
1985-86ರಲ್ಲಿ ಬಾಂಬೆ ಹೈಕೋರ್ಟ್ನ ಮಾಜಿ ನ್ಯಾಯಾಧೀಶ ಹಾಗೂ ಮಾಜಿ ಲೋಕಾಯುಕ್ತ ವಿ.ಪಿ.ಟಿಪ್ನಿಸ್ ಅವರ ಚೇಂಬರ್ ಸೇರಿದ್ದ ಅವರು 2003 ,ಆ.29ರಂದು ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ಪದೋನ್ನತಿಯನ್ನು ಪಡೆದಿದ್ದರು. 2005ರ ನ.12ರಂದು ಅವರನ್ನು ಖಾಯಂ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು.
2019ರ ಮೇ 10ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನ್ಯಾ.ಓಕಾ 2021ರ ಆ.31ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಂಡಿದ್ದರು.